janadhvani

Kannada Online News Paper

ಹಾಯ್‌ ಬೆಂಗಳೂರು ಪ್ರ.ಸಂಪಾದಕ ರವಿ ಬೆಳಗೆರೆ ನಿಧನ

ಬೆಂಗಳೂರು: ಹಿರಿಯ ಪತ್ರಕರ್ತ, ಹಾಯ್‌ ಬೆಂಗಳೂರು ಟ್ಯಾಬ್ಲಾಯ್ಡ್‌ನ ಪ್ರಧಾನ ಸಂಪಾದಕ ರವಿ ಬೆಳಗೆರೆ (62) ಶುಕ್ರವಾರ ಬೆಳಗಿನ ಜಾವ ಹೃದಯಾಘಾತದಿಂದ ನಿಧನರಾದರು.ಇವರು ಕಟ್ಟಿ ಬೆಳೆಸಿದ “ಹಾಯ್ ಬೆಂಗಳೂರು” ಹಾಗೂ “ಓ ಮನಸೆ” ಪತ್ರಿಕೆಗಳು ಲಕ್ಷಾಂತರ ಓದುಗರನ್ನು ಸೃಷ್ಟಿಸಿದೆ.

1995ರಲ್ಲಿ ಹಾಯ್‌ ಬೆಂಗಳೂರು ಆರಂಭಿಸಿದ್ದರು. ಕಾದಂಬರಿ, ಅನುವಾದ, ಕಥಾ ಸಂಕಲನ, ಅಂಕಣ ಬರಹಗಳು, ಜೀವನ ಕಥನ ಒಳಗೊಂಡ ಅವರ ಸುಮಾರು 70 ಪುಸ್ತಕಗಳು ಪ್ರಕಟಗೊಂಡಿವೆ.ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಜೀವಮಾನದ ಸಾಧನೆ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳು ಅವರಿಗೆ ಸಂದಿವೆ.

ಹಲವು ಯುವ ಬರಹಗಾರರಿಗೆ ಸ್ಪೂರ್ತಿಯಾಗಿದ್ದ ರವಿ ಬೆಳಗೆರೆ ಅವರ “ಹಾಯ್ ಬೆಂಗಳೂರು” ಪತ್ರಿಕೆಯ “ಖಾಸ್ ಬಾತ್” ಅಂಕಣಕ್ಕಾಗಿನ ಅವರ ಕಡೆಯ ಸಾಲುಗಳು ಹೀಗಿದ್ದವು-

“ಮನಸ್ಸನ್ನು 40 ದಾಟದಂತೆ ನೋಡಿಕೊಳ್ಳುವುದರಲ್ಲಿ ಸುಖವಿದೆ. ಬರವಣಿಗೆ ಎಂಥಾವರನ್ನೂ ಒಳ್ಳೆಯವರನ್ನಾಗಿ ಮಾಡುತ್ತದಾ? ಕನಸು ಏಕಾಂತದಲ್ಲಿ ಹುಟ್ಟಬೇಕು, ಜನಜಂಗುಳಿಯಲ್ಲಿ ಬೆಳೆಯಬೇಕು.”

ಬೆಳಗೆರೆ ಅವರ ಬರವಣಿಗೆಯನ್ನೇ ಸ್ಪೂರ್ತಿಯಾಗಿರಿಸಿಕೊಂಡಿದ್ದ ಅವರ ಲಕ್ಷಾಂತರ ಅಭಿಮಾನಿಗಳಿಗೆ ಅವರ ನಿಧನ ಅಪಾರ ಶೋಕಕ್ಕೆ ಕಾರಣವಾಗಿದೆ.

error: Content is protected !! Not allowed copy content from janadhvani.com