janadhvani

Kannada Online News Paper

ಉಳ್ಳಾಲ: ಚೆಂಬುಗುಡ್ಡೆಯಲ್ಲಿ ಕೋವಿಡ್-19 ಸಾಮೂಹಿಕ ಮಾದರಿ ಸಂಗ್ರಹ

ಮಂಗಳೂರು,ಏ.13: ಉಳ್ಳಾಲ ನಗರಸಭೆ ವ್ಯಾಪ್ತಿಯ ಚೆಂಬುಗುಡ್ಡೆ ಪರಿಸರದ ವ್ಯಕ್ತಿಯೊಬ್ಬರಲ್ಲಿ ಇತ್ತೀಚೆಗೆ ಕೊರೋನ ಸೋಂಕು ಕಂಡುಬಂದಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸ್ಥಳೀಯರಿಗೆ ಕೋವಿಡ್-19 ಪರೀಕ್ಷೆಗೆ ಚೆಂಬುಗುಡ್ಡೆ ಮಸೀದಿ ಆವರಣದಲ್ಲಿ ಸೋಮವಾರ ವ್ಯವಸ್ಥೆ ಕಲ್ಪಿಸಲಾಗಿತ್ತು. ಸೋಮವಾರ ಬೆಳಿಗ್ಗೆಯಿಂದ 100 ಜನರ ಗಂಟಲಿನ ದ್ರವದ ಮಾದರಿಗಳನ್ನು ಸಂಗ್ರಹಿಸಲಾಗಿತ್ತು.

ದೆಹಲಿಯಲ್ಲಿ ನಡೆದ ತಬ್ಲೀಗ್‌ ಸಮಾವೇಶಕ್ಕೆ ಹೋಗಿ ಬಂದಿದ್ದ ವ್ಯಕ್ತಿಯಲ್ಲಿ ಕೋವಿಡ್‌–19 ಸೋಂಕು ಕಾಣಿಸಿಕೊಂಡಿತ್ತು. ಅವರು ಚೆಂಬುಗುಡ್ಡೆಯಲ್ಲಿ ಓಡಾಡಿರುವುದಾಗಿ ಮಾಹಿತಿ ನೀಡಿದ್ದು, ಈ ಕಾರಣದಿಂದ ಆ ಪ್ರದೇಶದಲ್ಲಿ ಸಾಮೂಹಿಕ ಮಾದರಿ ಸಂಗ್ರಹಿಸಿ, ಪರೀಕ್ಷೆ ನಡೆಸಲು ನಿರ್ಧರಿಸಲಾಗಿತ್ತು.

ಧೈರ್ಯ ತುಂಬಿದ ಶಾಸಕ ಯು.ಟಿ. ಖಾದರ್‌: ಜಿಲ್ಲಾ ಮಟ್ಟದ ವೈದ್ಯರ ತಂಡ ಸೋಮವಾರ ಬೆಳಿಗ್ಗೆ ಚೆಂಬುಗುಡ್ಡೆಯಲ್ಲಿ ಮಾದರಿ ಸಂಗ್ರಹಕ್ಕೆ ಸಿದ್ಧತೆ ಮಾಡಿಕೊಂಡಿತ್ತು. ಆದರೆ, ಕೆಲವು ಸಮಯದವರೆಗೆ ಯಾರೊಬ್ಬರೂ ಮಾದರಿ ನೀಡಲು ಬರಲಿಲ್ಲ. ಕೊರೊನಾ ವೈರಸ್‌ ಸೋಂಕು ತಗಲುವ ಭೀತಿಯಿಂದ ಜನರು ಮಾದರಿ ನೀಡಲು ಹಿಂದೇಟು ಹಾಕಿದ್ದರು.

ಮಾದರಿ ಸಂಗ್ರಹ ಕೇಂದ್ರಕ್ಕೆ ಬಂದ ಸ್ಥಳೀಯ ಶಾಸಕ ಯು.ಟಿ.ಖಾದರ್‌, ದಕ್ಷಿಣ ಕನ್ನಡ ಜಿಲ್ಲಾ ವಕ್ಫ್‌ ಸಲಹಾ ಸಮಿತಿ ಅಧ್ಯಕ್ಷ ಕಣಚೂರು ಮೋನು, ಸ್ಥಳೀಯ ಗ್ರಾಮ ಪಂಚಾಯಿತಿ ಚುನಾಯಿತ ಸದಸ್ಯರು ಮತ್ತು ಕೆಲವು ಮುಖಂಡರು ಸ್ವಯಂಪ್ರೇರಿತರಾಗಿ ಮಾದರಿಗಳನ್ನು ನೀಡಿದರು. ಆ ಬಳಿಕ ಜನರು ಧೈರ್ಯದಿಂದ ಬಂದು ಪರೀಕ್ಷೆಗೆ ಗಂಟಲಿನ ದ್ರವದ ಮಾದರಿ ನೀಡಿದರು.

‘ನಾವು ಸ್ಥಳಕ್ಕೆ ಹೋಗುವವರೆಗೆ ಒಬ್ಬರೂ ಮಾದರಿ ನೀಡಲು ಬಂದಿರಲಿಲ್ಲ. ಜನರಲ್ಲಿ ಭಯ ಇತ್ತು. ಅದನ್ನು ಹೋಗಲಾಡಿಸಲು ನಾನೇ ಸ್ವತಃ ಮಾದರಿ ನೀಡಿದೆ. ನನ್ನ ಜೊತೆಗಿದ್ದ ಹಲವರು ಮಾದರಿ ನೀಡಿದರು. ಭಯಪಡದಂತೆ ಜನರಲ್ಲಿ ಮನವಿ ಮಾಡಿಕೊಂಡೆ. ಆ ನಂತರ ಜನರು ಮಾದರಿ ಸಂಗ್ರಹ ಕೇಂದ್ರಕ್ಕೆ ಬಂದು, ಗಂಟಲಿನ ದ್ರವವನ್ನು ಪರೀಕ್ಷೆಗೆ ನೀಡಿದರು’ ಎಂದು ಶಾಸಕ ಯು.ಟಿ.ಖಾದರ್‌ ಅವರು ತಿಳಿಸಿದರು.

error: Content is protected !! Not allowed copy content from janadhvani.com