ನವದೆಹಲಿ: ಕೋವಿಡ್ ಲಾಕ್ ಡೌನ್ ಸಮಯದಲ್ಲಿ ದೇಶಕ್ಕೆ ಮರಳಿದ ಅನಿವಾಸಿಗಳನ್ನು ಗಲ್ಫ್ ಗೆ ವಾಪಸಾಗಿ ಕೆಲಸ ಪುನರಾರಂಭಿಸಲು ಸೌಲಭ್ಯ ಒದಗಿಸಬೇಕೆಂದು ಜಿಸಿಸಿ ದೇಶಗಳ ಪ್ರತಿನಿಧಿಗಳೊಂದಿಗಿನ ಚರ್ಚೆಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜಯಶಂಕರ್ ಪ್ರಸ್ತಾಪಿಸಿದ್ದಾರೆ.
ಪ್ರಸ್ತುತ ಭಾರತದಿಂದ ಕೊಲ್ಲಿಗೆ ಹಾರಾಟ ನಡೆಸುವ ವಿಮಾನಗಳಲ್ಲಿ ವಲಸಿಗರು ಕೆಲಸ ಸ್ಥಳಕ್ಕೆ ಮರಳಲು ಇರುವ ಅಡೆತಡೆಗಳನ್ನು ತೆಗೆದುಹಾಕುವಂತೆ ಅವರು ಜಿಸಿಸಿಗೆ ಕರೆ ನೀಡಿದರು. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ವಲಸಿಗರ ಆರೋಗ್ಯದತ್ತ ವಿಶೇಷ ಗಮನ ಹರಿಸಿದ ಜಿಸಿಸಿ ದೇಶಗಳಿಗೆ ಧನ್ಯವಾದ ಅರ್ಪಿಸಿದರು.
ಈ ದೇಶಗಳಲ್ಲಿನ ತುರ್ತು ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ತಜ್ಞರು ಮತ್ತು ಔಷಧಿಗಳನ್ನು ನೀಡಲು ಭಾರತ ಕಾಳಜಿ ವಹಿಸಿದ್ದನ್ನು ಜಯಶಂಕರ್ ನೆನಪಿಸಿಕೊಂಡರು.
ಜಿಸಿಸಿ ಪ್ರಧಾನ ಕಾರ್ಯದರ್ಶಿ ಡಾ.ನೈಫ್ ಎಂ ಅಲ್ಹಜ್ರಫ್, ಬಹ್ರೇನಿ ವಿದೇಶಾಂಗ ಸಚಿವ ಡಾ.ಅಬ್ದುಲ್ ಲತೀಫ್ ಬಿನ್ ರಾಶಿದ್ ಅಲ್ ಸಯಾನಿ, ಯುಎಇ ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಅನ್ವರ್ ಬಿನ್ ಮೊಹಮ್ಮದ್ ಗರ್ಗಶ್; ಸೌದಿ ಅರೇಬಿಯಾ, ಕುವೈತ್ ಮತ್ತು ಕತಾರ್‌ನ ಹಿರಿಯ ಪ್ರತಿನಿಧಿಗಳು ಸಹ ವಾರ್ಷಿಕ ರಾಜಕೀಯ ಚರ್ಚೆಯಲ್ಲಿ ಭಾಗವಹಿಸಿದ್ದರು.
ವಲಸಿಗರು ಮರಳಲು ಇರುವ ಅಡೆತಡೆಗಳನ್ನು ಶೀಘ್ರದಲ್ಲೇ ತೆಗೆದುಹಾಕಲಾಗುವುದು ಎಂದು ಜಿಸಿಸಿ ರಾಷ್ಟ್ರಗಳು ಭಾರತಕ್ಕೆ ಭರವಸೆ ನೀಡಿವೆ.