ಕೊಲೊಂಬೋ: ಕೆಲವು ದಿನಗಳ ಹಿಂದಷ್ಟೇ ಶ್ರೀಲಂಕಾದ ಕೊಲಂಬೋದಲ್ಲಿ ಚರ್ಚ್ ಮತ್ತು ಐಷಾರಾಮಿ ಹೋಟೆಲ್ಗಳ ಮೇಲೆ ಸರಣಿ ಬಾಂಬ್ ಸ್ಫೋಟ ನಡೆದಿರುವ ಹಿನ್ನೆಲೆಯಲ್ಲಿ ಶ್ರೀಲಂಕಾ ಭದ್ರತಾ ದೃಷ್ಟಿಯಿಂದ ಹಲವು ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಇದೇ ಕಾರಣಕ್ಕಾಗಿ ಸಾರ್ವಜನಿಕ ಸ್ಥಳದಲ್ಲಿ ಮುಖಕ್ಕೆ ಮುಸುಕು ಧರಿಸುವುದುದನ್ನು ನಿಷೇಧಿಸಿದೆ.
‘ದೇಶದ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಿಗಿಗೊಳಿಸಲು, ದುಷ್ಕರ್ಮಿಗಳ ಗುರುತು ಪತ್ತೆ ಮಾಡುವ ಸಲುವಾಗಿ ಅಧ್ಯಕ್ಷರು ಈ ಕ್ರಮ ಕೈಗೊಂಡಿದ್ದಾರೆ. ದುಷ್ಕರ್ಮಿಗಳು ತಪ್ಪಿಸಿಕೊಳ್ಳಲು ಯಾವೊಂದು ಅವಕಾಶವೂ ಸಿಗದಂತೆ ಮಾಡಲು ಹೀಗೆ ಮಾಡಲಾಗಿದೆ. ಬುರ್ಖಾ ಧರಿಸಿ ಮುಖಕ್ಕೆ ಬಟ್ಟೆಗಳನ್ನು ಕಟ್ಟಿಕೊಂಡು ಓಡಾಡುವುದನ್ನು ನಿಷೇಧಿಸಿದೆ ಎಂದು ಅಧ್ಯಕ್ಷರ ಕಚೇರಿಯ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.ಮುಖವನ್ನು ಮುಚ್ಚಿಕೊಂಡಿರುವವರನ್ನು ಅನುಮಾನಾಸ್ಪದ ವ್ಯಕ್ತಿಗಳೆಂದು ಪರಿಗಣಿಸಬೇಕಾಗುತ್ತದೆ. ಸಾರ್ವಜನಿಕ ಹಿತಾಸಕ್ತಿಗಾಗಿ ಈ ನಿಷೇಧದ ಆದೇಶ ಹೊರಡಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಎರಡು ಸಲಫಿ ಸಂಘಟನೆಗಳ ನಿಷೇಧ : ಬಾಂಬ್ ದಾಳಿ ಹಿನ್ನೆಲೆಯಲ್ಲಿ ಶ್ರೀಲಂಕಾ ಸರ್ಕಾರ 2 ಉಗ್ರ ಸಲಫಿ ಸಂಘಟನೆಗಳಾದ ನ್ಯಾಷನಲ್ ತವ್ಹೀದ್ ಜಮಾತ್ ಮತ್ತು ಜಮಾ ಅತ್ ಮಿಲ್ಲತಿ ಇಬ್ರಾಹೀಮ್ ಮೇಲೆ ನಿಷೇಧ ಹೇರಿದೆ . ಈ ಎರಡು ಮೂಲಭೂತವಾದಿ ಸಂಘಟನೆಗಳ ಮೇಲೆ ದಾಳಿಯ ಕುರಿತಾಗಿ ಅನುಮಾನವಿಟ್ಟುಕೊಂಡಿವೆ. ಆದರೆ, ಐಎಸ್‌ಐಎಸ್ ಸಂಘಟನೆ ಈಗಾಗಲೇ ದಾಳಿಯ ಹೊಣೆ ಹೊತ್ತಿದೆ. ದಾಳಿಕೋರರು ಮತ್ತು ಉಗ್ರ ಸಂಘಟನೆಗಳ ನಡುವಿನ ಸಂಬಂಧದ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಕಳೆದ 21ರ ಈಸ್ಟರ್ ಹಬ್ಬದಂದು ಶ್ರೀಲಂಕಾದ ಕೊಲೊಂಬೋದಲ್ಲಿ ಚರ್ಚ್ ಮತ್ತು ಹೊಟೇಲ್‌ಗಳಲ್ಲಿ ಆತ್ಮಾಹುತಿ ಬಾಂಬ್ ನಡೆದಿದ್ದು, ಈ ವರೆಗೆ 250 ಮಂದಿ ಮೃತಪಟ್ಟಿದ್ದಾರೆ. 500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅದರಲ್ಲಿ ಕರ್ನಾಟಕದ ಹಲವರು ಸಾವಿಗೀಡಾಗಿದ್ದರು.