ಮದೀನಾ: ಈ ವರ್ಷದ ಪ್ರಥಮ ಭಾರತೀಯ ಹಜ್ ತಂಡವು ಜುಲೈ ನಾಲ್ಕರಂದು ಮದೀನಾ ತಲುಪಲಿದೆ. ಹಜ್ಜಾಜ್‌ಗಳಿಗೆ ಬೇಕಾದ ಸಕಲ ಸೌಕರ್ಯಗಳನ್ನು ಅಲ್ಲಿ ಸಜ್ಜುಗೊಳಿಸಲಾಗಿದೆ. ಮದೀನಾದಲ್ಲಿ ಎಂಟು ದಿವಸಗಳನ್ನು ಕಳೆದ ನಂತರ ಹಜ್ಜಾಜ್‌ಗಳು ಮಕ್ಕಾಗೆ ಹೊರಡಲಿದ್ದಾರೆ.
ಪ್ರಥಮ ಬಾರತೀಯ ಹಾಜಿಗಳ ತಂಡವು ನವ ದೆಹಲಿಯಿಂದ ಮದೀನಾ ತಲುಪಲಿದೆ. 420 ಯಾತ್ರಾರ್ಥಿಗಳನ್ನೊಳಗೊಂಡ ದೆಹಲಿಯ ತಂಡವು ಏರ್ ಇಂಡಿಯಾದ ಎಐ 5001 ಸಂಖ್ಯೆಯ ವಿಮಾನದ ಮೂಲಕ ಬಂದಿಳಿಯಲಿದೆ. ಮದೀನಾದ ಪ್ರಿನ್ಸ್ ಮುಹಮ್ಮದ್ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹಜ್ಜಾಜ್‌ಗಳು ಬಂದು ತಲುಪುವುದರೊಂದಿಗೆ ಈ ವರ್ಷದ ಭಾರತೀಯ ಹಜ್ ತಂಡದ ಯಾತ್ರೆ ಆರಂಭಗೊಳ್ಳಲಿದೆ.
ಹೊಸತಾಗಿ ನಿಯುಕ್ತರಾದ ಭಾರತೀಯ ಅಂಬಾಸಿಡರ್ ಔಸಾಫ್ ಸಈದ್, ಜಿದ್ದಾದ ಭಾರತೀಯ ಕೌನ್ಸಿಲರ್ ಜನರಲ್ ನೂರ್ ಮುಹಮ್ಮದ್ ರಹ್ಮಾನ್ ಶೈಖ್, ಹಜ್ ಕೌನ್ಸಿಲರ್ ಮೋಯಿನ್ ಅಖ್ತರ್, ಮದೀನಾದ ಹಜ್ ಮಿಷನ್ ಇನ್ ಚಾರ್ಜ್ ಶಿಹಾಬುದ್ದೀನ್ ಹಾಗೂ ವಿವಿಧ ಹಜ್ ಸೇವಾ ಸಂಘಟನೆಗಳ ಸಾರಥಿಗಳು ಹಜ್ಜಾಜ್‌ಗಳನ್ನು ಮದೀನಾ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಲಿದ್ದಾರೆ. ಮಸ್ಜಿದುನ್ನಬವಿಯ ಹತ್ತಿರದ ಮರ್ಕಝಿಯ್ಯಾದಲ್ಲಿ ಹಜ್ಜಾಜ್‌ಗಳಿಗೆ ವಾಸದ ವ್ಯವಸ್ಥೆಯನ್ನು ಸಜ್ಜುಗೊಳಿಸಲಾಗಿದೆ.