ಈ ಕಾನೂನುಗಳು ಸಂವಿಧಾನದ ಮೂಲ ಸ್ವರೂಪಕ್ಕೆ ಧಕ್ಕೆ ತರುತ್ತಿವೆ ಹಾಗೂ ಅವುಗಳು ಜಾತ್ಯತೀತತೆಯ ತತ್ವಕ್ಕೆ ವಿರುದ್ಧವಾಗಿರುವುದರಿಂದ ಅವುಗಳನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ ಸಲ್ಲಿಸಲಾಗಿರುವ ಹಲವಾರು ಅಪೀಲುಗಳು ವಿಚಾರಣೆಗೆ ಬಂದಾಗ ಸುಪ್ರೀಂ ಕೋರ್ಟ್ ನೋಟಿಸ್ ಜಾರಿಗೊಳಿಸಲು ತೀರ್ಮಾನಿಸಿದೆ.
ನವದೆಹಲಿ, ಜ.6: ಕಾನೂನುಬಾಹಿರ ಧಾರ್ಮಿಕ ಮತಾಂತರಗಳ ವಿರುದ್ಧ ಉತ್ತರಪ್ರದೇಶ ಹಾಗೂ ಉತ್ತರಾಖಂಡದಲ್ಲಿ ಜಾರಿಗೆ ತಂದಿರುವ ‘ಲವ್ ಜಿಹಾದ್’ ಕಾನೂನುಗಳ ಕಾನೂನುಬದ್ಧತೆಯನ್ನು ಸುಪ್ರೀಂಕೋರ್ಟ್ ಪರಿಶೀಲಿಸಲಿದೆ. ಈ ಬಗ್ಗೆ ಸುಪ್ರೀಂಕೋರ್ಟ್ ಬುಧವಾರ ಉತ್ತರಪ್ರದೇಶ ಮತ್ತು ಉತ್ತರಾಖಂಡ ಸರಕಾರಗಳಿಗೆ ನೋಟಿಸ್ ಜಾರಿ ಮಾಡಿದೆ.
ಕಾನೂನುಬಾಹಿರ ಧಾರ್ಮಿಕ ಮತಾಂತರಗಳನ್ನು ಪರಿಶೀಲಿಸಲು ಎರಡು ರಾಜ್ಯ ಸರಕಾರಗಳು ತಂದಿರುವ ಕಾನೂನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯ ನಂತರ ಸುಪ್ರೀಂಕೋರ್ಟ್ ಉತ್ತರಪ್ರದೇಶ ಹಾಗೂ ಉತ್ತರಾಖಂಡ ರಾಜ್ಯಗಳಿಗೆ ಬುಧವಾರ ನೋಟಿಸ್ ಜಾರಿ ಮಾಡಲಾಗಿದೆ. ಮುಂದಿನ ವಿಚಾರಣೆ ನಾಲ್ಕು ವಾರಗಳ ನಂತರ ನಡೆಯಲಿದ್ದು ಅಷ್ಟರೊಳಗಾಗಿ ಈ ಎರಡೂ ರಾಜ್ಯ ಸರಕಾರಗಳು ತಮ್ಮ ಪ್ರತಿಕ್ರಿಯೆ ನೀಡಬೇಕಿದೆ ಎಂದು ತಿಳಿದು ಬಂದಿದೆ.
ಈ ಕಾನೂನುಗಳು ಸಂವಿಧಾನದ ಮೂಲ ಸ್ವರೂಪಕ್ಕೆ ಧಕ್ಕೆ ತರುತ್ತಿವೆ ಹಾಗೂ ಅವುಗಳು ಜಾತ್ಯತೀತತೆಯ ತತ್ವಕ್ಕೆ ವಿರುದ್ಧವಾಗಿರುವುದರಿಂದ ಅವುಗಳನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ ಸಲ್ಲಿಸಲಾಗಿರುವ ಹಲವಾರು ಅಪೀಲುಗಳು ವಿಚಾರಣೆಗೆ ಬಂದಾಗ ಸುಪ್ರೀಂ ಕೋರ್ಟ್ ನೋಟಿಸ್ ಜಾರಿಗೊಳಿಸಲು ತೀರ್ಮಾನಿಸಿದೆ.
ಆರಂಭದಲ್ಲಿ ಈ ಅಪೀಲುಗಳನ್ನು ಕೈಗೆತ್ತಿಕೊಳ್ಳಲು ಹಿಂಜರಿದಿದ್ದ ಸುಪ್ರೀಂ ಕೋರ್ಟ್ ಅಪೀಲುದಾರರಿಗೆ ಹೈಕೋರ್ಟ್ ಕದ ತಟ್ಟಲು ಸೂಚಿಸಿತ್ತು. ಆದರೆ ಅಪೀಲುದಾರರಲ್ಲೊಬ್ಬರಾಗಿರುವ ಸಿಟಿಜನ್ಸ್ ಫಾರ್ ಜಸ್ಟಿಸ್ ಎಂಡ್ ಪೀಸ್ ಸಂಸ್ಥೆಯ ಪರ ವಕೀಲ ಸಿ ಯು ಸಿಂಗ್ ಪ್ರತಿಕ್ರಿಯಿಸಿ ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಹೊರತುಪಡಿಸಿ ಮಧ್ಯ ಪ್ರದೇಶ ಹಾಗೂ ಹಿಮಾಚಲ ಪ್ರದೇಶ ಕೂಡ ಇಂತಹ ಕಾನೂನು ಜಾರಿಗೊಳಿಸಿರುವುದರಿಂದ ಸುಪ್ರೀಂಕೋರ್ಟ್ ಈ ಕುರಿತು ಪರಿಶೀಲಿಸಬೇಕೆಂದು ಕೋರಿದ್ದರು.