ಹೊಸದಿಲ್ಲಿ: ಅಸ್ಸಾಂನ ಗುವಾಹಟಿಯಲ್ಲಿ ನಡೆಯಲಿರುವ ‘ಖೇಲೋ ಇಂಡಿಯಾ ಯುವ ಕ್ರೀಡಾಕೂಟ 2020’ರ ಉದ್ಘಾಟನಾ ಸಮಾರಂಭದಿಂದ ದೂರ ಉಳಿಯಲು ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಿದ್ದಾರೆ. ‘ಸಮಯದ ಅಭಾವ’ದಿಂದ ಪ್ರಧಾನಿ ಆಹ್ವಾನವನ್ನು ಬದಿಗೊತ್ತಿದ್ದಾರೆ ಎಂಬುದಾಗಿ ಬಿಜೆಪಿ ನಾಯಕರು ಹೇಳಿದ್ದಾರೆ.
ಇದೇ ಅಸ್ಸಾಂನಲ್ಲಿ ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿಸಿ ವಾರಗಳ ಕಾಲ ನಿರಂತರ ಪ್ರತಿಭಟನೆ ನಡೆದಿತ್ತು. ಪ್ರತಿಭಟನೆಯ ಬಿಸಿಗೆ ಗುವಾಹಟಿಯಂತೂ ಯುದ್ಧಭೂಮಿಯಾಗಿ ಮಾರ್ಪಾಡಾಗಿತ್ತು. ಈ ಹಿನ್ನೆಲೆಯಲ್ಲಿ ಇಲ್ಲಿ ನಡೆಯಬೇಕಾಗಿದ್ದ ಭಾರತ-ಜಪಾನ್ ಶೃಂಗಸಭೆ ಮುಂದೂಡಿಕೆಯಾಗಿತ್ತು. ಜಪಾನ್ ಪ್ರಧಾನಿ ಶಿಂಜೋ ಅಬೆ ತಮ್ಮ ಪ್ರವಾಸವನ್ನು ಮುಂದೂಡಿದ್ದರು. ಇದೀಗ ಪ್ರಧಾನಿ ನರೇಂದ್ರ ಮೋದಿ ಗುವಾಹಟಿಗೆ ಭೇಟಿ ನೀಡುವುದನ್ನು ತಪ್ಪಿಸಿಕೊಂಡಿದ್ದಾರೆ.
ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತಿಲ್ಲ ಎಂಬುದಾಗಿ ಕ್ರೀಡಾ ಇಲಾಖೆ ಮತ್ತು ಅಸ್ಸಾಂ ಸರಕಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ‘ಭೇಟಿ ರದ್ದುಗೊಂಡಿದೆ’ ಎಂಬುದಾಗಿ ಅಸ್ಸಾಂ ಬಿಜೆಪಿ ವಕ್ತಾರ ದೆವಾನ್ ಧ್ರುಬಾ ಜ್ಯೋತಿ ಮರಾಲ್ ಐಎಎನ್‌ಎಸ್ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿದ್ದಾರೆ.‘ರಾಜ್ಯ ಸರಕಾರ ಅವರನ್ನು ಸಂಪರ್ಕಿಸಿತ್ತು. ಆದರೆ ಅವರು ಸಮಯ ನೀಡಿಲ್ಲ’ ಎಂದು ಅವರು ವಿವರಿಸಿದ್ದಾರೆ. ವರದಿಗಳ ಪ್ರಕಾರ ರಾಜ್ಯ ಸರಕಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನೂ ಸಂಪರ್ಕಿಸಿತ್ತು.
ಆದರೆ ಅವರೂ ಉದ್ಘಾಟನಾ ಕಾರ್ಯಕ್ರಮಕ್ಕೆ ತೆರಳುತ್ತಿಲ್ಲ.ಕೇಂದ್ರ ಸರಕಾರದ ಪೌರತ್ವ ತಿದ್ದುಪಡಿ ಕಾಯಿದೆ ವಿರುದ್ಧ ಅಸ್ಸಾಂನಲ್ಲಿ ನಿರಂತರ ಪ್ರತಿಭಟನೆಗಳು ನಡೆಯುತ್ತಿವೆ. ವಿದ್ಯಾರ್ಥಿ ಸಂಘಟನೆಗಳಾದ ಅಖಿಲ ಅಸ್ಸಾಂ ವಿದ್ಯಾರ್ಥಿ ಒಕ್ಕೂಟ (ಎಎಎಸ್‌ಯು) ಮತ್ತು ಈಶಾನ್ಯ ವಿದ್ಯಾರ್ಥಿಗಳ ಒಕ್ಕೂಟ (ಎನ್‌ಎಎಸ್‌ಒ) ಈಶಾನ್ಯ ಭಾರತದ ಯಾವುದೇ ಭಾಗಕ್ಕೆ ಬಂದರೂ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದವು. ಇದರ ಬೆನ್ನಿಗೆ ಪ್ರಧಾನಿಯಿಂದ ಈ ತೀರ್ಮಾನ ಹೊರಬಿದ್ದಿದೆ.
ಖೇಲೋ ಇಂಡಿಯಾ ರಾಷ್ಟ್ರೀಯ ಪ್ರಾಮುಖ್ಯತೆ ಪಡೆದಿರುವ ಕಾರ್ಯಕ್ರಮ ಎಂದು ಸರಕಾರ ಘೋಷಿಸಿದ್ದು, ಮೂರನೇ ಆವೃತ್ತಿಯ ಸ್ಪರ್ಧೆಯಲ್ಲಿ ಸುಮಾರು 6,800 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಇದೇ ಜನವರಿ 10 ರಿಂದ 22ವರೆಗೆ ಈ ಕ್ರೀಡಾಕೂಟ ನಡೆಯಲಿದೆ