ಜಕಾರ್ತಾ, ಜ.10:- ಇಂಡೋ ನೇಷ್ಯಾದಲ್ಲಿ ನಿನ್ನೆ ಕಾಣೆಯಾಗಿದ್ದ ಬೋಯಿಂಗ್ 737-500 ವಿಮಾನ ಜಾವಾ ಸಮುದ್ರದಲ್ಲಿ ಪತ್ತೆಯಾಗಿದೆ. ಸುಮಾರು 75 ಅಡಿ ಆಳದಲ್ಲಿ ಬೋಯಿಂಗ್ ವಿಮಾನದ ಧ್ವಂಸವಾದ ಭಾಗಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.ಈಗಾಗಲೇ ವಿಮಾನ ಅಪಘಾತ ವಾಗಿರುವುದು ಗೊತ್ತಾಗಿದೆ. ಎಲ್ಲಿ ಬಿದ್ದಿತ್ತು ಎಂಬುದರ ಬಗ್ಗೆ ತಿಳಿದಿರಲಿಲ್ಲ. ಈಗ ಸಮುದ್ರದಲ್ಲಿ ಹುಡುಕಾಟ ನಡೆಸಿದ್ದು, ವಿಮಾನದ ಭಾಗಗಳನ್ನು ಕಂಡುಹಿಡಿಯಲಾಗಿದೆ ಎಂದು ಏರ್ ಚೀಫ್ ಮಾರ್ಷಲ್ ಹಾಡಿ ತಜಜಂತೊ ತಿಳಿಸಿದ್ದಾರೆ.
ವಿಮಾನದಲ್ಲಿ ಪ್ರಯಾಣಿಸಿದ ಕೆಲವರ ದೇಹದ ಭಾಗಗಳು, ಬಟ್ಟೆಯ ತುಂಡುಗಳು ಮತ್ತು ಲೋಹದ ತುಣುಕುಗಳನ್ನು ಸಮುದ್ರದಿಂದ ಹೊರತೆಗೆಯಲಾಗಿದೆ.ಸಮುದ್ರ ಶಾಂತಿಯುತವಾಗಿದ್ದು, ಸಮುದ್ರದೊಳಗಿರುವ ವಸ್ತುಗಳನ್ನು ಕಾಣಬಹುದಾಗಿದೆ. ಇದರಿಂದ ಹುಡುಕಾಟ ಸಕಾರಾತ್ಮಕವಾಗಿ ಮುಂದುವರಿದಿದೆ ಎಂದು ಹೇಳಿದ್ದಾರೆ.
ನೌಕಾಪಡೆಯ ಹಡಗಿನ ಸೋನಾರ್ ಉಪಕರಣಗಳು ವಿಮಾನದಿಂದ ಸಿಗ್ನಲ್ ಪತ್ತೆ ಮಾಡಿದ ನಂತರ ಶ್ರೀವಿಜಯ ಏರ್ ಫ್ಲೈಟ್ 182 ನಾಪತ್ತೆಯಾಗಿತ್ತು. ಇದರ ಬಗ್ಗೆ ಕೊನೆಯ ಸಂದೇಶ ಕೂಡ ಹೊಂದಿಕೆಯಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಈ ದುರಂತಕ್ಕೆ ಕಾರಣವೇನೆಂಬುದು ಕೂಡ ಸದ್ಯಕ್ಕೆ ತಿಳಿದುಬಂದಿಲ್ಲ. ಆದರೆ, ವಿಮಾನದಲ್ಲಿ ಪ್ರಯಾಣಿಸಿದ್ದ ಎಲ್ಲರೂ ಸಾವನ್ನಪ್ಪಿದ್ದಾರೆ. ಅವರಿಗೆ ಸಂತಾಪ ವ್ಯಕ್ತಪಡಿಸುತ್ತೇವೆ. ಸರ್ಕಾರ ಇದರ ಬಗ್ಗೆ ತನಿಖೆಗೆ ಆದೇಶಿಸಿದೆ. ರಾಷ್ಟ್ರೀಯ ಸಾರಿಗೆ ಸುರಕ್ಷತಾ ಸಮಿತಿ ಮುಂದಾಳತ್ವ ವಹಿಸಲಿದೆ.ಮೀನುಗಾರರು ಜಾವಾ ಪ್ರಾಂತ್ಯದಲ್ಲಿ ಸೋಟಕ ಸದ್ದು ಕೇಳಿಸಿತು ಎಂದು ಹೇಳಿದರು. ಅದರನ್ವಯ ರಕ್ಷಣಾ ಕಾರ್ಯಾಚರಣೆ ನಡೆಸಿದೆವು ಎಂದು ಹೇಳಿದ್ದಾರೆ.
ಶ್ರೀವಿಜಯ ಏರ್ ಫ್ಲೈಟ್ ಎಸ್‍ಜೆ-182ಗೆ ಸಂಬಂಸಿದಂತೆ ಜಕಾರ್ತಾದ ಮಾಧ್ಯಮ ವರದಿಗಳ ಬಗ್ಗೆ ನಮಗೆ ತಿಳಿದಿದೆ ಎಂದು ಬೋಯಿಂಗ್ ಹೇಳಿಕೆಯಲ್ಲಿ ತಿಳಿಸಿದೆ. ನಮ್ಮ ಆಲೋಚನೆಗಳು ಸಿಬ್ಬಂದಿ, ಪ್ರಯಾಣಿಕರು ಮತ್ತು ಅವರ ಕುಟುಂಬಗಳೊಂದಿಗೆ ಇವೆ. ನಾವು ನಮ್ಮ ವಿಮಾನಯಾನ ಗ್ರಾಹಕರೊಂದಿಗೆ ಸಂಪರ್ಕದಲ್ಲಿದ್ದೇವೆ ಮತ್ತು ಈ ಕಷ್ಟದ ಸಮಯದಲ್ಲಿ ಅವರನ್ನು ಬೆಂಬಲಿಸಲು ಸಿದ್ಧರಾಗುತ್ತೇವೆ ಎಂದು ಹೇಳಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಜನರು ಪ್ರಯಾಣಿಕರ ಪಟ್ಟಿಯಲ್ಲಿರುವವರ ಫೋಟೋಗಳು ಮತ್ತು ವೀಡಿಯೊಗಳೊಂದಿಗೆ ಫ್ಲೈಟ್ ಪ್ರಣಾಳಿಕೆಯನ್ನು ಪ್ರಸಾರ ಮಾಡಲು ಪ್ರಾರಂಭಿಸಿದರು. ಮಹಿಳೆಯೊಬ್ಬಳು ತನ್ನ ಮಕ್ಕಳೊಂದಿಗೆ ವಿಮಾನ ನಿಲ್ದಾಣದ ಮೂಲಕ ನಡೆಯುವಾಗ ವಿದಾಯ ಹೇಳುವುದನ್ನು ಒಂದು ವೀಡಿಯೊ ತೋರಿಸುತ್ತದೆ.
ಶ್ರೀವಿಜಯ ಏರ್‍ವೇಸ್ ಅಧ್ಯಕ್ಷ ನಿರ್ದೇಶಕ ಜೆಫರ್ಸನ್ ಇರ್ವಿನ್ ಜೌವೆನಾ ಮಾತನಾಡಿ, ಈ ವಿಮಾನವು 26 ವರ್ಷ ಹಳೆಯದು ಮತ್ತು ಈ ಹಿಂದೆ ಯುನೈಟೆಡ್ ಸ್ಟೇಟ್ಸ್‍ನಲ್ಲಿ ವಿಮಾನಯಾನ ಸಂಸ್ಥೆ ಬಳಸಿಕೊಂಡಿತ್ತು ಎಂದು ತಿಳಿಸಿದ್ದಾರೆ.
ನಿರ್ವಹಣೆ ಚೆನ್ನಾಗಿತ್ತು. ಕೆಟ್ಟ ಹವಾಮಾನದಿಂದ ವಿಮಾನ ಅಪಘಾತವಾಗಿರಬಹುದು ಎಂದು ಅವರು ಸಂಶಯ ವ್ಯಕ್ತಪಡಿಸಿದ್ದಾರೆ. ಈ ಹಿಂದೆ 2018ರ ಅಕ್ಟೋಬರ್‍ನಲ್ಲಿ ಲಯನ್ ಏರ್‍ನಿರ್ವಹಿಸುತ್ತಿದ್ದ ಬೋಯಿಂಗ್ 737 ಮ್ಯಾಕ್ಸ್ 8 ಜೆಟ್ ಜಕಾರ್ತಾದಿಂದ ಹೊರಟ ಕೆಲವೇ ನಿಮಿಷಗಳಲ್ಲಿ ಜಾವಾ ಸಮುದ್ರಕ್ಕೆ ನುಗ್ಗಿ ವಿಮಾನ ಅಪಘಾತವಾಗಿತ್ತು. ಅದರಲ್ಲಿದ್ದ 189 ಮಂದಿ ಜೀವ ಕಳೆದುಕೊಂಡಿದ್ದರು.