janadhvani

Kannada Online News Paper

ದುಬೈ: ವಿಶ್ವ ಸೌಹಾರ್ದ ಸಮ್ಮಿಳನದಲ್ಲಿ ಕಾಂತಪುರಂ ಎ.ಪಿ.ಉಸ್ತಾದ್ ಭಾಷಣ

ಅಬುಧಾಬಿ: ಧರ್ಮಗಳ, ಧಾರ್ಮಿಕ ಸಂಹಿತೆಗಳ ಶಾಂತಿಯುತ ಮಧ್ಯಸ್ಥಿಕೆಗಳು ವಿಶ್ವ ಶಾಂತಿಗೆ ಅತ್ಯಂತ ಅನಿವಾರ್ಯವಾಗಿದ್ದು, ಸಹಿಷ್ಣುತೆ ಮತ್ತು ಸಹಜೀವನವು ವಿಶ್ವಾಸಿಗಳ ಮಧ್ಯೆ ಪರಸ್ಪರ ಬೇರೂರಬೇಕಾಗಿದೆ ಎಂದು ಅಖಿಲ ಭಾರತ ಉಲಮಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಹೇಳಿದ್ದಾರೆ.

ಯುಎಇ ಸರಕಾರದ ಮೇಲ್ನೋಟದಲ್ಲಿ ನಡೆಯುವ ವಿಶ್ವ ಸರ್ವ ಧರ್ಮೀಯ ಸೌಹಾರ್ದ ಸಮ್ಮೇಳನದ ಮೊದಲ ದಿನದ ಅಧಿವೇಶನದಲ್ಲಿ ಅವರು ಮಾತನಾಡುತ್ತಿದ್ದರು.

ಕ್ರೈಸ್ತ ಪರಮ ಗುರು ಪೋಪ್ ಮುಖ್ಯ ಅತಿಥಿಯಾಗಿ ಭಾಗವಹಿಸುವ ಅಧಿವೇಶನವನ್ನು ಯುನೈಟೆಡ್ ಅರಬ್ ಎಮಿರೇಟ್ಸ್ ಸಹಿಷ್ನುತೆ ವ್ಯವಹಾರಗಳ ಸಚಿವ ಶೇಖ್ ನಹ್ಯಾನ್ ಬಿನ್ ಮುಬಾರಕ್ ಅಲ್ ನಹ್ಯಾನ್, ಉದ್ಘಾಟಿಸಿದರು. ಅರಬ್ ಪ್ರಪಂಚದ ಅತಿದೊಡ್ಡ ಸರ್ವ ಧರ್ಮೀಯ ಸಂಗಮವಾಗಿ ಈ ಸಮ್ಮೇಳನವನ್ನು ಪರಿಗಣಿಸಲಾಗುತ್ತಿದೆ.

ವಿವಿಧ ಧಾರ್ಮಿಕ ನಾಯಕರ ಮಧ್ಯೆ ಸೃಜನಾತ್ಮಕ ಚರ್ಚೆಗಳು ನಡೆಯಬೇಕು ಮತ್ತು ವಿಶ್ವಾಸಿಗಳ ಹೊಸ ವಿಶ್ವದಲ್ಲಿ ಅವರನ್ನು ಕ್ರಿಯಾತ್ಮಕವಾಗಿ ಮುನ್ನಡೆಸಲು ಅವಶ್ಯಕವಾದ ಜವಾಬ್ದಾರಿಕೆ ಬೇಕಾಗಿದೆ ಎಂದು ಕಾಂತಪುರಂ ಹೇಳಿದರು. ಅವರು ಮಾನವ ಸೌಹಾರ್ದದ ತತ್ವಗಳು ಎಂಬ ವಿಷಯದ ಆಧಾರದಲ್ಲಿ ಮಾತನಾಡಿ, ಪವಿತ್ರ ಇಸ್ಲಾಮಿನ ದರ್ಶನಗಳ ಹತ್ತು ಯೋಜನೆಗಳನ್ನು ಪ್ರಸ್ತುತಪಡಿಸಿದರು.

ಸಮಾಧಾನಕ್ಕಾಗಿ ಹಾತೊರೆಯುವ ದೇಶಗಳ ಮಧ್ಯೆ ಚರ್ಚೆಗಳನ್ನು ಮುಂದುವರಿಸಬೇಕು, ಮ್ಯಾನ್ಮಾರ್ ನಂಥಹ ದೇಶಗಳು ತನ್ನೆಲ್ಲಾ ನಾಗರಿಕರಿಗೆ ಮಾನವಹಕ್ಕನ್ನು ಖಚಿತಗೊಳಿಸಬೇಕು. ಧಾರ್ಮಿಕ ನಾಯಕರ ಮಧ್ಯೆ ಸಹಿಷ್ಣುತೆಯ ಚರ್ಚೆಗಳನ್ನು ಮುಂದುವರಿಸಬೇಕು ಮುಂತಾದ ನಿರ್ದೇಶಗಳನ್ನು ಅವರು ವಿವಿಧ ಧಾರ್ಮಿಕ ನಾಯಕರೊಂದಿಗೆ ಹಂಚಿಕೊಂಡರು. ಯುಎಇ ಸರಕಾರ ನಡೆಸುವ ಇಂತಹ ಕಾರ್ಯಕ್ರಮಗಳು ಜಗತ್ತಿಗೆ ಮಾದರಿಯಾಗಲಿ ಎಂದವರು ಆಶಯ ವ್ಯಕ್ತಪಡಿಸಿದರು.

ಮೊರಾಕೋದ ಮಾನವ ಸಂಪನ್ಮೂಲ ಕೇಂದ್ರದ ಮುಖ್ಯಸ್ಥ ಡಾ.ಸಾಮಿರ್ ಬೌಡಿನಾರ್, ಬೊಸ್ನಿಯಾ ಸ್ಕಾಲರ್ಸ್ ಮುಖ್ಯಸ್ಥ ಡಾ. ಮುಸ್ತಫಾ ಸಿರಿಕ್, ಜೆರುಸಲೇಂನ ರಬ್ಬಿ ಮೀರ್ ಹಿರ್ಸ್ ಅಧಿವೇಶನದಲ್ಲಿ ಮಾತನಾಡಿದರು.

ವಿಶ್ವದ ನೂರು ರಾಷ್ಟ್ರಗಳಿಂದ 600 ವಿದ್ವಾಂಸರು ಮೂರು ದಿನಗಳ ಸಭೆಯಲ್ಲಿ ಭಾಗವಹಿಸುವರು. ಮುಸ್ಲಿಂ ಜಮಾತ್ ಕೇರಳ ರಾಜ್ಯ ಕಾರ್ಯದರ್ಶಿ ಸಯ್ಯಿದ್ ಇಬ್ರಾಹಿಂ ಖಲೀಲುಲ್ ಬುಖಾರಿ ಮಾತನಾಡುವರು.

error: Content is protected !! Not allowed copy content from janadhvani.com