janadhvani

Kannada Online News Paper

ವಾಷಿಂಗ್ಟನ್:- ಅಕ್ರಮ ವಲಸೆ ತಡೆಗಾಗಿ ಮೆಕ್ಸಿಕೋ ಗಡಿಯಲ್ಲಿ ಗೋಡೆ ನಿರ್ಮಾಣವಾಗಬೇಕೆಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬಿಗಿಪಟ್ಟು ಮತ್ತು ಅದನ್ನು ಒಪ್ಪಲು ಪ್ರತಿಪಕ್ಷ ಡೆಮೊಕ್ರಾಟ್ ನಿರಾಕರಿಸಿರುವುದರ ಪರಿಣಾಮ ಸರ್ಕಾರಿ ಆಡಳಿತ ಯಂತ್ರ ಸ್ಥಗಿತಗೊಂಡು ಇಂದಿಗೆ 22 ದಿನಗಳಾಗಿವೆ.

ಇದು ಅಮೆರಿಕ ಇತಿಹಾಸದಲ್ಲೇ ದಾಖಲೆಯ ಸರ್ಕಾರ ಸ್ಥಗಿತವಾಗಿದ್ದು, ತತ್ಪರಿಣಾಮ 8 ಲಕ್ಷ ಸರ್ಕಾರಿ ಉದ್ಯೋಗಿಗಳು ವೇತನವಿಲ್ಲದೇ ಪರದಾಡುವಂತಾಗಿದೆ. ಅಕ್ರಮ ವಲಸೆ ಮತ್ತು ಅಪರಾಧ ಕೃತ್ಯಗಳನ್ನು ತಡೆಯಲು ಅಮೆರಿಕ-ಮೆಕ್ಸಿಕೋ ಗಡಿಯಲ್ಲಿ 5.7 ಶತಕೋಟಿ ಡಾಲರ್ ಮೊತ್ತದಲ್ಲಿ ಕಾಂಕ್ರೀಟ್ ಅಥವಾ ಉಕ್ಕಿನ ಗೋಡೆ ನಿರ್ಮಾಣವಾಗಬೇಕು.

ಇದಕ್ಕಾಗಿ ಹಣ ಮಂಜೂರಾತಿಗೆ ಒಪ್ಪಿಗೆ ನೀಡಬೇಕೆಂದು ಟ್ರಂಪ್ ಆಗ್ರಹಿಸಿದ್ದರು. ಆದರೆ ಇದಕ್ಕೆ ಡೆಮೊಕ್ರಾಟ್ ಪಕ್ಷದ ಸಂಸದರು ನಿರಾಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹಗ್ಗ ಜಗ್ಗಾಟದಿಂದ ಕಳೆದ 22 ದಿನಗಳಿಂದ ಸರ್ಕಾರದ ಆಡಳಿತ ಯಂತ್ರ ಬಂದ್ ಆಗಿದೆ.

ಇದರಿಂದಾಗಿ ಅಮೆರಿಕಾದ ಪ್ರತಿಷ್ಠಿತ ತನಿಖಾ ಸಂಸ್ಥೆ ಎಫ್‍ಬಿಐ, ವಾಯು ನಿಯಂತ್ರಣ ಅಧಿಕಾರಿಗಳು, ವಸ್ತುಸಂಗ್ರಹಾಲಯದ ಸಿಬ್ಬಂದಿ ಸೇರಿದಂತೆ ಎಂಟು ಲಕ್ಷಕ್ಕೂ ಅಧಿಕ ಸರ್ಕಾರಿ ಉದ್ಯೋಗಿಗಳಿಗೆ ಶುಕ್ರವಾರ ನೀಡಬೇಕಾದ ವೇತನದ (ವಾರದ ವೇತನ) ಚೆಕ್‍ಗಳು ಬಟವಾಡೆಯಾಗಿಲ್ಲ.

ಇದರಿಂದ ಉನ್ನತಾಧಿಕಾರಿಗಳೂ ಒಳಗೊಂಡಂತೆ ತೀರಾ ಸಾಮಾನ್ಯ ಹುದ್ದೆಯ ನೌಕರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಮಧ್ಯೆ, ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸುವುದಾಗಿಯೂ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪದೇ ಪದೇ ಎಚ್ಚರಿಕೆ ನೀಡುತ್ತಿದ್ದಾರೆ.

error: Content is protected !! Not allowed copy content from janadhvani.com