janadhvani

Kannada Online News Paper

ಬೆಂಗಳೂರು: ಮಂಗಳವಾರ ಮಧ್ಯಾಹ್ನ ರಾಜ್ಯದಲ್ಲಿ ಆಪರೇಷನ್ ಕಮಲ ನಡೆದೇ ಹೋಗುತ್ತೆ ಎನ್ನುವಂತೆ ಪಕ್ಷೇತರ ಶಾಸಕರಿಬ್ಬರು ಮೈತ್ರಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂಪಡೆದಿದ್ದರು.ಅದೇ ರೀತಿಯಾಗಿ ನಾಯಕರು ಸಭೆಗಳ ಮೇಲೆ ಸಭೆ ನಡೆಸಿದ್ದರು. ಆದರೆ ಈಗ ಬಿಜೆಪಿ ಗೂಡಿನಲ್ಲಿದ್ದಾರೆ ಎನ್ನಲಾದ ಕಾಂಗ್ರೆಸ್ ಶಾಸಕರಾದ ಭೀಮಾನಾಯ್ಕ್ ಮತ್ತು ಕಂಪ್ಲಿ ಗಣೇಶ್ ಬಿಜೆಪಿ ಗೂಡಿನಿಂದ ಹೊರ ಬಂದಿದ್ದಾರೆ.

ಪಕ್ಷೇತರ ಶಾಸಕರಿಬ್ಬರ ಬೆಂಬಲ ವಾಪಸ್ ಪಡೆದಿದ್ದು ಆಪರೇಷನ್ ಕಮಲದ ಮೊದಲ ಹಂತ ಎಂದು ಹೇಳಲಾಗಿತ್ತು. ಮುಂಬೈನಲ್ಲಿ ಮಾತನಾಡಿದ್ದ ಪಕ್ಷೇತರ ಆರ್.ಶಂಕರ್ ಮತ್ತು ಹೆಚ್.ನಾಗೇಶ್ ಬಿಜೆಪಿಗೆ ಬೆಂಬಲ ನೀಡುವುದಾಗಿ ಹೇಳಿದ್ದರು. ಈಗ ಕಳೆದ ಮೂರ್ನಾಲ್ಕು ದಿನಗಳಿದ್ದ ಯಾರ ಸಂಪರ್ಕಕ್ಕೆ ಸಿಗದ ಭೀಮಾನಾಯ್ಕ್ ಮತ್ತು ಗಣೇಶ್ ಇಂದು ದಿಢೀರ್ ಆಗಿ ಬೆಂಗಳೂರಿಗೆ ವಾಪಸ್ ಆಗುತ್ತಿದ್ದಾರೆ.ಪಕ್ಷೇತರರು ರಾಜೀನಾಮೆ ನೀಡಿದ ಬಳಿಕ ಬುಧವಾರ ಕಾಂಗ್ರೆಸ್ಸಿನ 6 ಮಂದಿ ಶಾಸಕರು ರಾಜೀನಾಮೆ ನೀಡಲಿದ್ದಾರೆ ಎನ್ನುವ ಸುದ್ದಿ ಮೂಲಗಳಿಂದ ಬಂದಿತ್ತು. ಆದರೆ ಈಗ ಬಿಜೆಪಿ ಗೂಡಿನಿಂದ ಇಬ್ಬರು ಹೊರ ಬಂದಿದ್ದಾರೆ.

ಮುಂಬೈನಲ್ಲಿ ಈಗ 3-4 ಶಾಸಕರು ಇದ್ದು, ಶಾಸಕ ಉಮೇಶ್ ಜಾಧವ್ ಕೂಡ ಉಲ್ಟಾ ಹೊಡೆಯುವ ಸಾಧ್ಯತೆಯಿದೆ. ಉಮೇಶ್ ಜಾಧವ್ ವಾಪಸ್ ಬಗ್ಗೆ ಸಹೋದರ ರಾಮಚಂದ್ರ ಜಾಧವ್ ಸುಳಿವು ನೀಡಿದ್ದಾರೆ. ರಮೇಶ್ ಜಾರಕಿಹೊಳಿ, ಮಹೇಶ್ ಕಮಟಳ್ಳಿ ನಡೆ ಮಾತ್ರ ನಿಗೂಢವಾಗಿದೆ.
ಆಪರೇಷನ್ ಕಮಲಕ್ಕೆ ದೋಸ್ತಿಗಳ ರಿವರ್ಸ್ ಆಪರೇಷನ್ ಪರಿಣಾಮ ಇಬ್ಬರು ಬಿಜೆಪಿ ಸೇರುವ ನಿರ್ಧಾರದಿಂದ ಹಿಂದಕ್ಕೆ ಸರಿದಿದ್ದಾರೆ ಎನ್ನಲಾಗಿದೆ. ಅಸಮಾಧಾನಗೊಂಡ ಶಾಸಕರ ಎಲ್ಲ ಬೇಡಿಕೆಗಳನ್ನು ರಾಜ್ಯ ನಾಯಕರು ಒಪ್ಪಿಕೊಂಡ ಹಿನ್ನೆಲೆಯಲ್ಲಿ ಈ ಶಾಸಕರು ಬೆಂಗಳೂರಿಗೆ ಬರುತ್ತಿದ್ದಾರೆ ಎನ್ನಲಾಗಿದೆ. ಕೊನೆಕ್ಷಣದಲ್ಲಿ ಹೈಕಮಾಂಡ್ ಯಾವುದೇ ಕಾರಣಕ್ಕೂ ಸರ್ಕಾರ ಬೀಳಲು ಅವಕಾಶ ಮಾಡಿಕೊಡಬೇಡಿ ಎಂದು ಸೂಚಿಸಿದ ಹಿನ್ನೆಲೆಯಲ್ಲಿ ರಾಜ್ಯ ನಾಯಕರು ಪ್ರತಿತಂತ್ರ ಹೂಡಿದ ಪರಿಣಾಮ ಬಿಜೆಪಿಯ ಆಪರೇಷನ್ ಕಮಲ ವಿಫಲಗೊಂಡಿದೆ ಎನ್ನುವ ಮಾತು ಕೇಳಿ ಬಂದಿದೆ.

ಬಿಜೆಪಿ ಪದೇ ಪದೇ ಆಪರೇಷನ್ ಕಮಲಕ್ಕೆ ‘ಕೈ’ ಹಾಕಲು ಕಾರಣವೇನು?
ನವದೆಹಲಿ: ರಾಜ್ಯ ರಾಜಕೀಯ ವಿದ್ಯಮಾನಗಳು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿವೆ, ಕರ್ನಾಟಕದಲ್ಲಿ ಅಸ್ಥಿತ್ವದಲ್ಲಿರುವ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಅಡಿ ಮುಂಬರುವ ಲೋಕಸಭೆ ಚುನಾವಣೆ ಎದುರಿಸಲು ಕೇಂದ್ರದ ಬಿಜೆಪಿ ನಾಯಕರಿಗೆ ಸುತರಾಂ ಇಷ್ಟ ಇಲ್ಲ ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಗಳು ರಾಜ್ಯದ ಆಡಳಿತ ಯಂತ್ರವನ್ನು ದುರುಪಯೋಗ ಪಡಿಸಿಕೊಳ್ಳುತ್ತವೆ ಎಂಬ ಭಯ ಬಿಜೆಪಿಗೆ ಕಾಡುತ್ತಿದೆ,ಬಿಜೆಪಿ ರಾಜ್ಯದಲ್ಲಿ ಸರ್ಕಾರ ರಚಿಸಲು ಯತ್ನಿಸುತ್ತಿಲ್ಲ, ಬದಲಿಗೆ ಸರ್ಕಾರ ಉರುಳಿಸಲು ಮಾತ್ರ ಬಿಜೆಪಿ ಸಿದ್ಧವಾಗಿದೆ, ಹೀಗಾಗಿ ಶಾಸಕರನ್ನು ದೂರ ಕರೆದೊಯ್ದಿದೆ.ಸದ್ಯ ಅಸ್ಥಿತ್ವದಲ್ಲಿರುವ  ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸುವುದಷ್ಟೇ ಬಿಜೆಪಿ ಗುರಿ ಎಂದು ಬಿಜೆಪಿ ಸದಸ್ಯರೊಬ್ಬರು ತಿಳಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿಗೆ ಎಲ್ಲಾ ಸಮೂಹದ ಜನರ ಪ್ರಬಲ ಬೆಂಬಲವಿಲ್ಲ, ಹೀಗಾಗಿ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ದೋಸ್ತಿ ಪಕ್ಷಗಳು ಸರ್ಕಾರಿ ಯಂತ್ರ ದುರುಪಯೋಗ ಪಡಿಸಿಕೊಳ್ಳುತ್ತವೆ ಎಂದು ನಂಬಿರುವ ಬಿಜೆಪಿ ರಾಜ್ಯ ಸರ್ಕಾರಕ್ಕೆ ಕೌಂಟರ್ ಕೊಡಲು ಮುಂದಾಗಿದೆ.

error: Content is protected !! Not allowed copy content from janadhvani.com