ಬೆಂಗಳೂರು: ‘ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿಸಿ ಪ್ರತಿಭಟನೆ ಮಾಡುವವರನ್ನು ಬಂದೂಕಿನಿಂದ ಶೂಟ್ ಮಾಡಿದರೆ ಜನಸಂಖ್ಯೆಯಾದರೂ ಕಡಿಮೆಯಾಗುತಿತ್ತು’ ಎಂಬುದಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ನಾಯಕರು ಡಿಜಿಪಿ ಎನ್ ನೀಲಮಣಿ ರಾಜು ಅವರಿಗೆ ದೂರು ನೀಡಿದರು.
ಬಳ್ಳಾರಿಯಲ್ಲಿ ಶುಕ್ರವಾರ ಸಿಎಎ ಪರ ಪ್ರತಿಭಟನೆಯಲ್ಲಿ ಮಾತನಾಡಿದ್ದ ಸೋಮಶೇಖರ್ ರೆಡ್ಡಿ, “ನೀವು ಶೇ. 17ರಷ್ಟು ಮಾತ್ರವಿದ್ದು, ಶೇ. 80ರಷ್ಟು ನಾವು ಇದ್ದೇವೆ. ನಾವು ತಿರುಗಿಬಿದ್ದರೆ ನಿಮ್ಮ ಪರಿಸ್ಥಿತಿ ಏನಾಗಬೇಕು ಎಂಬುದನ್ನು ಊಹಿಸಿಕೊಳ್ಳಿ. ಹಿಂದೂಗಳನ್ನು ಕೆಣಕಲು ಬರಬೇಡಿ,” ಎಂಬುದಾಗಿ ಮುಸ್ಲಿಂ ಸಮುದಾಯದವರಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದರು.
“ಇಂಥಹ ಭಾಷಣ ಮಾಡುವ ಮೂಲಕ ಬಳ್ಳಾರಿ ಜನತೆಯ ಸಾಮರಸ್ಯ ಮತ್ತು ಸೌಹಾರ್ದತೆಯನ್ನು ಕೆಡಿಸಿದ್ದಾರೆ. ಜಾತಿ, ಧರ್ಮಗಳ ಮಧ್ಯೆ ವಿಷ ಬೀಜ ಬಿತ್ತುವ ಮೂಲಕ ಸಂಘರ್ಷಕ್ಕೆ ಕಾರಣರಾಗಿದ್ದಾರೆ. ಇದರಿಂದ ಯಾವುದೇ ಸಂದರ್ಭದಲ್ಲಿ ಬಳ್ಳಾರಿ ನಗರದಲ್ಲಿ ಶಾಂತಿ ಕದಡುವ, ಗಲಭೆ ಉಂಟಾಗುವ ಸಾಧ್ಯತೆ ಇದೆ. ಅವರ ಈ ಪ್ರವೃತ್ತಿ ಭಾರತೀಯ ದಂಡ ಸಂಹಿತೆ ಮತ್ತು ಇನ್ನಿತರ ಕಾನೂನುಗಳ ವಿರುದ್ಧವಾಗಿದೆ. ಹಾಗಾಗಿ ಜಿ ಸೋಮಶೇಖರ ರೆಡ್ಡಿ ಹಾಗೂ ಇನ್ನಿತರರ ವಿರುದ್ಧ ಕೇಸು ದಾಖಲಿಸಿಕೊಂಡು ಕಾನೂನು ರೀತಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು,” ಎಂಬುದಾಗಿ ಕಾಂಗ್ರೆಸ್ ನಾಯಕರು ದೂರಿನಲ್ಲಿ ತಿಳಿಸಿದ್ದಾರೆ.
ದೂರನ್ನು ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಮುಖಂಡರ ನಿಯೋಗ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಸಲ್ಲಿಸಿತು. ಪೊಲೀಸ್ ಮಹಾ ನಿರ್ದೇಶಕರ ಪರವಾಗಿ ಎಡಿಜಿಪಿ ಡಾ.ಎಂ.ಎ. ಸಲೀಂ ಅವರು ಮನವಿ ಸ್ವೀಕರಿಸಿದರು.