ಮಂಗಳೂರು(ಜ. 21): ರಾಜ್ಯದಲ್ಲಿ ತಲ್ಲಣ ಸೃಷ್ಟಿಸಿದ್ದ ಮಂಗಳೂರು ಬಾಂಬ್ ಪತ್ತೆ ಪ್ರಕರಣ ಅಣಕು ಪ್ರದರ್ಶನದಂತೆ ಇದೆ. ಇದು ಉದ್ದೇಶಪೂರ್ವಕವಾಗಿ ಜನರಲ್ಲಿ ಭಯಮೂಡಿಸಲು ನಡೆಸಿದ ಸಂಚಿನಂತೆ ಇದೆ ಎಂಬ ಸಂಶಯವನ್ನು ಮಾಜಿ ಸಿಎಂ ಕುಮಾರಸ್ವಾಮಿ ವ್ಯಕ್ತಪಡಿಸಿದ್ದಾರೆ.
ಉಳ್ಳಾಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಬ್ಬಿಣದ ಬಾಕ್ಸ್‌ನಲ್ಲಿ ಪಟಾಕಿಗೆ ತುಂಬುವ ಪೌಡರ್ ತುಂಬಿದ್ದರು ಎಂದು ಪತ್ರಿಕೆಗಳೇ ವರದಿ ಮಾಡಿವೆ. ಸುತ್ತ ತುಂಡಾಗಿದ್ದ ವಾಯರ್‌ಗಳಿದ್ದವು. ಸೋಮವಾರದ ಕಾರ್ಯಾಚರಣೆಯು ಬಾಂಬ್ ನಿಷ್ಕ್ರೀಯಗೊಳಿಸಲು ದೊಡ್ಡ ಕಂಟೈನರ್ ತಂದು, ಗಣರಾಜ್ಯೋತ್ಸವ, ಸ್ವಾತಂತ್ರ್ಯೋತ್ಸವದಲ್ಲಿ ನಡೆಸುವ ಅಣಕು ಪ್ರದರ್ಶನದಂತಿತ್ತು’ ಎಂದರು.
ಇದನ್ನು ನಿಷ್ಕ್ರಿಯಗೊಳಿಸಲು ಬೆಳಗ್ಗೆಯಿಂದ ಸಂಜೆಯವರೆಗೂ ಹರಸಾಹಸ ನಡೆಸಿದರು. ಅಲ್ಲದೇ ಇದಕ್ಕೆ ಸರಿಯಾದ ವ್ಯವಸ್ಥೆ ಇರಲಿಲ್ಲ. ಈ ರೀತಿ ಬಾಂಬ್ ನಿಷ್ಕ್ರಿಯ ಮಾಡಿದ್ದು, ಇದೇ ಮೊದಲು. ಅದರಲ್ಲಿ ಮುಖಕ್ಕೆ ಹಾಕಿಕೊಳ್ಳೋ ಪೌಡರ್ ಇತ್ತೋ ಏನೋ ತಿಳಿಯದು. ಬಾಂಬ್ ನಿಷ್ಕ್ರಿಯಗೊಳಿಸಲು ಪೊಲೀಸರು ಸಾಕಷ್ಟು ಶ್ರಮ ವಹಿಸಿದ್ದಾರೆ. ಅವರಿಗೆ ಮುಂದಿನ ದಿನಗಳಲ್ಲಿ ಬಹುಮಾನ ನೀಡಬೇಕಾಗುತ್ತದೆ ಎಂದು ಇದೇ ವೇಳೆ ಲೇವಡಿ ಮಾಡಿದರು.
‘ರಾಜ್ಯದಲ್ಲಿ ಇರುವುದು ವಿಶ್ವ ಹಿಂದೂ ಪರಿಷತ್, ಆರ್‌ಎಸ್‌ಎಸ್‌ನ ಸರ್ಕಾರವಲ್ಲ. ಆರು ಕೋಟಿ ಜನರ ಸರ್ಕಾರ. ಜನರಿಗೆ ವಾಸ್ತವಾಂಶ ತಿಳಿಸಿ. ರಾಜ್ಯದಲ್ಲಿ ಭಯದ ವಾತಾವರಣ ಸೃಷ್ಟಿ ಮಾಡಬೇಡಿ’ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.
‘ಸಮಾಜ, ಧರ್ಮದ ಮಧ್ಯೆ ಅಶಾಂತಿ ಸೃಷ್ಟಿಸುವ ಕೆಲಸ ಮಾಡಲಾಗುತ್ತಿದೆ. ವಿಶ್ವಕ್ಕೆ ಸ್ಪರ್ಧೆ ಕೊಡುವಂತಹ ಮಂಗಳೂರು ನಗರವನ್ನು ಹಾಳು ಮಾಡಿ, ಪದೇ ಪದೇ ಬೆಂಕಿ ಇಡಬೇಡಿ ಎಂದ ಅವರು, ಜನತೆಯ ಮನಸ್ಸು ಒಗ್ಗೂಡಿಸಲು ಇಲ್ಲಿಗೆ ಭೇಟಿ ನೀಡಿದ್ದೇನೆ’ ಎಂದು ತಿಳಿಸಿದರು.
ತಪ್ಪಿತಸ್ಥರ ಮೇಲೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಿ. ಯಾರನ್ನೋ ಮೆಚ್ಚಿಸಲು ನೀವು ಕೆಲಸ ಮಾಡಬೇಡಿ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಈ ರೀತಿ ಅಶಾಂತಿ ವಾತಾವರಣ ನಿರ್ಮಾಣವಾಗುತ್ತಿದೆ. ನಾನು 14 ತಿಂಗಳು ಸಿಎಂ ಆಗಿದ್ದಾಗ ಈ ರೀತಿ ಪ್ರಕರಣ ಕಂಡಿಲ್ಲ. ಅದರಲ್ಲಿಯೂ ನಿನ್ನೆ ಬೆಳವಣಿಗೆ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದ್ದು, ಇದರ ವಾಸ್ತವತೆಯನ್ನು ಜನರ ಮುಂದೆ ಇಡಬೇಕು ಎಂದು ಸರ್ಕಾರದ ಮೇಲೆ ಶಂಕೆ ವ್ಯಕ್ತಪಡಿಸಿದರು.