ನವದೆಹಲಿ: ಅಮೆರಿಕ ರಾಜಧಾನಿ ವಾಷಿಂಗ್ಟನ್ ಡಿಸಿಯಲ್ಲಿ ಕ್ಯಾಪಿಟಲ್ ಕಟ್ಟಡದ ಮೇಲೆ ಡೊನಾಲ್ಡ್ ಟ್ರಂಪ್ ಬೆಂಬಲಿಗರ ದಾಂಧಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಕಳವಳ ವ್ಯಕ್ತಪಡಿಸಿದ್ದಾರೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಎಲೆಕ್ಟೋರಲ್ ಕಾಲೇಜ್ ಮತಗಳನ್ನು ಎಣಿಸುವ ಮತ್ತು ಪ್ರಮಾಣೀಕರಿಸುವ ಪ್ರಕ್ರಿಯೆ ಸಾಗುತ್ತಿರುವ ನಡುವೆೇ ಭದ್ರತೆಯನ್ನು ಉಲ್ಲಂಘಿಸಿ ಕ್ಯಾಪಿಟಲ್ ಕಟ್ಟಡಕ್ಕೆ ಮುತ್ತಿಗೆ ಹಾಕಿದ ನೂರಾರು ಟ್ರಂಪ್ ಬೆಂಬಲಿಗರು ಪೊಲೀಸರ ವಿರುದ್ಧ ಘರ್ಷಣೆಗಿಳಿದು ಹಿಂಸಾಚಾರದಲ್ಲಿ ಭಾಗಿಯಾದರು. ಈ ಘಟನೆಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಪ್ರತಿಕ್ರಿಯೆ ನೀಡಿದ್ದು, ಗಲಭೆ ಮತ್ತು ಹಿಂಸಾಚಾರದ ಸುದ್ದಿಗಳನ್ನು ನೋಡಿ ಆಘಾತವಾಗಿದೆ ಎಂದು ಹೇಳಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ವಾಷಿಂಗ್ಟನ್ ಡಿಸಿಯಲ್ಲಿ ಗಲಭೆ ಮತ್ತು ಹಿಂಸಾಚಾರದ ಸುದ್ದಿಗಳನ್ನು ನೋಡಿ ಆಘಾತವಾಗಿದೆ. ಅಧಿಕಾರದ ಕ್ರಮಬದ್ಧ ಮತ್ತು ಶಾಂತಿಯುತ ವರ್ಗಾವಣೆ ಮುಂದುವರಿಯಬೇಕು. ಕಾನೂನುಬಾಹಿರ ಪ್ರತಿಭಟನೆಗಳ ಮೂಲಕ ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ಮಟ್ಟಹಾಕಲು ಸಾಧ್ಯವಿಲ್ಲ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಇನ್ನು ಗಲಭೆಗೆ ಸಂಬಂಧಿಸಿದಂತೆ ಭಾಷಣ ಮಾಡಿದ್ದ ಟ್ರಂಪ್ ತಮ್ಮ ಬೆಂಬಲಿಗರಲ್ಲಿ ಹಿಂಸಾಚಾರವನ್ನು ನಿಲ್ಲಿಸಿ ಮನೆಗೆ ಹೋಗುವಂತೆ ಮನವಿ ಮಾಡಿದ್ದಾರೆ. ಆದರೂ ತಮ್ಮ ಭಾಷಣದಲ್ಲಿ ಚುನಾವಣಾ ಅಕ್ರಮದ ಕುರಿತು ಮಾತನಾಡುವ ಮೂಲಕ ಟ್ರಂಪ್ ಮತ್ತೆ ಬೆಂಬಲಿಗರಿಗೆ ಪ್ರಚೋದನೆ ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಟ್ರಂಪ್ ನೀಡಿದ ಪ್ರಚೋಧನಾತ್ಮಕ ಭಾಷಣದ ಹಿನ್ನಲೆಯಲ್ಲಿ ಟ್ರಂಪ್ ಅವರ ಸಾಮಾಜಿಕ ಜಾಲತಾಣ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ. ಫೇಸ್ ಬುಕ್, ಟ್ವಿಟರ್, ಇನ್ ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಖಾತೆಯನ್ನು ತಾತ್ಕಾಲಿಕ ಅಮಾನತಿನಲ್ಲಿಡಲಾಗಿದೆ.