janadhvani

Kannada Online News Paper

ಟ್ರಂಪ್ ಬೆಂಬಲಿಗರಿಂದ ಅಮೆರಿಕ ಸಂಸತ್ ಭವನಕ್ಕೆ ದಾಳಿ- ನಾಲ್ವರು ಸಾವು

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೆಂಬಲಿಗರು ಅಮೆರಿಕ ಸಂಸತ್ ಕಟ್ಟಡ ಅಮೆರಿಕ ಕ್ಯಾಪಿಟಲ್ ಮೇಲೆ ನಡೆಸಿದ ದಾಂಧಲೆ ಮತ್ತು ಗಲಭೆಯಲ್ಲಿ ಸಾವಿಗೀಡಾದವರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ. ಅಂತೆಯೇ ವಾಷಿಂಗ್ಟನ್ ನಲ್ಲಿ ಮುಂದಿನ 15 ದಿನಗಳ ಕಾಲ ತುರ್ತು ಪರಿಸ್ಥಿತಿ ಹೇರಲಾಗಿದೆ.

ಸಂಸತ್ ನಲ್ಲಿ ಎಲೆಕ್ಟೋರಲ್ ಮತಗಳನ್ನು ಎಣಿಸುವ ಮತ್ತು ಪ್ರಮಾಣೀಕರಿಸುವ ಪ್ರಕ್ರಿಯೆ ಸಾಗುತ್ತಿರುವ ಮಧ್ಯೆ ಭದ್ರತೆಯನ್ನು ಉಲ್ಲಂಘಿಸಿ ಕ್ಯಾಪಿಟೋಲ್ ಕಟ್ಟಡಕ್ಕೆ ನುಗ್ಗಿದ ನೂರಾರು ಪ್ರತಿಭಟನಾಕಾರರು ಧಾಂದಲೆ ನಡೆಸಿದರು. ತಡೆಯಲು ಮುಂದಾದ ಪೊಲೀಸರ ಜೊತೆ ಸಂಘರ್ಷವಾಗಿದ್ದು,ಪ್ರಕರಣದಲ್ಲಿ ಸಾವಿಗೀಡಾದವರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ ಎಂದು ವಾಷಿಂಗ್ಟನ್ ಡಿಸಿ ಪೊಲೀಸ್ ಮುಖ್ಯಸ್ಥ ರಾಬರ್ಟ್ ಕಾಂಟೀ ಅವರು ಹೇಳಿದ್ದಾರೆ. ಮೃತಪಟ್ಟವರ ಪೈಕಿ ಓರ್ವ ಮಹಿಳೆ ಮತ್ತು ಮೂವರು ಪುರುಷರು ಎಂದು ಹೇಳಲಾಗಿದೆ.

ಕ್ಯಾಪಿಟಲ್ ಕಟ್ಟಡದಲ್ಲಿ ದಾಂಧಲೆ ನಡೆಸಿದ ಟ್ರಂಪ್ ಬೆಂಬಲಿಗರನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗ ಮಾಡಿದರಾದರೂ, ದಾಂಧಲೆ ನಡೆಸಲೆಂದೇ ಸಿದ್ಧರಾಗಿ ಬಂದಿದ್ದ ಟ್ರಂಪ್ ಬೆಂಬಲಿಗರು ಕ್ಯಾಪಿಟಲ್ ಕಟ್ಟಡದಲ್ಲಿ ಬೆಂಕಿ ಹಚ್ಚಿ ವಿಕೃತಿ ಮೆರೆದರು. ಪೊಲೀಸರು ಹಾಕಿದ್ದ ಬ್ಯಾರಿಕೇಡ್ ಗಳನ್ನು ಮುರಿದು ಮುಂದೆ ನುಗ್ಗಲು ಪ್ರಯತ್ನಿಸಿದಾಗ ಪೊಲೀಸರು ಅವರನ್ನು ಚದುರಿಸಲು ಗುಂಡು ಹಾರಿಸಿದರು. ಈ ವೇಳೆ ಓರ್ವ ಮಹಿಳೆ ಮತ್ತು ಹಲವರಿಗೆ ಗುಂಡೇಟು ತಗುಲಿತ್ತು. ಈ ಪೈಕಿ ಮಹಿಳೆ ಮತ್ತು ಮೂರು ಪುರುಷರು ಸಾವನ್ನಪ್ಪಿದ್ದರು. ಅಂತೆಯೇ ಪ್ರತಿಭಟನಾಕಾರರನ್ನು ಚದುರಿಸಿದ ಬಳಿಕ ದುಷ್ಕರ್ಮಿಗಳ ಬಳಿ ಇದ್ದ ಪೈಪ್ ಬಾಂಬ್ ಗಳನ್ನು ವಶಪಡಿಸಿಕೊಂಡರು ಎಂದು ಪೊಲೀಸರು ಹೇಳಿದ್ದಾರೆ.

ಘಟನೆಯನ್ನು ಖಂಡಿಸಿರುವ ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬಿಡೆನ್, ಇದು ಅಮೆರಿಕ ಇತಿಹಾಸದ ಅತ್ಯಂತ ‘ಕರಾಳ ಕ್ಷಣ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಾಷಿಂಗ್ಟನ್ ನಲ್ಲಿ 15 ದಿನ ತುರ್ತು ಪರಿಸ್ಥಿತಿ ಘೋಷಣೆ
ಇನ್ನು ಗಲಭೆ ಪೀಡಿತ ವಾಷಿಂಗ್ಟನ್ ನಲ್ಲಿ ಮುಂದಿನ 15 ದಿನಗಳ ಕಾಲ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ.

ಕರ್ಫ್ಯೂ ಉಲ್ಲಂಘನೆ 52 ಜನರ ಬಂಧನ
ಯು.ಎಸ್. ಕ್ಯಾಪಿಟಲ್ ಮೇಲೆ ಗಲಭೆಕೋರರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 52 ಮಂದಿಯನ್ನು ಬಂಧಿಸಲಾಗಿದೆ. ಕರ್ಫ್ಯೂ ಉಲ್ಲಂಘಿಸಿದ್ದಕ್ಕಾಗಿ ಪೊಲೀಸರು 30 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

error: Content is protected !! Not allowed copy content from janadhvani.com