ನೆಲ್ಯಾಡಿ: ಇಲ್ಲಿನ ಕೊಕ್ಕಡ ಗ್ರಾಮ ಪಂಚಾಯತ್ ವ್ಯಾಪ್ತಿಯ 3ನೇ ವಾರ್ಡಿನ ಮಲ್ಲಿಗೆ ಮಜಲು ಸೌತಡ್ಕ, ಹಳ್ಳಿಂಗೇರಿ ರಸ್ತೆಯು ತೀರಾ ಹದಗೆಟ್ಟಿದ್ದು, ಗ್ರಾಮೀಣರು ನಡೆದಾಡಲು ಹರಸಾಹಸ ಪಡುವಂತಾಗಿದೆ.
ಪ್ರತೀ ವರ್ಷ ಮಳೆಗಾಲದಲ್ಲಿ ಇದೇ ದುರವಸ್ಥೆಯನ್ನು ಅನುಭವಿಸುತ್ತಿರುವ ಗ್ರಾಮ ನಿವಾಸಿಗಳು ಪಂಚಾಯತ್ ಅಧಿಕಾರಿಗಳಲ್ಲಿ ಶಾಶ್ವತ ಪರಿಹಾರಕ್ಕಾಗಿ ಮನವಿ ಸಲ್ಲಿಸಲಾಗಿದ್ದರೂ, ಅಧಿಕಾರಿಗಳು ನಿರ್ಲಕ್ಷ್ಯ ಮನೋಭಾವ ತೋರುತ್ತಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ.
ಸಣ್ಣ ಮಕ್ಕಳು, ವಯಸ್ಕರು ಸಮೇತವಿರುವ ಗ್ರಾಮ ನಿವಾಸಿಗಳು ನಡೆಯಲು ಕಷ್ಟಪಡುತ್ತಿರುವ ರಸ್ತೆಯ ಶೋಚನೀಯ ಅವಸ್ಥೆಯನ್ನು ಕಂಡೂ ಕಾಣದಂತೆ ನಟಿಸುತ್ತಿರುವ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಅಸಡ್ಡೆ ಮನೋಭಾವ ಖಂಡನೀಯ.
ವರ್ಷಂಪ್ರತಿ ಪಂಚಾಯತ್ ಚುನಾವಣೆ ಸಂದರ್ಭದಲ್ಲಿ ಮಾತ್ರ ಪ್ರತ್ಯಕ್ಷಗೊಳ್ಳುವ ಜನ ಪ್ರತಿನಿಧಿಗಳು ಕೂಡ ಗ್ರಾಮಸ್ಥರ ಸಂಕಷ್ಟಕ್ಕೆ ಸ್ಪಂದಿಸದಿರುವುದು ವಿಷಾದನೀಯ.
ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಪರಿಹಾರವನ್ನು ಒದಗಿಸಿಕೊಟ್ಟು, ಗ್ರಾಮಸ್ಥರ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸುವಂತೆ ನಾಗರಿಕರು ಮನವಿ ಮಾಡಿದ್ದಾರೆ.