janadhvani

Kannada Online News Paper

ಕನ್ನಡಿಗರಿಗೆ ಹೆಚ್ಚು ಉದ್ಯೋಗ: ವರದಿ ಜಾರಿಗೆ ವಿಳಂಬ- ಫೆ.13ರಂದು ಕರ್ನಾಟಕ ಬಂದ್

ಬೆಂಗಳೂರು,ಫೆ. 07: ರಾಜ್ಯದಲ್ಲಿ ಕನ್ನಡಿಗರಿಗೆ ಹೆಚ್ಚು ಉದ್ಯೋಗ ಕೊಡಬೇಕೆಂದು ಹೇಳುವ ಸರೋಜಿನಿ ಮಹಿಷಿ ವರದಿಯನ್ನು ಜಾರಿಗೊಳಿಸಲು ರಾಜ್ಯ ಸರ್ಕಾರ ವಿಳಂಬ ಮಾಡುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿ ವಿವಿಧ ಕನ್ನಡಪರ ಸಂಘಟನೆಗಳು ಫೆಬ್ರವರಿ 13ರಂದು ಕರ್ನಾಟಕ ಬಂದ್ಗೆ ಕರೆ ಕೊಟ್ಟಿವೆ. ರಾಜ್ಯದ ಪ್ರತಿಯೊಬ್ಬರು ಕೂಡ ಸ್ವಯಂಪ್ರೇರಿತವಾಗಿ ಬಂದ್ಗೆ ಸಹಕಾರ ನೀಡುವಂತೆ ಸಂಘಟನೆಗಳು ಮನವಿ ಮಾಡಿಕೊಂಡಿವೆ.

ಕನ್ನಡ ಚಳವಳಿಯ ನಾಗೇಶ್ ನೇತೃತ್ವದಲ್ಲಿ 500ಕ್ಕೂ ಹೆಚ್ಚು ಸಂಘಟನೆಗಳು ಬಂದ್ಗೆ ಬೆಂಬಲ ನೀಡಿವೆ. ಜಯ ಕರ್ನಾಟಕ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಲಾರಿ ಮಾಲೀಕರ ಸಂಘ, ಸಿಐಟಿಯು ಮೊದಲಾದ ಸಂಘಟನೆಗಳೂ ಫೆ. 13ರ ಬಂದ್ಗೆ ಬೆಂಬಲ ಸೂಚಿಸಿವೆ.

ಸರೋಜಿನಿ ಮಹಿಷಿ ಸಮಿತಿಯ ವರದಿ ವಿಚಾರದಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ. ತತ್ಕ್ಷಣವೇ ವರದಿ ಅನುಷ್ಠಾನ ಮಾಡಬೇಕೆಂದು ಕನ್ನಡಪರ ಸಂಘಟನೆಗಳು ಆಗ್ರಹಿಸಿವೆ.

ಏನಿದು ಸರೋಜಿನಿ ಮಹಿಷಿ ವರದಿ?

1983ರಲ್ಲಿ ರಾಮಕೃಷ್ಣ ಹೆಗಡೆ ನೇತೃತ್ವದ ಸರ್ಕಾರವು ಕರ್ನಾಟಕದಲ್ಲಿ ಕನ್ನಡಿಗರಿಗೆ ಎಷ್ಟು ಪ್ರಾಶಸ್ತ್ಯ ಸಿಗಬೇಕೆಂದು ತಿಳಿಸಲು ಮಾಜಿ ಕೇಂದ್ರ ಸಚಿವೆ ಸರೋಜಿನಿ ಮಹಿಷಿ ನೇತೃತ್ವದ ಸಮಿತಿ ರಚಿಸಿತ್ತು. ಗೋಪಾಲಕೃಷ್ಣ ಅಡಿಗ ಮೊದಲಾದ 4 ಮಂದಿ ಇದ್ದ ಈ ಸಮಿತಿ 1986ರಲ್ಲಿ ಅಂತಿಮ ವರದಿ ಸಲ್ಲಿಸಿತು. ಒಟ್ಟು 58 ಶಿಫಾರಸುಗಳನ್ನು ಮಾಡಿತು. ಇದರಲ್ಲಿ ರಾಜ್ಯ ಸರ್ಕಾರ 40 ಶಿಫಾರಸುಗಳನ್ನು ಒಪ್ಪಿಕೊಂಡಿದೆ. ಉಳಿದ ಹಲವು ಪ್ರಮುಖ ಶಿಫಾರಸುಗಳು ಇನ್ನೂ ಗಗನಕುಸುಮವಾಗಿಯೇ ಉಳಿದಿವೆ.

ರಾಜ್ಯದ ಸರ್ಕಾರಿ ಉದ್ಯೋಗದಲ್ಲಿ ಕನ್ನಡಿಗರಿಗೆ ಶೇ. 100ರಷ್ಟು ಮೀಸಲಾತಿ ಕೊಡಬೇಕು. ಖಾಸಗಿ ಕಂಪನಿಗಳಲ್ಲೂ ಮೀಸಲಾತಿ ನಿರ್ದಿಷ್ಟಪಡಿಸಿ ಈ ವರದಿ ಶಿಫಾರಸುಗಳನ್ನು ಮಾಡಿದೆ. ಸರೋಜಿನಿ ಮಹಿಷಿ ವರದಿಯನ್ನು ಸಂಪೂರ್ಣವಾಗಿ ಜಾರಿ ಮಾಡಬೇಕೆಂಬುದು ದಶಕಗಳಿಂದ ಕನ್ನಡ ಸಂಘಟನೆಗಳು ಹೋರಾಟ ಮಾಡಿಕೊಂಡು ಬಂದಿವೆ.

ಇನ್ನು, ಯಡಿಯೂರಪ್ಪ ಸರ್ಕಾರ ರಾಜ್ಯದಲ್ಲಿ ಕನ್ನಡಿಗರಿಗೆ ಶೇ. 75ರಷ್ಟು ಉದ್ಯೋಗ ಮೀಸಲಾತಿ ಕೊಡುವ ಕಾನೂನು ಜಾರಿಗೊಳಿಸಲು ಚಿಂತನೆ ನಡೆಸಿದೆ.

error: Content is protected !! Not allowed copy content from janadhvani.com