ನವದೆಹಲಿ, ಸೆ.30- ಸುಮಾರು 50ಲಕ್ಷ ಜನರನ್ನು ಕೊಲ್ಲುವ ಅಗಾಧ ಸಾಮಥ್ರ್ಯದ ಅತ್ಯಂತ ವಿನಾಶಕಾರಿ ರಾಸಾಯನಿಕ ಪೆಂಟಿನಿಲ್‍ನನ್ನು ಮಧ್ಯಪ್ರದೇಶದ ಇಂದೋರ್‍ನಲ್ಲಿ ವಶಪಡಿಸಿಕೊಂಡಿರುವ ಆದಾಯ, ಗುಪ್ತಚರ ನಿರ್ದೇಶನಾಲಯ (ಡಿಆರ್‍ಐ) ಮತ್ತು ಡಿಆರ್‍ಡಿಒ ವಿಜ್ಞಾನಿಗಳ ತಂಡ, ಅಮೆರಿಕದಿಂದ ಪಿಎಚ್‍ಡಿ ಪದವಿ ಪಡೆದ ರಾಸಾಯನಿಕ ತಜ್ಞ ಹಾಗೂ ಮೆಕ್ಸಿಕೋ ಪ್ರಜೆಯೊಬ್ಬನನ್ನು ಬಂಧಿಸಿದ್ದಾರೆ. ಜಪ್ತಿ ಮಾಡಲಾದ ರಾಸಾಯನಿಕದ ಮೌಲ್ಯ 110 ಕೋಟಿ ರೂ.ಗಳು.
ಭಾರತದಲ್ಲಿ ತನಿಖಾ ಸಂಸ್ಥೆಯಿಂದ ಇಷ್ಟು ದೊಡ್ಡ ಪ್ರಮಾಣದಲ್ಲಿ ಈ ಡೆಡ್ಲಿ ಕೆಮಿಕಲ್ಸ್‍ನನ್ನು ವಶಪಡಿಸಿಕೊಂಡಿರುವುದು ಇದೇ ಪ್ರಥಮ. ಅಲ್ಲದೇ ಇಂಥ ಅತ್ಯಂತ ವಿನಾಶಕಾರಿ ರಾಸಾಯನಿಕವನ್ನು ಮೊದಲ ಬಾರಿಗೆ ದೇಶದಲ್ಲಿ ಅಕ್ರಮವಾಗಿ ತಯಾರಿಸಿ ಅಪಾರ ಸಂಖ್ಯೆಯ ಸಾವು-ನೋವುಗಳಿಗೆ ಕಾರಣವಾಗಲಿದ್ದ ಅಕ್ರಮ ಪ್ರಯೋಗಾಲಯಕ್ಕೆ ಅಧಿಕಾರಿಗಳು ಬೀಗ ಜಡಿದಿದ್ದಾರೆ.
ಕೇಂದ್ರ ಸರ್ಕಾರದ ರಕ್ಷಣಾ ಇಲಾಖೆಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ದಿ ಸಂಸ್ಥೆ(ಡಿಆರ್‍ಡಿಒ) ವಿಜ್ಞಾನಿಗಳ ಸಹಾಯದೊಂದಿಗೆ ಇಂದೋರ್‍ನಲ್ಲಿ ಅನಧಿಕೃತ ಪ್ರಯೋಗಾಲಯವನ್ನು ಪತ್ತೆ ಮಾಡಿ 9 ಕೆಜಿ ಅತ್ಯಂತ ಅಪಾಯಕಾರಿ ಸಿಂಥೆಟಿಕ್ ರಾಸಾಯನಿಕ ಪೆಂಟನಿಲ್‍ನನ್ನು ಜಪ್ತಿ ಮಾಡಿದ್ಧಾರೆ. ಇದು ಸುಮಾರು ಐದು ದಶಲಕ್ಷ ಜನರನ್ನು ಕೊಲ್ಲುವ ಸಾಮಥ್ರ್ಯ ಹೊಂದಿದೆ.
ಈ ಅಕ್ರಮ ಲ್ಯಾಬೋರೇಟರಿಯನ್ನು ಸ್ಥಳೀಯ ಉದ್ಯಮಿ ಹಾಗೂ ಅಮೆರಿಕದಿಂದ ಪಿಎಚ್‍ಡಿ ಪಡೆದ ರಾಸಾಯನಿಕ ವಿದ್ವಾಂಸ ಪಾಲುದಾರಿಕೆಯಲ್ಲಿ ನಡೆಸುತ್ತಿದ್ದರು. ಒಂದು ವಾರಗಳ ಸತತ ಕಾರ್ಯಾಚರಣೆ ನಂತರ ಈ ವ್ಯವಸ್ಥಿತ ಜಾಲವನ್ನು ಭೇದಿಸಲಾಗಿದೆ. ಪೆಂಟನಿಲ್ ರಾಸಾಯನಿಕವನ್ನು ಭಾರತದಲ್ಲಿ ಇದೇ ಮೊದಲ ಬಾರಿಗೆ ವಶಪಡಿಸಿಕೊಳ್ಳಲಾಗಿದ್ದು, ಇದನ್ನು ಭಯೋತ್ಪಾದಕರ ದಾಳಿ ಅಥವಾ ಯುದ್ಧದ ಸಂದರ್ಭದಲ್ಲಿ ಬಳಸಿದ್ದೇ ಆದರೆ ಭಾರೀ ಪ್ರಮಾಣದ ಸಾವು-ನೋವುಗಳಿಗೆ ಕಾರಣವಾಗಲಿದೆ. ಇಷ್ಟು ದೊಡ್ಡ ಪ್ರಮಾಣದ ಈ ರಾಸಾಯನಿಕವನ್ನು ಜಪ್ತಿ ಮಾಡುವ ಮೂಲಕ ಸಂಭವನೀಯ ಅನಾಹುತವನ್ನು ತಪ್ಪಿಸುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಇದೊಂದು ಅತ್ಯಂತ ಮಹತ್ವದ ಮತ್ತು ವಿಶಿಷ್ಟ ಕಾರ್ಯಾಚರಣೆಯಾಗಿದೆ. 110 ಕೋಟಿ ರೂ. ಬೆಲೆಬಾಳುವ ಪೆಂಟನಿಲ್‍ನನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಆರ್‍ಐ ಮಹಾ ನಿರ್ದೇಶಕ ಡಿ.ಪಿ.ಡ್ಯಾಶ್ ವಿವರಿಸಿದ್ದಾರೆ.
ಅಕ್ರಮ ಪ್ರಯೋಗಾಲಯದಲ್ಲಿ ಇದನ್ನು ತಯಾರಿಸಲಾಗುತ್ತಿದ್ದ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಿದ ಡಿಆರ್‍ಐ ಅಧಿಕಾರಿಗಳು ಡಿಆರ್‍ಡಿಒ ವಿಜ್ಞಾನಿಗಳು ಮತ್ತು ಸಂಶೋಧಕರ ತಂಡದ ನೆರವಿನೊಂದಿಗೆ ಈ ಕಾರ್ಯಾಚರಣೆ ನಡೆಸಲಾಗಿದೆ. ಜಪ್ತಿ ಮಾಡಲಾದ ಪೆಂಟನಿಲ್ ರಾಸಾಯನಿಕದ ತೀವ್ರತೆ ಮತ್ತು ವಿನಾಶದ ಸಾಧ್ಯತೆಯನ್ನು ವಿಜ್ಞಾನಿಗಳು ಖಚಿತಪಡಿಸಿದ್ದಾರೆ.
ಬೇಹುಗಾರಿಕೆ ಮತ್ತು ಸೇನಾ ಕಾರ್ಯಾಚರಣೆಗಳ ಕುರಿತ ಜಗದ್ವಿಖ್ಯಾತ ಲೇಖಕ ಅಲಿಸ್ಟರ್ ಮ್ಯಾಕ್‍ಲಿನ್ ಅವರ ಸಟಾನ್ ಬಗ್ ಎಂಬ ಸ್ಪೈ ಥ್ರಿಲ್ಲರ್ ಕಾದಂಬರಿ ಸಟಾನ್ ಬಗ್ ಸನ್ನಿವೇಶಗಳನ್ನು ನೆನಪಿಗೆ ತರುತ್ತದೆ.
ಏನಿದು ಪೆಂಟನಿಲ್..?
ಹೆರಾಯಿನ್ ಮಾದಕ ವಸ್ತುವಿಗಿಂತಲೂ 50 ಪಟ್ಟು ಹೆಚ್ಚು ಪ್ರಬಲವಾಗಿರುವ ಈ ರಾಸಾಯನಿಕ ಮೂಗಿನ ಮೂಲಕ ದೇಹದ ಒಳಗೆ ಪ್ರವೇಶಿಸಿದರೆ ಸಾವು ಖಚಿತ. ಈ ರಾಸಾಯನಿಕವನ್ನು ಭಾರತದಲ್ಲಿ ತಯಾರಿಸುತ್ತಿದ್ದ ಜಾಲ ಪತ್ತೆಯಾಗಿರುವುದು ದೇಶದ ವಿಜ್ಞಾನಿಗಳಲ್ಲಿ ಭಯಾಶ್ಚರ್ಯಗಳನ್ನು ಉಂಟು ಮಾಡಿದೆ. ಏಕೆಂದರೆ ಇಂಥ ರಾಸಾಯನಿಕವನ್ನು ತಯಾರಿಸುವುದು ಅಷ್ಟು ಸುಲಭವಲ್ಲ. ಅತ್ಯಂತ ನುರಿತ ವಿಜ್ಞಾನಿಗಳು ಮತ್ತು ಅತ್ಯಾಧುನಿಕ ಸಂಶೋಧನಾ ಪ್ರಯೋಗಾಲಯಗಳಲ್ಲಿ ಮಾತ್ರ ಪೆಂಟನಿಲ್ ರಾಸಾಯನಿಕವನ್ನು ತಯಾರಿಸಲು ಸಾಧ್ಯ.
ಪೆಂಟನಿಲ್ ವೈದ್ಯಕೀಯ ಕ್ಷೇತ್ರದಲ್ಲಿ ಬಹು ಎಚ್ಚರಿಕೆಯಿಂದ ಬಳಸಲಾಗುತ್ತದೆ. ಇದೊಂದು ನಿಯಂತ್ರಣ ರಾಸಾಯನಿಕ ವಸ್ತುವಾಗಿದ್ದು, ಅನಸ್ತೇಷಿಯ ಮತ್ತು ನೋವು ನಿವಾರಕ ಔಷಧಿಗಳ ತಯಾರಿಕೆಯಲ್ಲಿ ಅತ್ಯಂತ ತೇಳು ಪ್ರಮಾಣದಲ್ಲಿ ಬಳಸಲಾಗುತ್ತದೆ. ಇದನ್ನು ಪ್ರಬಲ ರೂಪದಲ್ಲಿ ಬಳಸಿದರೆ ಸಾವು ಸಂಭವಿಸುತ್ತದೆ.
ಇದನ್ನು ರಾಸಾಯನಿಕ ಕ್ಷೇತ್ರದಲ್ಲಿ ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಲಾಗಿದೆ. ಇದು ಸುಲಭವಾಗಿ ಹರಡುತ್ತದೆ. ಇದು ಚರ್ಮ ಅಥವಾ ಆಕಸ್ಮಿಕವಾಗಿ ಮೂಗಿನ ಮೂಲಕ ದೇಹದ ಒಳಗೆ ಪ್ರವೇಶಿಸುತ್ತದೆ. ಕೇವಲ 2 ಎಂಜಿ(ಮಿಲಿಗ್ರಾಂ) ಪೆಂಟನಿಲ್ ವ್ಯಕ್ತಿಯನ್ನು ಕೊಲ್ಲುತ್ತದೆ. ಇದು ಮೊರ್ಫೈನ್ ಮಾದಕ ವಸ್ತುವಿನಿಂದಲೂ 110 ಪಟ್ಟು ಪ್ರಬಲ. ಪೆಂಟನಿಲ್ ರಾಸಾಯನಿಕವನ್ನು ಅಮೆರಿಕ ಮಾದಕ ವಸ್ತು ಕಳ್ಳಸಾಗಣೆ ಜಾಲ(ಡ್ರಗ್ ಸಿಂಡಿಕೇಟ್) ಮೂಲಕ ಕಳ್ಳಸಾಗಣೆ ಮಾಡಲಾಗುತ್ತದೆ. ಇದು ಅತ್ಯಂತ ದುಬಾರಿಯಾಗಿದ್ದು, ಇತರ ರಾಸಾಯನಿಕಗಳೊಂದಿಗೆ ಸೇರಿಸಿ ಇದನ್ನು ಮಾತ್ರೆಗಳ ರೂಪದಲ್ಲಿ ಮಾರಾಟ ಮಾಡಲಾಗುತ್ತದೆ.
2016ರಲ್ಲಿ ಅಮೆರಿಕವೊಂದರಲ್ಲೇ ಪೆಂಟನಿಲ್ ಓವರ್‍ಡೋಸ್(ಅತಿಯಾದ ಪ್ರಮಾಣ)ನಿಂದಾಗಿ 20,000ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ಅಮೆರಿಕ ಅಧಿಕಾರಿಗಳ ಹೇಳಿಕೆಯನ್ನು ಉಲ್ಲೇಖಿಸಿ ಮೂಲಗಳು ತಿಳಿಸಿವೆ.
ಇತ್ತೀಚೆಗೆ ಮೆಕ್ಸಿಕೋ ಕಳ್ಳಸಾಗಣೆದಾರ ವ್ಯವಸ್ಥಿತ ಜಾಲವು ಈ ಮಾರಕ ರಾಸಾಯನಿಕ ತಯಾರಿಸಲು ಭಾರತವನ್ನು ನೆಲೆಯನ್ನಾಗಿ ಬಳಸಿಕೊಳ್ಳುತ್ತಿದೆ. ಚೀನಾದಲ್ಲಿ ಪೆಂಟನಿಲ್ ವಿರುದ್ಧ ಬಿರುಸಿನ ಕಾರ್ಯಾಚರಣೆಯಿಂದಾಗಿ ಅದು ಈಗ ಭಾರತದಲ್ಲಿ ತನ್ನ ಜಾಲ ವಿಸ್ತರಿಸಿರುವುದು ಆತಂಕಕಾರಿ ಸಂಗತಿ.
ಡೆಡ್ಲಿ ಪೆಂಟನಿಲ್ ತಯಾರಿಸಲು ಬಳಸುವ 4ಎಎನ್‍ಪಿಪಿ ಹೊಂದುವ ಜಾಲದ ಮೇಲೆ ಭಾರತದ ಅಧಿಕಾರಿಗಳು ಹದ್ದಿನ ಕಣ್ಣಿನ ನಿಗಾ ಇಟ್ಟಿದ್ದಾರೆ. ಇತ್ತೀಚಿನವರೆಗೂ ಇದು ಚೀನಾದಿಂದ ಕಳ್ಳಸಾಗಣೆಯಾಗುತ್ತಿತ್ತು. ಈಗ ಭಾರತದಲ್ಲಿ ಇದರ ಅಕ್ರಮ ಮಾರುಕಟ್ಟೆ ವಹಿವಾಟು ವ್ಯಾಪಿಸುತ್ತಿರುವುದು ಹೇಗೆ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.
4ಎಎನ್‍ಪಿಪಿ ಲಭ್ಯವಾಗದಿದ್ದರೆ, ಪೆಂಟನಿಲ್‍ನನ್ನು ಎನ್‍ಪಿಪಿ ರಾಸಾಯನಿಕ ಘಟಕಾಂಶದಿಂದ ತಯಾರಿಸಬಹುದು. ಆದರೆ ಇದಕ್ಕೆ ಅತ್ಯಂತ ಪ್ರಾವೀಣ್ಯತೆ ಬೇಕು ಎಂದು ಮೂಲಗಳು ತಿಳಿಸಿವೆ.