ನವದೆಹಲಿ: ಪ್ರಚಾರದ ವೇಳೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಬಿಎಸ್‌ಪಿ ನಾಯಕಿ ಮಾಯಾವತಿ ಅವರಿಗೆ ಪ್ರಚಾರದಲ್ಲಿ ಭಾಗಿಯಾಗದಂತೆ ಚುನಾವಣೆ ಆಯೋಗ ನಿರ್ಬಂಧ ಹೇರಿದೆ.
ಯೋಗಿ ಆದಿತ್ಯನಾಥ್ ಅವರಿಗೆ ಮೂರು ದಿನ (72 ಗಂಟೆ) ಮತ್ತು ಮಾಯಾವತಿ ಅವರಿಗೆ ಎರಡು ದಿನಗಳ (48 ಗಂಟೆ) ಕಾಲ ಪ್ರಚಾರ ಮಾಡದಂತೆ ನಿರ್ಬಂಧ ವಿಧಿಸಲಾಗಿದೆ. ನಿರ್ಬಂಧದ ಅವಧಿಯು ಮಂಗಳವಾರ ಬೆಳಗ್ಗೆ 6 ಗಂಟೆಯಿಂದ ಅರಂಭವಾಗಲಿದೆ.
ಮುಸಲ್ಮಾನ್ ಸಮುದಾಯ ಆರಾಧಿಸುವ ಅಲಿ ಮತ್ತು ಹಿಂದೂ ದೇವರಾದ ಭಜರಂಗಬಲಿ ವಿಚಾರವಾಗಿ ಯೋಗಿ ಆದಿತ್ಯನಾಥ್ ಮತ್ತು ಮಾಯಾವತಿ ಅವರ ನಡುವೆ ವಾಗ್ವಾದ ನಡೆದಿತ್ತು. ಇದನ್ನು ಚುನಾವಣಾ ನೀತಿ ಸಂಹಿತಿ ಉಲ್ಲಂಘನೆ ಎಂದು ಪರಿಗಣಿಸಿರುವ ಆಯೋಗ, ಇಬ್ಬರೂ ಚುನಾವಣೆ ಪ್ರಚಾರದಲ್ಲಿ ಭಾಗಿಯಾಗಬಾರದು ಎಂದು ನಿರ್ದಿಷ್ಟ ಅವಧಿಗೆ ನಿರ್ಬಂಧಿಸಿದೆ.
ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳಲ್ಲಿ ಚುನಾವಣೆ ಆಯೋಗ ಕ್ರಮ ಕೈಗೊಳ್ಳದೇ ಇರುವುದಕ್ಕೆ ಸುಪ್ರೀಂ ಕೋರ್ಟಿನಿಂದ ತರಾಟೆಗೊಳಗಾದ ಬೆನ್ನಿಗೇ ಆಯೋಗ ಈ ಕ್ರಮ ಕೈಗೊಂಡಿದೆ.