🖎ಮುನೀರ್ ಕಾಟಿಪಳ್ಳ
ಡಿಸೆಂಬರ್ 19 ರಂದು ಮಂಗಳೂರಿನಲ್ಲಿ ನಡೆದ ಪೊಲೀಸ್ ಮತ್ತು ಪ್ರತಿಭಟನಾಕಾರರ ನಡುವೆ ನಡೆದ ಘರ್ಷಣೆಯಲ್ಲಿ ಪೊಲೀಸ್ ಗುಂಡೇಟಿನಲ್ಲಿ ಅಸುನೀಗಿದವರು, ಗಾಯಗೊಂಡು ಆಸ್ಪತ್ರೆ ಸೇರಿದವರು, ಸ್ಥಳದಲ್ಲೇ ಪೊಲೀಸರ ಕೈಗೆ ಸಿಕ್ಕಿ ಈಗ ಜೈಲು ಪಾಲಾದವರು ಕಮೀಷನರ್ ಹರ್ಷ, ಮುಖ್ಯಮಂತ್ರಿ ಯಡಿಯೂರಪ್ಪ ಪ್ರಕಾರ ಪೊಲೀಸರ ಮೇಲೆ ದಾಳಿ ನಡೆಸಿದ ಅಪರಾಧಿಗಳು. ಇವರು ಕಟ್ಟಿಕೊಡುತ್ತಿರುವ ಕಥೆ ಸುಳ್ಳುಗಳ ಕಂತೆ ಎಂಬುದಕ್ಕೆ ಒಂದು ಉದಾಹರಣೆ ಕೊಡ್ತೀನಿ, ಓದಿ.
ಇಪ್ಪತ್ತೈದು ವರ್ಷಗಳ ಹಿಂದೆ ನಾನು ಸಕಲೇಶಪುರ ದಲ್ಲಿ ಹಳ್ಳಿಗಳಲ್ಲಿ ತಿರುಗಿ ವ್ಯಾಪಾರ ಮಾಡುತ್ತಿದ್ದಾಗ, ನನ್ನ ಜೊತೆಗೆ ಉಡುಪಿ ತಾಲೂಕಿನ ಉಚ್ಚಿಲದ ಫಾರೂಕ್ ಎಂಬ ಬಡ ಯುವಕನೂ ಇದ್ದ. ತೀರಾ ಅಮಾಯಕನಾದ ಆತನಿಗೆ ದಿಢೀರ್ ಎಂದು ನರಗಳ ಸಮಸ್ಯೆ ಉಂಟಾಗಿ ದುಡಿಮೆ ಅಸಾಧ್ಯ ಎಂಬ ಪರಿಸ್ಥಿತಿ ಉಂಟಾಯಿತು. ಆ ಮೇಲೆ ಆತ ತನ್ನ ಹೆಂಡತಿಯ ಊರು ಶಿರ್ವ ಸಮೀಪದ ಮಂಚಕಲ್ ನಲ್ಲಿ ವಾಸ ಹೂಡಿದ. ನರಗಳ ರೋಗ ಜಾಸ್ತಿಯಾಗಿ ಆತ ನಾವು ಎದುರು ನಿಂತರೂ ಗುರುತು ಹಿಡಿಯಲಾರದಷ್ಟು ಕಣ್ಣ ದೃಷ್ಟಿಯನ್ನೂ ಕಳೆದು ಕೊಂಡ. ತೀರಾ ಬಡತನದಲ್ಲಿ ಕುಟುಂಬಸ್ಥರ ಸಹಾಯದಿಂದ ಬದುಕು ಸಾಗಿಸತೊಡಗಿದ. ಆತನಿಗೆ ಎರಡು ಹೆಣ್ಣು ಸಹಿತ ಮೂವರು ಮಕ್ಕಳು. ದೊಡ್ಡವನ ಹೆಸರು ಆಶಿಕ್. ಆತನಿಗೆ ಈಗ ಭರ್ತಿ 21 ವರ್ಷ ವಯಸ್ಸು.
ಫಾರೂಕ್ ವಾಸವಿರುವ ಮಂಚಕಲ್ ದರ್ಗಾದಲ್ಲಿ ಈಗ ವಾರ್ಷಿಕ ಉರೂಸಿನ ಸಡಗರ. ಉರೂಸ್ ಅಂದರೆ ಊರಿಡೀ ಹಬ್ಬ. ಇದೇ ಆಶಿಕ್ ಊರಿನ ಮಸೀದಿಯ ಆಡಳತದ ಅಡಿಯಲ್ಲಿರುವ ಯುವಕರ ಒಕ್ಕೂಟದ ಉತ್ಸಾಹಿ ಪದಾಧಿಕಾರಿ. ಉರೂಸಿಗೆ ಊರಿನ ಬೀದಿಗಳನ್ನು ಪೂರ್ತಿ ಶೃಂಗರಿಸುವ ಜವಾಬ್ದಾರಿ ಈ ಯುವಕರ ಒಕ್ಕೂಟದ ಪಾಲಿಗೆ ಬಂತು. ಅಂತೆಯೆ ಯುವಕರು ದೇಣಿಗೆ ಸಂಗ್ರಹಿಸಿದರು. ಶೃಂಗಾರಕ್ಕೆ ಬೇಕಾದ ಬಾವುಟ, ತೋರಣಗಳನ್ನು ತರಲು ಆಶಿಕ್ ಮತ್ತವನ ಗೆಳೆಯನನ್ನು ನೇಮಿಸಲಾಯಿತು. ಅದರಂತೆ ಶಿರ್ವದಿಂದ ಸುಮಾರು ಅರವತ್ತು ಕಿ ಮೀ ದೂರದ ಮಂಗಳೂರಿಗೆ ಕಮಿಟಿಯವರು ನೀಡಿದ ಇಪ್ಪತ್ತು ಸಾವಿರ ರೂಪಾಯಿ ಜೇಬಲ್ಲಿಟ್ಟುಕೊಂಡು ಗೆಳೆಯನ ಜೊತೆಗೆ ಡಿಸೆಂಬರ್ 19 ರಂದು ಎಳೆ ಯುವಕ ಆಶಿಕ್ ಬಸ್ಸು ಹತ್ತಿ ಸಂಭ್ರಮದಿಂದಲೇ ಮಂಗಳೂರಿಗೆ ಹೊರಟ.
ಮಂಗಳೂರಿನ ಮಾರುಕಟ್ಟೆ, ರಸ್ತೆ, ಬೀಬಿ ಅಲಾಬಿ ರಸ್ತೆ, ಬಂದರು ಪ್ರದೇಶದಲ್ಲಿ ಇಬ್ಬರೂ ಸೇರಿ ಖರೀದಿಗೆ ತೊಡಗಿದರು. ಇವರ ಖರೀದಿ ನಡೆಯುತ್ತಿರುವಾಗಲೇ ಮಂಗಳೂರಿನ ಈ ಪ್ರದೇಶಗಳಲ್ಲಿ ಘರ್ಷಣೆ ಆರಂಭವಾಯಿತು. ಅಷ್ಟು ಹೊತ್ತಿಗೆ 12 ಸಾವಿರ ರೂಪಾಯಿ ಮೌಲ್ಯದ ಸಾಮಾಗ್ರಿಗಳನ್ನು ಖರೀದಿಸಿಯಾಗಿತ್ತು. ಎರಡು ಚೀಲ ತುಂಬಾ ಶೃಂಗಾರದ ಸಾಮಾಗ್ರಿ, ಜೇಬಲ್ಲಿ 8 ಸಾವಿರ ರೂಪಾಯಿ ನಗದು ಹೊಂದಿದ್ದ, ಮಂಗಳೂರು ಸರಿಯಾಗಿ ಗೊತ್ತಿಲ್ಲದ ಹುಡುಗರನ್ನು ಈ ಗಲಾಟೆ ಗಲಿಬಿಲಿ ಗೊಳಿಸಿತ್ತು. ಕಲ್ಲು ತೂರಾಟ, ಟಿಯರ್ ಗ್ಯಾಸ್, ಲಾಠಿ ಚಾರ್ಜ್ ನಡುವೆ ಏನೂ ಮಾಡಲು ತೋಚದೆ ಬೆದರಿ ನಿಂತಿದ್ದ ಹುಡುಗರು ಸುಲಭವಾಗಿ ರಾಕ್ಷಸಾವತಾರ ತಾಳಿದ್ದ ಪೊಲೀಸರ ಕೈಗೆ ಸಿಕ್ಕಿ ಬಿದ್ದರು. ಬೆನ್ನು, ಕೈ ಕಾಲುಗಳು ಬಾಸುಂಡೆ ಮೂಡುವಂತೆ ಹೊಡೆತಗಳು ಬಿದ್ದವು. ತಲೆಯಲ್ಲಿ ರಕ್ತ ಚಿಮ್ಮಿದವು. ಹೊಡೆತಗಳ ಜೊತೆಗೆ ನೇರವಾಗಿ ಇಬ್ಬರೂ ಪೊಲೀಸ್ ಲಾಕಪ್ ಸೇರಿದರು. ಕೈಯಲ್ಲಿದ್ದ ಉರೂಸ್ ಸಂಭ್ರಮದ ತೋರಣ, ಬಾವುಟ ಮುಂತಾದ ಶೃಂಗಾರ ಸಾಧನ ಎಲ್ಲೋ ಕಳೆದು ಹೋಯಿತು. ಜೇಬಲ್ಲಿ ಉಳಿದ 8 ಸಾವಿರ ರೂಪಾಯಿ ಮೊಬೈಲ್ ಸಹಿತ ಪೊಲೀಸರ ಕೈ ಸೇರಿತು.
ಆ ನಂತರ ಗುಂಡುಗಳು ಹಾರಿದವು, ತಲೆಗಳು ಉರುಳಿದವು. ದಂಗೆಯ ಆರೋಪಗಳನ್ನು ಕೈಗೆ ಸಿಕ್ಕಿದ ಅಮಾಯಕ ಆಶಿಕ್ ಮತ್ತವನ ಗೆಳೆಯನ ಮೇಲೆ ಹೊರಿಸಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಯಿತು. ಹುಡುಗರು ನ್ಯಾಯಾಧೀಶರ ಮುಂದೆ ನಡೆದ ಎಲ್ಲಾ ವಿವರಗಳನ್ನು ಹೇಳಿ ಕಣ್ಣೀರಿಟ್ಟರು.ನ್ಯಾಯಾಲಯ ಗಂಭೀರ ಸೆಕ್ಷನ್ ಗಳು ಇದ್ದ ಕಾರಣ ನೇರವಾಗಿ ನ್ಯಾಯಾಂಗ ಬಂಧನ ವಿಧಿಸಿತು. ಉರೂಸ್ ಸಂಭ್ರಮಕ್ಕೆ ಉತ್ಸಾಹದಿಂದ ಪುಟಿಯುತ್ತಿದ್ದ ಹುಡುಗರು ಸಹಿಸಲಾಗದ ಮೈ ಕೈ ನೋವಿನ ಜೊತೆಗೆ ಗಂಭೀರ ಕ್ರಿಮಿನಲ್ ಪಟ್ಟ ಹೊತ್ತು ಮಂಗಳೂರು ಜೈಲು ಸೇರಿದರು.
ಈಗ ಅನಾರೋಗ್ಯದಿಂದ ಮನೆಯಲ್ಲೇ ಇರುವ ಫಾರೂಕ್ ಎದೆಯೆತ್ತರ ಬೆಳೆದು ಭವಿಷ್ಯದ ಬೆಳಕಾಗಿದ್ದ, ಮಗನ ಸ್ಥಿತಿ ಕಂಡು ಪೂರ್ಣ ಕುಸಿದು ಹೋಗಿದ್ದಾನೆ. ಆಶಿಕ್ ತಾಯಿಗೆ ಕಣ್ಣೀರು ಸುರಿಸುವುದಷ್ಟೇ ಈಗ ದಿನಚರಿ.
ಕಮೀಷನರ್ ಹರ್ಷ ಕಟ್ಟಿಕೊಟ್ಟ ಕತೆಯನ್ನು ನಂಬಿ ಅಮಾಯಕರನ್ನು, ಬಲಿಪಶುಗಳನ್ನು ಅಪರಾಧಿಗಳಾಗಿ ಕಾಣುತ್ತಿರುವ ನಾಗರಿಕ ಸಮಾಜ ಪರದೆಯ ಒಳಗಡೆಯ ದೃಶ್ಯಗಳನ್ನು ನೋಡಲು ಸಾಧ್ಯವಾಗಬೇಕು. ಇಂದು ಮತೀಯ ತಾರತಮ್ಯದಿಂದ ಪೊಲೀಸರ ಕತೆಯನ್ನು ನಂಬಿದಂತೆ ನಟಿಸಿದರೆ, ನಾಳೆ ಬದುಕಿನ ಸಮಸ್ಯೆಗಳಿಗೆ ಎದುರಾಗಿ ನಡೆಯುವ ಸಂಘರ್ಷದಲ್ಲಿ ಪೊಲೀಸರು ನಮ್ಮ ಮನೆಯ ಮಕ್ಕಳ ಮೇಲೆ ಇದೇ ತರ ಕತೆಕಟ್ಟಿದಾಗ ಅಸಹಾಯಕರಾಗುವ ದುಸ್ಥಿತಿ ನಮ್ಮದಾಗುತ್ತದೆ. ನಿಜವಾದ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ. ಅದಕ್ಕಾಗಿ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಯಾಗಲಿ. ಪೊಲೀಸರನ್ನು ಕಣ್ಷು ಮುಚ್ವಿ ನಂಬುವುದು ಪ್ರಜಾಪ್ರಭುತ್ವದಲ್ಲಿ ಅಪಾಯಕಾರಿ.
ಇನ್ನು ಕಮೀಷನರ್ ಹರ್ಷ ಕವಿತೆ, ಸಾಹಿತ್ಯದ ಒಡನಾಟ ಹೊಂದಿರುವ ಮೃದು ಹೃದಯಿ, ಜಂಟಲ್ ಮೆನ್ ಎಂದು ಕೆಲವರ ವಾದ. ಕವಿಗಳು ಕ್ರೂರಿಗಳಾಗುವುದು, ಕ್ರೂರಿಗಳು ಕವಿಗಳಾಗುವುದು ಹೊಸ ವಿದ್ಯಾಮಾನವೋ ನಾನರಿಯೆ. ಹರ್ಷ ತಪ್ಪು ಮಾಡಿರುವುದು ದಿಟ ಎಂಬುದು ನನ್ನ ಖಚಿತ ಅಭಿಪ್ರಾಯ. ಅದು ಹಾಗಲ್ಲ ಅಂತಾದರೆ ಅಂತಾದರೆ ಹರ್ಷಾ ಬಿಡುಗಡೆ ಮಾಡಿರುವ ವೀಡಿಯೊಗಳನ್ನು ಮುಂದಿಟ್ಟಾದರು ಸರಿ. ಆಶಿಕ್ ಮತ್ತವನ ಗೆಳೆಯ ಗಲಭೆಯಲ್ಲಿ ಪಾಲ್ಗೊಂಡದ್ದಕ್ಕೆ ಸಾಕ್ಷ್ಯ ಒದಗಿಸಲಿ.
ಫಾರೂಕ್ ಫೋನ್ ಮಾಡಿ ನನ್ನಲ್ಲಿ ಈ ವಿಷಯ ಬಿಡಿಸಿಟ್ಟು “ಸೌದಿಗೊ, ದುಬಾಯಿಗೊ ತೆರಳಿ ಒಳ್ಳೆಯ ದಿನಗಳತ್ತ ಕರೆದೊಯ್ಯುತ್ತಾನೆ” ಎಂದು ಕನಸು ಕಟ್ಟಿದ್ದ ಮಗನ ಸ್ಥಿತಿಯ ಕುರಿತು ಕಣ್ಣೀರಾಗಿ ನ್ಯಾಯ ಕೊಡಿಸುವಂತೆ ಆಗ್ರಹಿಸಿದಾಗ ನನ್ನಿಂದ ಮಾಡಲು ಸಾಧ್ಯವಾದದ್ದು ಇಷ್ಟು. ನಾಗರಿಕ ಸಮಾಜ ಮೌನ ವಹಿಸುತ್ತದೆ ಅಂತಾದರೆ ಯಾರಾದರು ಏನು ಮಾಡಲು ಸಾಧ್ಯ ?
~ ಮುನೀರ್ ಕಾಟಿಪಳ್ಳ