ನೆಲ್ಯಾಡಿ: ಜಿಲ್ಲೆಯಾದ್ಯಂತ ಸುರಿಯುತ್ತಿರುವ ವಿಪರೀತ ಮಳೆಯಿಂದ ಬೃಹದಾಕಾರದ ಮರದ ದಿಮ್ಮಿಗಳು ತೇಲಿಕೊಂಡು ಬಂದು ನೆಲ್ಯಾಡಿ ಸಮೀಪದ “ಮಡಂಜೊಡಿ” ಎಂಬಲ್ಲಿ ಅಣೆಕಟ್ಟಿನಲ್ಲಿ ಬ್ಲಾಕ್ ಆಗಿತ್ತು. ಪರಿಣಾಮ ಅಣೆಕಟ್ಟು ಮುಖಾಂತರ ಸುಗಮ ನೀರು ಸಂಚಾರಕ್ಕೆ ಅಡ್ಡಿಯಾಗಿ, ಅಣೆಕಟ್ಟಿನಲ್ಲಿ ನೀರಿನ ಮಟ್ಟ ಏರಿ ಸಮೀಪದ ತೋಟಗಳಿಗೆ ನೀರು ನುಗ್ಗಿ ಬೆಳೆ ನಾಶವಾಗುವ ಸಂಭವ ಹಾಗೂ ನಡೆದುಕೊಂಡು ಹೋಗುವ ದಾರಿ ಇಲ್ಲದಾಗಿತ್ತು.
ಕಂಗಾಲಾದ ಸ್ಥಳೀಯ ರೈತರು ಸಹಾಯಕ್ಕಾಗಿ ನೆಲ್ಯಾಡಿ ಎಸ್ ಡಿ ಪಿ ಐ ಪಾರುಗಾಣಿಕಾ (ರೆಸ್ಕ್ಯೂ) ತಂಡವನ್ನು ಸಂಪರ್ಕಿಸಿದಾಗ ಸುಮಾರು ಮೂವತ್ತರಷ್ಟು ಎಸ್.ಡಿ.ಪಿ.ಐ ಪಾರುಗಾಣಿಕಾ ಸದಸ್ಯರು ಮೂರು ದಿನಗಳ ಶ್ರಮದಿಂದ ಅಣೆಕಟ್ಟಿನಲ್ಲಿ ನೀರಿನ ಹರಿಯುವಿಕೆಗೆ ತಟಸ್ಥ ಒಡ್ಡುತ್ತಿದ್ದ ಬೃಹದಾಕಾರದ ಮರಗಳನ್ನು ಅಲ್ಲಿಂದ ತೆರವುಗೊಳಿಸಿ ಸಂಭಾವ್ಯ ಅಪಾಯವನ್ನು ತಪ್ಪಿಸಿ ರೈತರಿಗೆ ನೆರವಾದರು. ಪಾರುಗಾಣಿಕಾ ತಂಡಕ್ಕೆ ಉಪಹಾರದ ವ್ಯವಸ್ಥೆಯನ್ನು ಉಸ್ಮಾನ್ ಕೆ.ಕೆ ಕೊಲ್ಪೆ ಹಾಗೂ ಸ್ಥಳಿಯರಾದ ರವಿ ಎಂಬವರು ಮಾಡಿಕೊಟ್ಟರು.
ಎಸ್.ಡಿ.ಪಿ.ಐ ಪಾರುಗಾಣಿಕಾ ತಂಡದ ಸದಸ್ಯರ ಈ ಶ್ರಮವನ್ನು ಸ್ಥಳೀಯರು, ರೈತರು, ಅರಣ್ಯ ಇಲಾಖೆಯ ಅಧಿಕಾರಿಗಳು ಮುಕ್ತಕಂಠದಿಂದ ಶ್ಲಾಘಿಸಿದರು.