ಮೂಲ್ಕಿ,ಆ.3: ಇಲ್ಲಿನ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರೋಗಿಯೊಬ್ಬರಿಗೆ ಚಿಕಿತ್ಸೆ ನೀಡಲು ನಿರಾಕರಿಸಿದ್ದರಿಂದ ರೋಗಿಯನ್ನು ಕರೆತಂದ ಸಮಾಜ ಸೇವಕರೇ ಆಸ್ಪತ್ರೆಯ ಮುಂದೆ ರೋಗಿಯನ್ನು ಮಲಗಿಸಿ ಪ್ರತಿಭಟನೆ ನಡೆಸಿದ ನಂತರ ಚಿಕಿತ್ಸೆ ನೀಡಲು ಮುಂದಾದ ಘಟನೆ ಇಂದು ಸಂಜೆ ನಡೆದಿದೆ.
ಪಕ್ಷಿಕೆರೆ ಹೊಸಕಾಡು ನಿವಾಸಿ ಧರ್ಮ ಶೆಟ್ಟಿಗಾರ್(52) ಎಂಬವರು ಅಸ್ವಸ್ಥರಾದುದರಿಂದ ಅವರನ್ನು ಸ್ಥಳೀಯ ಸಮಾಜ ಸೇವಕರಾದ ಮಯ್ಯದ್ದಿ ಮತ್ತು ಜಾಕ್ಸನ್ ಎಂಬುವರು ಕೆಮ್ರಾಲ್ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ. ಅಲ್ಲಿಂದ ನೇರವಾಗಿ ಹೆಚ್ಚಿನ ಚಿಕತ್ಸೆಗೆ ಮೂಲ್ಕಿ ಆಸ್ಪತ್ರೆಗೆ ದಾಖಲಿಸುವಂತೆ ತಿಳಿಸಿದ್ದರಿಂದ ರೋಗಿಯನ್ನು ಕರೆದುಕೊಂಡು ಬಂದಾಗ ವೈದ್ಯರು ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ ಎನ್ನಲಾಗಿದೆ
ರೋಗಿಯನ್ನು ಕೋವಿಡ್ ಪರೀಕ್ಷೆ ಮಾಡಿಸಿ ಎಂದು ಸಲಹೆ ನೀಡಿ ಅದರ ವರದಿ ನೆಗೆಟಿವ್ ಬಂದರೂ ವೈದ್ಯರು ಆಸ್ಪತ್ರೆಗೆ ದಾಖಲಿಸಲು ನಿರಾಕರಿಸಿ ಮಂಗಳೂರಿನ ವೆನ್‍ಲಾಕ್‍ಗೆ ದಾಖಲಿಸಿ ಎಂದು ಹೇಳಿದ್ದರಿಂದ ಆಸ್ಪತ್ರೆಯ ಆವರಣದಲ್ಲಿಯೇ ರೋಗಿಯನ್ನು ಮಲಗಿಸಿ ಪ್ರತಿಭಟಿಸಿದ್ದಾರೆ. ಪ್ರತಿಭಟನೆಗ ಮಣಿದು ಕೊನೆಗೆ ಚಿಕತ್ಸೆಗೆ ದಾಖಲಸಿ ಕೊಂಡಿದ್ದಾರೆ.
ಈ ಬಗ್ಗೆ ಮಯ್ಯದಿ ಪ್ರತಿಕ್ರಿಯಿಸಿ, ಮೂಲ್ಕಿ ಆಸ್ಪತ್ರೆಯಲ್ಲಿ ಇಂತಹ ಘಟನೆಗಳು ಆಗಾಗ ಮರುಕಳಿಸುತ್ತಿದ್ದು ಬಡವರ್ಗದ ಜನರು ಚಿಕಿತ್ಸೆಗಾಗಿ ತೆರಳಿದರೆ ಪ್ರತಿಯೊಬ್ಬರನ್ನು ಕೊರೋನಾ ರೋಗಿ ಎಂದು ತಿಳಿದು ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆ ನೀಡಲು ವೈದ್ಯರು ನಿರಾಕರಿಸುತ್ತಿದ್ದಾರೆ. ಇದೇ ರೀತಿ ಮುಂದುವರಿದಲ್ಲಿ ಆಸ್ಪತ್ರೆಯ ಎದುರು ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದ್ದಾರೆ.
✍️ಅದ್ದಿ ಬೊಳ್ಳೂರು