ರಿಯಾದ್: ಮಕ್ಕಾ ಮತ್ತು ಮದೀನಾದ ಹರಮ್‌ಗಳನ್ನು ಸಂಪರ್ಕಿಸುವ ಅಲ್‌ಹರಮೈನ್ ಎಕ್ಸ್‌ಪ್ರೆಸ್ ರೈಲು ಗಾಡಿಯ ವೇಗವನ್ನು ಹೆಚ್ಚಿಸಲಾಗಿದ್ದು, ಗರಿಷ್ಠ ವೇಗ ಗಂಟೆಗೆ 300 ಕಿ.ಮೀ. ಆಗಲಿದೆ. ಇನ್ನು ಮುಂದೆ ಜಿದ್ದಾದಿಂದ ಮದೀನಾಕ್ಕೆ ಎರಡು ಗಂಟೆ ಸಾಕಾಗಲಿದೆ.
ರಾಬಿಖ್‌ನ ಕಿಂಗ್ ಅಬ್ದುಲ್ಲಾ ಎಕನಾಮಿಕ್ ಸಿಟಿ ರೈಲ್ವೆ ನಿಲ್ದಾಣದಿಂದ ಮದೀನಾವರೆಗೆ ಗಂಟೆಗೆ 300 ಕಿ.ಮೀ ವೇಗದಲ್ಲಿ ಚಲಿಸಲಿದೆ. ಇದರೊಂದಿಗೆ ಮಕ್ಕಾ ಮತ್ತು ಮದೀನಾ ನಡುವಿನ ಪ್ರಯಾಣಕ್ಕೆ ಸುಮಾರು 2.45 ಗಂಟೆ ತಗುಲಲಿದ್ದು, ಮದೀನಾದಿಂದ ಜಿದ್ದಾದ ಕಿಂಗ್ ಅಬ್ದುಲ್ ಅಝೀಝ್ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 2 ಗಂಟೆ ಪ್ರಯಾಣ ಬೆಳಸಬೇಕಾಗುತ್ತದೆ ಎನ್ನಲಾಗಿದೆ.
ಅಗತ್ಯ ಸುರಕ್ಷತಾ ಕ್ರಮಗಳನ್ನು ಪೂರೈಸುವ ಮೂಲಕ ರೈಲಿನ ವೇಗವನ್ನು ಹೆಚ್ಚಿಸಲಾಗಿದೆ ಎಂದು ಅಲ್ ಹರ್ಮೈನ್ ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ತಿಳಿಸಿದೆ. ಅಲ್ ಹರ್ಮೈನ್ ರೈಲು ಸೇವೆ ಅರಬ್ ಪ್ರದೇಶದ ಅತ್ಯಂತ ವೇಗದ ರೈಲ್ವೆ ಯೋಜನೆಯಾಗಿದೆ.
ಈ ಯೋಜನೆಯು ಮಕ್ಕಾ, ಜಿದ್ದಾ, ಜಿದ್ದಾ ವಿಮಾನ ನಿಲ್ದಾಣ, ರಬಖ್ ಮತ್ತು ಮದೀನಾ ಮುಂತಾದ ಐದು ನಿಲ್ದಾಣಗಳನ್ನು ಹೊಂದಿದೆ. ಜಿದ್ದಾದ ಮುಖ್ಯ ನಿಲ್ದಾಣವು ತಿಂಗಳ ಹಿಂದೆ ಸಂಭವಿಸಿದ ಬೆಂಕಿ ಅನಾಹುತಕ್ಕೆ ಆಹುತಿಯಾಗಿದ್ದು, ನಿಲ್ದಾಣದ ನವೀಕರಣ ಕಾರ್ಯ ನಡೆಯುತ್ತಿದೆ.