janadhvani

Kannada Online News Paper

ಇರಾಕ್‌ನಲ್ಲಿ ಮತ್ತೆ ಅಮೆರಿಕ ವಾಯುದಾಳಿ- 6 ಸೈನಿಕರು ಬಲಿ

ಬಾಗ್ದಾದ್ ,ಜ.4:ಇರಾಕ್‌ನ ಹಶೆದ್ ಅಲ್ ಶಾಬಿ ಅರೆಸೇನಾಪಡೆಯ ವಾಹನಗಳ ಮೇಲೆ ಅಮೆರಿಕ ಶನಿವಾರ ನಸುಕಿನಲ್ಲಿ ವಾಯುದಾಳಿ ನಡೆಸಿದೆ ಎಂದು ಸರ್ಕಾರಿ ವಾಹಿನಿ ವರದಿ ಮಾಡಿದೆ.

ಬಾಗ್ದಾದ್‌ನ ಉತ್ತರ ಭಾಗದಲ್ಲಿ ನಡೆದ ದಾಳಿಗೆ ಹಶದ್ ಅಲ್ ಶಾಬಿ ಅರೆಸೇನಾಪಡೆಯ ವಾಹನಗಳನ್ನು ಗುರಿಯಾಗಿಸಿಕೊಳ್ಳಲಾಗಿತ್ತು. ಆದರೆ ಯಾರನ್ನು ಕೊಲ್ಲುವ ಉದ್ದೇಶದಿಂದ ಈ ದಾಳಿ ನಡೆದಿದೆ ಎನ್ನುವುದು ಇನ್ನೂ ದೃಢಪಟ್ಟಿಲ್ಲ.‘ರಸ್ತೆಯ ಮೇಲಿದ್ದ ವಾಹನ ಸಾಲುಗಳನ್ನು ಗುರಿಯಾಗಿಸಿ ದಾಳಿ ಮಾಡಲಾಗಿದೆ. ಸುಮಾರು 6 ಜನ ಮೃತಪಟ್ಟು ಅನೇಕ ಮಂದಿ ಗಂಭೀರ ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಇರಾನ್‌ನ ಉನ್ನತ ಸೇನಾಧಿಕಾರಿಯನ್ನು ವಧಿಸಿದ ಒಂದು ದಿನದ ನಂತರ ಅಮೆರಿಕ ಮತ್ತೆ ಇರಾಕ್‌ನಲ್ಲಿ ಮಿಲಿಟರಿ ಕಾರ್ಯಾಚರಣೆಗೆ ಮುಂದಾಗಿದೆ.ಅಮೆರಿಕದ ವಾಯು ದಾಳಿಗೆ ಬಲಿಯಾದ ಖಾಸಿಂ ಸುಲೈಮಾನಿ ಮತ್ತು ಅಬು ಮಹ್ದಿ ಅಲ್ ಮುಹಂದಿಸ್ ಅವರ ಅಂತಿಮಯಾತ್ರೆಗೆ ಸಿದ್ಧತೆ ನಡೆದ ಬೆನ್ನಲ್ಲೇ ಈ ದಾಳಿ ನಡೆದಿದೆ.

ಇಂದು ಬೆಳಗ್ಗೆ ಸುಲೈಮಾನಿ ಮತ್ತು ಮುಹಂದಿಸ್ ಅವರ ಮೃತದೇಹಗಳನ್ನು ಅಂತಿಮ ದರ್ಶನಕ್ಕೆ ಇರಿಸಲು ಮೆರವಣಿಗೆ ಕೊಂಡೊಯ್ಯಲು ನಿರ್ಧರಿಸಲಾಗಿತ್ತು. ಬಾಗ್ದಾದ್ನಲ್ಲಿ ಇಂದು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ನಂತರ ಮೃತದೇಹಗಳನ್ನು ಇರಾನ್ಗೆ ಕಳುಹಿಸಲು ನಿರ್ಧರಿಸಲಾಗಿತ್ತು. ಸುಲೈಮಾನಿ ನಿಧನ ಹಿನ್ನಲೆಯಲ್ಲಿ ಇರಾನ್ನಲ್ಲಿ 3 ದಿನಗಳ ಕಾಲ ಶೋಕಾಚರಣೆಗೆ ಆದೇಶ ನೀಡಲಾಗಿತ್ತು.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಆದೇಶದ ಮೇರೆಗೆ ಈ ದಾಳಿ ನಡೆಸಿರುವುದಾಗಿ ಅಮೆರಿಕದ ರಕ್ಷಣಾ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿತ್ತು. ಬಾಗ್ದಾದ್‌ನಲ್ಲಿ ಅಮೆರಿಕದ ರಾಯಭಾರ ಕಚೇರಿ ಮೇಲೆ ನಡೆದ ದಾಳಿಗೆ ಪ್ರತೀಕಾರವಾಗಿ ಹಾಗೂ ಮತ್ತಷ್ಟು ಅಮೆರಿಕನ್ನರನ್ನು ಕೊಲ್ಲುವ ಸಂಚಿನ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆಸಿರುವುದಾಗಿ ಅಮೆರಿಕದ ಡೊನಾಲ್ಡ್‌ ಟ್ರಂಪ್‌ ಸರ್ಕಾರ ಸಮರ್ಥನೆ ಮಾಡಿಕೊಂಡಿತ್ತು.

ಶುಕ್ರವಾರ ನಡೆದ ದಾಳಿಯ ನಂತರ ಇರಾನ್ ಮತ್ತು ಅಮೆರಿಕ ನಡುವೆ ಯುದ್ಧದ ವಾತಾವರಣ ನಿರ್ಮಾಣವಾಗಿರುವುದರಿಂದ ಅಮೆರಿಕದಲ್ಲಿರುವ ಇರಾನ್ ಪ್ರಜೆಗಳು ತಕ್ಷಣ ಅಲ್ಲಿಂದ ಹೊರಟು ಬರಬೇಕು ಎಂದು ಅಮೆರಿಕ ರಾಯಭಾರ ಕಚೇರಿ ಆದೇಶ ಹೊರಡಿಸಿತ್ತು. ವಿಮಾನದ ಮೂಲಕ ಅಮೆರಿಕದಿಂದ ಹೊರಟು ಬನ್ನಿ, ತಕ್ಷಣ ಅಲ್ಲಿಂದ ಬೇರೆ ಯಾವುದಾದರೂ ದೇಶಕ್ಕೆ ತೆರಳಿ ಎಂದು ಸೂಚನೆ ನೀಡಲಾಗಿತ್ತು.

error: Content is protected !! Not allowed copy content from janadhvani.com