janadhvani

Kannada Online News Paper

ಇದು ಕೇವಲ ಸಂಖ್ಯೆಯಲ್ಲ- ದುಬೈನಲ್ಲಿ ಡಿಜಿಟಲ್ ನಂಬರ್ ಪ್ಲೇಟ್‌ ಕ್ರಾಂತಿ

ದುಬೈ: ಪರೀಕ್ಷಣಾರ್ಥವಾಗಿ ಡಿಜಿಟಲ್ ನಂಬರ್ ಪ್ಲೇಟ್‌ಗಳನ್ನು ವಾಹನಗಳಲ್ಲಿ ಅಳವಡಿಸುವ ಸಲುವಾಗಿ ದುಬೈ ರಸ್ತೆ ಸಾರಿಗೆ ಪ್ರಾಧಿಕಾರವು ರಿವೈವರ್ ಆಟೋ ಕಂಪನಿಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿವೆ. ಸಂಚಾರ ದಟ್ಟಣೆಯಿಂದ ಹಿಡಿದು ವಾಹನ ಪರವಾನಗಿ ಸಮಸ್ಯೆಗಳು ಮತ್ತು ರಸ್ತೆ ಸುರಕ್ಷತಾ ವ್ಯವಸ್ಥೆಗಳನ್ನು ಪರಿಹರಿಸುವರೆಗೆ ಎಲ್ಲದಕ್ಕೂ ಹೊಸ ಡಿಜಿಟಲ್ ನಂಬರ್ ಪ್ಲೇಟ್‌ಗಳನ್ನು ಬಳಸಬಹುದು ಎನ್ನಲಾಗಿದೆ.

ಹೊಸ ಸ್ಮಾರ್ಟ್ ನಂಬರ್ ಪ್ಲೇಟ್‌ಗಳನ್ನು ದುಬೈನಲ್ಲಿ ಹಂತಹಂತವಾಗಿ ಪ್ರಯೋಗಿಸಲಾಗುತ್ತಿದೆ ಎಂದು ರಸ್ತೆ ಸಾರಿಗೆ ಪ್ರಾಧಿಕಾರದ ಸಿಇಒ ಅಬ್ದುಲ್ಲಾ ಯೂಸುಫ್ ಅಲ್ ಅಲಿ ತಿಳಿಸಿದ್ದಾರೆ. ಇದು ಸಾರಿಗೆ, ಸುರಕ್ಷತೆ ಮತ್ತು ನಿಯಂತ್ರಣದಲ್ಲಿ ಕ್ರಾಂತಿಯುಂಟುಮಾಡುವ ತಂತ್ರಜ್ಞಾನವಾಗಿದ್ದು, ಸ್ಮಾರ್ಟ್ ನಂಬರ್ ಪ್ಲೇಟ್‌ಗಳಲ್ಲಿ ಈ ಪ್ರದೇಶಗಳಲ್ಲಿನ ಸರಕಾರ ಮತ್ತು ಅರೆ ಸರಕಾರಿ ವ್ಯವಸ್ಥೆಗಳಲ್ಲಿ ವಾಹನಗಳೊಂದಿಗೆ ನೇರ ಸಂಪರ್ಕವನ್ನು ಹೊಂದಿರುವ ವ್ಯವಸ್ಥೆಯನ್ನು ಒಳಗೊಂಡಿವೆ.

ಸ್ಮಾರ್ಟ್ ಫಲಕಗಳು ಒಂದು ಸೆಂಟ್ರಲ್ ಎಲೆಕ್ಟ್ರಾನಿಕ್ ನಿಯಂತ್ರಣವನ್ನು ಆಧರಿಸಿ ಕಾರ್ಯಾಚರಿಸಲಿವೆ. ವಾಹನದ ಸಂಖ್ಯೆಗಳ ಜೊತೆಗೆ, ವಾಹನ ಪರವಾನಗಿಗಳು, ವಿಮೆ, ಪ್ರಯಾಣದ ಅವಧಿ, ವಾಹನದ ಇತರ ಮಾಹಿತಿಗಳು ಮತ್ತು ಚಾಲಕರ ಮಾಹಿತಿಗಾಗಿ ಈ ನಂಬರ್ ಪ್ಲೇಟ್ ಅನ್ನು ಬಳಸಬಹುದು. ಪಾರ್ಕಿಂಗ್ ವ್ಯವಸ್ಥೆ ಮತ್ತು ಟೋಲ್ ಗೇಟ್‌ಗಳೊಂದಿಗೆ ನಂಬರ್‌ ಪ್ಲೇಟ್‌ಗಳನ್ನು ಜೋಡಿಸಲಾಗಿದ್ದು, ಕದಿಯುವ ಸಾಧ್ಯತೆ ಕೂಡ ಕಡಿಮೆ ಎನ್ನಲಾಗಿದೆ.

ಇದು ಅಗತ್ಯವಿದ್ದಾಗ ಸಂದೇಶಗಳು ಮತ್ತು ಎಚ್ಚರಿಕೆಗಳನ್ನು ಸಹ ಒದಗಿಸುತ್ತದೆ. ರಸ್ತೆ ಅಪಘಾತಗಳ ಸಂದರ್ಭದಲ್ಲಿ, ವೇಗ ನಿಯಂತ್ರಿಸಲು ಅಥವಾ ವಾಹನವನ್ನು ತಿರುಗಿಸುವ ಸಂದೇಶಗಳನ್ನು ವಾಹನ ಸಂಖ್ಯೆ ಫಲಕಗಳಲ್ಲಿ ಪ್ರದರ್ಶಿಸಲಾಗುತ್ತದೆ. ಸಂಚಾರ ದಟ್ಟಣೆಯ ಸಂದರ್ಭದಲ್ಲಿ, ವಾಹನಗಳಿಂದ ನಿಯಂತ್ರಣ ಕೊಠಡಿಗಳಿಗೆ ಮಾಹಿತಿ ವರ್ಗಾವಣೆಯಾಗುತ್ತದೆ. ಪೊಲೀಸರು ಕೇವಲ ಕ್ಯಾಮೆರಾಗಳ ಮೂಲಕ ಕಣ್ಗಾವಲು ಅವಲಂಬಿಸಬೇಕಾಗಿಲ್ಲ. ಇದು ತಂತ್ರಜ್ಞಾನದಿಂದ ಶಕ್ತಗೊಂಡ ಸಂವಹನ ವ್ಯವಸ್ಥೆಗಳನ್ನು ಒಳಗೊಂಡಿರುತ್ತದೆ.

ದೇಶಕ್ಕೆ ಉತ್ತಮ ತಂತ್ರಜ್ಞಾನಗಳನ್ನು ತರುವ ದುಬೈ ಆಡಳಿತದ ಪ್ರಯತ್ನಗಳ ಭಾಗವಾಗಿ ಈ ತಂತ್ರಜ್ಞಾನ ಅಳವಡಿಸಲಾಗುತ್ತಿದೆ ಎಂದು ಆರ್‌ಟಿಎ ಸಿಇಒ ಹೇಳಿದರು. ಡಿಜಿಟಲ್ ನಂಬರ್ ಪ್ಲೇಟ್‌ಗಳ ಮೂಲಕ ಬದಲಾವಣೆಗೆ ಹೊಸ ಬಾಗಿಲು ತೆರೆಯುವ ಮೊದಲ ನಗರ ದುಬೈ ಆಗಲಿದೆ ಎಂದು ರಿವೈವ್ ಆಟೋ ಪ್ರತಿನಿಧಿಗಳು ತಿಳಿಸಿದ್ದಾರೆ.