janadhvani

Kannada Online News Paper

ಗೌಪ್ಯತೆ ಸೋರಿಕೆ: ಆಂಡ್ರಾಯ್ಡ್ ಫೋನ್ಗಳು ತೀರಾ ಅಪಾಯಕಾರಿ-ನ್ಯಾಯಮೂರ್ತಿ ದೀಪಕ್ ಗುಪ್ತಾ

ನವ ದೆಹಲಿ .ಸೆ,24: ವಾಟ್ಸಾಪ್ ಫೇಸ್ಬುಕ್ನಂತಹ ಸಾಮಾಜಿಕ ಮಾಧ್ಯಮಗಳಲ್ಲಿ ನಕಲಿ ಸಂದೇಶಗಳು ಹರಡುವ ಕುರಿತು ಕಳವಳ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ದೇಶದ ಸಾರ್ವಭೌಮತೆ ಹಾಗೂ ವ್ಯಕ್ತಿಯ ಗೌಪ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ಕಾನೂನನ್ನು ಬಿಗಿಗೊಳಿಸುವ ಕುರಿತು ನ್ಯಾಯಾಲಯಕ್ಕೆ ಮೂರು ವಾರಗಳ ಒಳಗಾಗಿ ಶಿಫಾರಸು ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತಾಕೀತು ಮಾಡಿದೆ.

ಸಾಮಾಜಿಕ ಜಾಲತಾಣದಲ್ಲಿ ದಿನೆ ದಿನೇ ಹೆಚ್ಚುತ್ತಿರುವ ನಕಲಿ ಸಂದೇಶಗಳು ಹಾಗೂ ಈ ಸಂದೇಶಗಳು ಸೃಷ್ಟಿಸುತ್ತಿರುವ ಅನಾಹುತಗಳ ಕುರಿತು ಕಳವಳ ವ್ಯಕ್ತಪಡಿಸಿರುವ ನ್ಯಾಯಮೂರ್ತಿ ದೀಪಕ್ ಗುಪ್ತಾ ಒಳಗೊಂಡ ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠ, “ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಸಂದೇಶಗಳ ಉಗಮ ಸ್ಥಾನವನ್ನು ಕಂಡುಹಿಡಿಯಬೇಕು. ಅದೇ ಸಮಯದಲ್ಲಿ ರಾಷ್ಟ್ರ ಸಾರ್ವಭೌಮತ್ವ ಹಾಗೂ ವ್ಯಕ್ತಿಗಳ ವ್ಯಯಕ್ತಿಕ ಗೌಪ್ಯತೆಯನ್ನು ಕಾಪಾಡಿಕೊಳ್ಳಬೇಕು.

ಆದರೆ, ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್ನ ಇಬ್ಬರು ನ್ಯಾಯಮೂರ್ತಿಗಳಿಂದ ಇದು ಸಾಧ್ಯವಾಗುವ ಕೆಲಸವಲ್ಲ. ಇದು ಸರ್ಕಾರದಿಂದ ಮಾತ್ರ ಸಾಧ್ಯವಾಗುವ ಕೆಲಸ. ಹೀಗಾಗಿ ನಕಲಿ ಸಂದೇಶಗಳ ಬಗ್ಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು ಹಾಗೂ ವ್ಯಯಕ್ತಿಕ ಗೌಪ್ಯತೆಯನ್ನು ಕಾಪಾಡಿಕೊಳ್ಳಲು ಸರ್ಕಾರ ಮೂರು ವಾರಗಳಲ್ಲಿ ಕಠಿಣ ನೀತಿಯನ್ನು ರೂಪಿಸಿ ಸುಪ್ರೀಂ ಕೋರ್ಟ್ಗೆ ಶಿಫಾರಸು ಮಾಡಬೇಕು ಎಂದು ತಾಕೀತು ಮಾಡಿದೆ.

ಸಾಮಾಜಿಕ ಮಾಧ್ಯಮಗಳಿಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವ ಕುರಿತು ಕೇಂದ್ರ ಸರ್ಕಾರಕ್ಕೆ ಯಾವುದೇ ಆಲೋಚನೆ ಇದೆಯೇ? ಎಂದು ಕಳೆದ ವಾರ ಕೇಂದ್ರದ ಅಭಿಪ್ರಾಯ ಕೇಳಿದ್ದ ಸುಪ್ರೀಂ ಕೋರ್ಟ್ ಈ ಕುರಿತ ವಿಚಾರಣೆ ವೇಳೆ ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳ ಕುರಿತು ಆತಂಕ ವ್ಯಕ್ತಪಡಿಸಿದೆ. ಈ ಕುರಿತು ಸ್ಪಷ್ಟನೆ ನೀಡಿರುವ ನ್ಯಾಯಮೂರ್ತಿ ದೀಪಕ್ ಗುಪ್ತಾ, “ನ್ಯಾಯಾಲಯ ಸಾಮಾಜಿಕ ಮಾಧ್ಯಮಗಳಿಗೆ ಆಧಾರ್ ಲಿಂಕ್ ಮಾಡುವ ಬಗ್ಗೆ ಪ್ರಸ್ತಾಪಿಸಲು ಕಾರಣವೂ ಇದೆ. ಹೀಗೆ ಮಾಡುವ ಮೂಲಕ ಜನ ಸಮೂಹ ದಾಳಿ ಮತ್ತು ಹತ್ಯೆಗಳಿಗೆ ಕಾರಣವಾದ ನಕಲಿ ಸುದ್ದಿ-ಸಂದೇಶಗಳನ್ನು ಕಳುಹಿಸುವವರ ಮೂಲವನ್ನು ಪತ್ತೆ ಹಚ್ಚಬಹುದು.

ಇತ್ತೀಚೆಗೆ ತಂತ್ರಜ್ಞಾನ ಸಾಗುತ್ತಿರುವ ಮಾರ್ಗ ಅಪಾಯಕಾರಿಯಾಗಿದೆ. ಸಾಮಾಜಿಕ ಮಾಧ್ಯಮಗಳಿಗೆ ಆಧಾರ್ ಲಿಂಕ್ ಮಾಡುವ ಕುರಿತು ಕೊನೆಯ ವಿಚಾರಣೆಯಾದ ನಂತರ ನಾನು ಈ ಕುರಿತು ಕೆಲವು ಸಂಶೋಧನೆ ನಡೆಸಿದೆ. ಈ ವೇಳೆ ಡಾರ್ಕ್ ವೆಬ್ನಲ್ಲಿ ಕೇವಲ 30 ನಿಮಿಷದಲ್ಲಿ ಎಕೆ-47 ಅನ್ನು ಖರೀದಿಸಬಹುದು ಎಂಬುದನ್ನು ತಿಳಿದುಕೊಂಡೆ” ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಇನ್ನು ವ್ಯಯಕ್ತಿಕ ಗೌಪ್ಯತೆ ಕುರಿತು ಗಮನ ಸೆಳೆದ ನ್ಯಾಯಮೂರ್ತಿ ದೀಪಕ್ ಗುಪ್ತಾ, “ನಾನು ನನ್ನವರಿಗೆ ನೀಡುವ ಏಕೈಕ ಸಲಹೆ ಎಂದರೆ ನೀವು ಆಂಡ್ರಾಯ್ಡ್ ಮೊಬೈಲ್ ಉಪಯೋಗಿಸುತ್ತಿದ್ದರೆ ಅದನ್ನು ಬಿಟ್ಟುಬಿಡಿ. ಪ್ರಸ್ತುತ ದಿನಗಳಲ್ಲಿ ಆಂಡ್ರಾಯ್ಡ್ ಫೋನ್ಗಳು ತೀರಾ ಅಪಾಯಕಾರಿ. ಇದು ವ್ಯಕ್ತಿಯ ಗೌಪ್ಯತೆ ಸೇರಿದಂತೆ ಸಂಕೀರ್ಣ ವಿಷಯಗಳನ್ನು ಒಳಗೊಂಡಿರುತ್ತವೆ. ಹೀಗಾಗಿ ಕೇಂದ್ರ ಸರ್ಕಾರ ವ್ಯಕ್ತಿಯ ಗೌಪ್ಯತೆಯನ್ನು ರಕ್ಷಿಸುವ ದೃಷ್ಟಿಯಿಂದ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು, ಕಾನೂನು ರೂಪಿಸಬೇಕು. ಅಕ್ಟೋಬರ್.22ರ ಒಳಗಾಗಿ ನ್ಯಾಯಾಲಯಕ್ಕೆ ಈ ಕುರಿತು ಶಿಫಾರಸು ಮಾಡಬೇಕು” ಎಂದು ಅವರು ಗಡುವು ನೀಡಿದ್ದಾರೆ.

ಇದೇ ಸಂದರ್ಭದಲ್ಲಿ ಸಾಮಾಜಿಕ ಮಧ್ಯಮಗಳ ಪೊಫೈಲ್ಗಳನ್ನು ಆಧಾರ್ ಜೊತೆಗೆ ಲಿಂಕ್ ಮಾಡುವ ಕುರಿತ ಸುಪ್ರೀಂ ಪ್ರಸ್ತಾವನೆಗೆ ಉತ್ತರಿಸಿದ ಕೇಂದ್ರ ಸರ್ಕಾರದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, “ನ್ಯಾಯಾಲಯದ ಪ್ರಸ್ತಾವನೆಯ ಕುರಿತು ಕೇಂದ್ರ ಸರ್ಕಾರ ಅಧ್ಯಯನ ನಡೆಸುತ್ತಿದೆ. ಅಧ್ಯಯನ ಇನ್ನೂ ಮುಗಿಯದ ಕಾರಣ ಸಾಮಾಜಿಕ ಮಾಧ್ಯಮಗಳ ಪ್ರೊಫೈಲ್ಗಳಿಗೆ ಆಧಾರ್ ಲಿಂಕ್ ಮಾಡುವ ಕುರಿತು ಇನ್ನೂ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

error: Content is protected !! Not allowed copy content from janadhvani.com