janadhvani

Kannada Online News Paper

ಗೋರಕ್ಷಣೆ ಹೆಸರಿನಲ್ಲಿ ಗುಂಪುದಾಳಿ: ರಾಜ್ಯಗಳಿಗೆ ಸುಪ್ರೀಂ ಕೋರ್ಟ್‌ ನಿಂದ ಕೊನೆಯ ಎಚ್ಚರಿಕೆ

ನವದೆಹಲಿ: ದೇಶದಲ್ಲಿ ಗೋರಕ್ಷಣೆಯ ಹೆಸರಿನಲ್ಲಿ ನಡೆಯುತ್ತಿರುವ ಗುಂಪುದಾಳಿ ಮತ್ತು ಹತ್ಯೆಗಳ ತಡೆಗೆ ಕ್ರಮ ಕೈಗೊಳ್ಳದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ತರಾಟೆಗೆ ತೆಗೆದುಕೊಂಡಿದೆ.

ಗುಂಪುಹತ್ಯೆ ತಡೆಗೆ ಕ್ರಮ ಕೈಗೊಳ್ಳಲು ಮತ್ತೊಂದು ಕೊನೆಯ ಅವಕಾಶ ನೀಡುವುದಾಗಿ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠವು ರಾಜ್ಯಗಳಿಗೆ ಎಚ್ಚರಿಕೆ ನೀಡಿದೆ.

ಈ ಸಂಬಂಧ ವಾರದ ಒಳಗಾಗಿ ವರದಿ ಸಲ್ಲಿಸುವಂತೆ ಪೀಠ ತಾಕೀತು ಮಾಡಿದೆ. ಇಲ್ಲದಿದ್ದರೆ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಗೃಹ ಕಾರ್ಯದರ್ಶಿಗಳು ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

ಗೋರಕ್ಷಣೆ ಹೆಸರಿನಲ್ಲಿ ಹೆಚ್ಚಿರುವ ದೊಂಬಿ, ಗುಂಪುದಾಳಿ ಮತ್ತು ಹತ್ಯೆಗಳ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಮತ್ತು ಸೂಕ್ತ ಕಾನೂನು ರೂಪಿಸುವಂತೆ ಸುಪ್ರೀಂ ಕೋರ್ಟ್ ಜುಲೈ 17ರಂದು ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿತ್ತು.

29 ರಾಜ್ಯಗಳ ಪೈಕಿ ಇಲ್ಲಿಯವರೆಗೆ 11 ರಾಜ್ಯ ಮತ್ತು ಏಳು ಕೇಂದ್ರಾಡಳಿತ ಪ್ರದೇಶಗಳು ಮಾತ್ರ ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಸಿವೆ.

ಗುಂಪುದಾಳಿ ತಡೆಗೆ ಸೂಕ್ತ ಕಾನೂನು ರೂಪಿಸಲು ಸಚಿವರ ಉನ್ನತಾಧಿಕಾರ ಸಮಿತಿ ರಚಿಸಲಾಗಿದೆ ಎಂದು ಕೇಂದ್ರ ಸರ್ಕಾರದ ಪ್ರತಿನಿಧಿಗಳು ನ್ಯಾಯಾಲಯಕ್ಕೆ ತಿಳಿಸಿದರು.

ಸುಪ್ರೀಂ ಕೋರ್ಟ್ ಆದೇಶ ಪಾಲಿಸದ ರಾಜಸ್ಥಾನ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್‌ ಮುಖ್ಯಸ್ಥರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವಂತೆ ಕೋರಿ ಕಾಂಗ್ರೆಸ್‌ ಮುಖಂಡ ತೆಹಸೀನ್‌ ಪೂನಾವಾಲಾ ಅರ್ಜಿ ಸಲ್ಲಿಸಿದ್ದರು.

ಜುಲೈ 20ರಂದು ಹೈನುಗಾರಿಕೆ ಉದ್ಯಮಿ ರಕ್ಬರ್‌ ಖಾನ್ ಎಂಬುವರನ್ನು ಗೋರಕ್ಷಕರ ಗುಂಪು ಹತ್ಯೆ ಮಾಡಿದ ಪ್ರಕರಣವನ್ನು ಅವರು ಅರ್ಜಿಯಲ್ಲಿ ಪ್ರಸ್ತಾಪಿಸಿದ್ದಾರೆ.

error: Content is protected !! Not allowed copy content from janadhvani.com