ನವದೆಹಲಿ, ಡಿ.12: ಕೃಷಿ ಕಾಯ್ದೆ ರದ್ದುಗೊಳಿಸುವಂತೆ ದೆಹಲಿಯ ಗಡಿಗಳಲ್ಲಿ ಮುಷ್ಕರ ನಡೆಸುತ್ತಿರುವ ರೈತರು ತಮ್ಮ ಈ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಲು ಮುಂದಾಗಿದ್ದಾರೆ. ನಾಳೆ ಹೆದ್ದಾರಿ ಬಂದ್ ಮಾಡಲು ಮುಂದಾಗಿರುವ ರೈತರು ಸೋಮವಾರದಿಂದ ಉಪವಾಸ ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ.
ಇಂದು ಸಂಜೆ ಸಭೆ ಬಳಿಕ ಮಾತನಾಡಿದ ರೈತ ಪ್ರತಿನಿಧಿಗಳು, ನಾವು ಸರ್ಕಾರದೊಂದಿಗೆ ಮಾತನಾಡಲು ಸಿದ್ಧವಾಗಿದ್ದೇವೆ. ಆದರೆ, ಮೊದಲಿ ಆ ಮೂರು ಕಾಯ್ದೆಗಳನ್ನು ರದ್ದುಪಡಿಸಬೇಕು ಎಂದು ತಿಳಿಸಿದರು. ಸಿಂಘುಗಡಿಯಲ್ಲಿ ಮಾತನಾಡಿದ ಸನ್ಯುಕ್ತಾ ಕಿಸಾನ್ ಆಂದೋಲನ ರೈತ ಮುಖಂಡ ಕಮಲ್ ಪ್ರೀತ್ ಸಿಂಗ್ ಪನ್ನು, ರಾಜಸ್ಥಾನದ ಶಹಜಹಾನಪುರದಿಂದ ನಾಳೆ ಬೆಳಗ್ಗೆ 11 ಗಂಟೆಗೆ ಸಾವಿರಾರು ರೈತರು ಟ್ರಾಕ್ಟರ್ ಮೆರವಣಿಗೆ ನಡೆಸಲು ಸಿದ್ದತೆ ನಡೆಸಿದ್ದಾರೆ. ಈ ಮೆರವಣಿಗೆ ದೆಹಲಿ ಮತ್ತು ಜೈಪುರ ಹೆದ್ಧಾರಿಗಳನ್ನು ದಿಗ್ಬಂದನಗೊಳಿಸಲಾಗುವುದು ಎಂದರು.
ಡಿಸೆಂಬರ್ 14ರಂದು ಬೆಳಗ್ಗೆ 8ಗಂಟೆಯಿಂದ ಸಂಜೆ 5ಗಂಟೆವರೆಗೆ ಸಿಂಘುಗಡಿಯಲ್ಲಿ ವೇದಿಕೆ ಹಂಚಿಕೊಳ್ಳಲಿರುವ ಎಲ್ಲಾ ರೈತ ಮುಖಂಡರು ಉಪವಾಸ ನಡೆಸಲಿದ್ದಾರೆ. ನಾವು ಮೂರು ಕೃಷಿ ಮಸೂದೆಗಳನ್ನು ರದ್ದುಪಡಿಸಬೇಕು ಎಂಬುದು ನಮ್ಮ ಬೇಡಿಕೆ. ನಾವು ತಿದ್ದುಪಡಿಯನ್ನು ಬಯಸಿಲ್ಲ. ಕೇಂದ್ರ ಸರ್ಕಾರ ನಮ್ಮ ಪ್ರತಿಭಟನೆ ತಡೆಯಲು ಪ್ರಯತ್ನಿಸುತ್ತಿದೆ. ಆದರೆ ನಾವು ಶಾಂತಿಯುತವಾಗಿ ನಮ್ಮ ಮುಷ್ಕರ ಮುಂದುವರೆಸುತ್ತೇವೆ ಎಂದರು.
ಡಿ. 14ರಂದು ದೇಶಾದ್ಯಂತ ಜಿಲ್ಲಾ ನ್ಯಾಯಾಧೀಶರ ಕಚೇರಿಗಳ ಮುಂದೆ ಸಾಂಕೇತಿಕ ಧರಣಿ ನಡೆಸಲು ನಿರ್ಧರಿಸಲಾಗಿದೆ. ಸರ್ಕಾರ ಮಾತುಕತೆ ನಡೆಸಲು ಬಯಸಿದರೆ ನಾವು ಸಿದ್ಧರಿದ್ದೇವೆ. ಆದರೆ ನಮ್ಮ ಪ್ರಮುಖ ಬೇಡಿಕೆ ಮೂರು ಕೃಷಿ ಕಾಯ್ದೆ ರದ್ದುಪಡಿಸುವುದು. ಅದರ ನಂತರವೇ ಇತರ ಬೇಡಿಕೆಗೆ ನಾವು ಮುಂದಾಗುತ್ತೇವೆ ಎಂದರು.
ನಾವು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದೇವೆ. ಆದರೆ ಸರ್ಕಾರ ಪ್ರತಿಭಟನಾಕಾರರನ್ನು ಪ್ರಚೋದಿಸಿ ಅವರನ್ನು ವಿಭಜಿಸುವ ಪ್ರಯತ್ನ ನಡೆಸುತ್ತಿದೆ ಎಂದು ಆರೋಪಿಸಿದರು. ಇದೇ ವೇಳೆ ರೈತರ ಪ್ರತಿಭಟನಾ ವೇದಿಕೆಯನ್ನು ದೆಹಲಿ ಗಲಭೆ ಪ್ರಕರಣದ ಆರೋಪಿಗಳಾದ ಶಾರ್ಜೀಲ್ ಇಮಾಮ್ ಮತ್ತು ಇತರರ ಪೋಸ್ಟರ್ ಕುರಿತು ಸ್ಪಷ್ಟನೆ ನೀಡಿದ ಅವರು, ಪ್ರತಿಭಟನೆ ನಡೆಸುತ್ತಿರುವ 32 ರೈತ ಒಕ್ಕೂಟಕ್ಕೂ ಅದಕ್ಕೂ ಸಂಬಂಧವಿಲ್ಲ ಎಂದರು.
ಡಿ.15ರ ನಂತರ ನಮ್ಮ ಸಭೆಗಳಿಗೆ ಕಾರ್ಮಿಕರು ಮತ್ತು ಮಹಿಳೆಯರು ಆಗಮಿಸುತ್ತಾರೆ ಎಂದು ಅವರು ತಿಳಿಸಿದರು.