janadhvani

Kannada Online News Paper

ಉಳ್ಳಾಲ ದರ್ಗಾ ಸಮಿತಿ: ವಕ್ಫ್ ಕಾಯಿದೆಯಂತೆ ಚುನಾವಣೆ ನಡೆಸಲು ಹೈಕೋರ್ಟ್ ಆದೇಶ

ಉಳ್ಳಾಲ: ಉಳ್ಳಾಲ ದರ್ಗಾ ವಿವಾದಕ್ಕೆ ಸಂಬಂಧಪಟ್ಟಂತೆ ಶ್ರೀಯು.ಬಿ. ಸಿದ್ದೀಕ್ ಮತ್ತು ಇತರರು ಸಲ್ಲಿಸಿದ ರಿಟ್ ಅರ್ಜಿಯನ್ನು ದಿನಾಂಕ 09/08/2018 ರಂದು ವಿಚಾರಣೆಗೆ ಕೈಗೆತ್ತಿಗೊಂಡ ಮಾನ್ಯ ಕರ್ನಾಟಕ ರಾಜ್ಯಹೈಕೋರ್ಟ್ ನ್ಯಾಯಾಧೀಶರಾದ ಶ್ರೀ ಜಸ್ಟೀಸ್ಅರವಿಂದ ಕುಮಾರ್ ಅವರನ್ನು ಒಳಗೊಂಡ ಏಕಸದಸ್ಯ ಪೀಠವು ವಕ್ಫ್ ಕಾಯಿದೆ ಪ್ರಕಾರ ಉಳ್ಳಾಲ ಜುಮಾ ಮಸೀದಿ ಮತ್ತು ಸೆಯ್ಯಿದ್ ಮದನಿ ದರ್ಗಾ ಮತ್ತು ಅಧೀನ ಸಂಸ್ಥೆಗಳಿಗೆ ಸಂಬಂಧಪಟ್ಟಂತೆ ಆಡಳಿತಾಧಿಕಾರಿಯನ್ನು ನೇಮಿಸುವಂತೆ ಹಾಗೂ ಕರ್ನಾಟಕ ರಾಜ್ಯ ವಕ್ಫ್ ನಿಯಮಾಳಿ 2017ರ ಪ್ರಕಾರ ಮಾದರಿ ಆಡಳಿತಾತ್ಮಕ ಸಂವಿಧಾನವನ್ನು ರಚಿಸಿ ಮತ್ತು ಚುನಾವಣೆ ನಡೆಸಿ, ನೂತನ ಆಡಳಿತ ಸಮಿತಿಯನ್ನು ನೇಮಿಸಲು ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಗೆ ಹೈಕೋರ್ಟ್ ಆದೇಶಿಸಿದೆ.

ಉಳ್ಳಾಲ ಜುಮಾ ಮಸೀದಿ ಮತ್ತು ಸಯ್ಯಿದ್ ಮದನಿ ದರ್ಗಾ ಮತ್ತು ಅಧೀನ ಸಂಸ್ಥೆಗಳ ಆಡಳಿತ ಸಮಿತಿಗೆ ಸಂಬಂಧಪಟ್ಟಂತೆ ಮಾರ್ಚ್ 2016ರಲ್ಲಿ ಚುನಾವಣೆ ನಡೆದು ಎರಡು ಪಂಗಡಗಳ ನಡುವೆ ಚುನಾವಣೆಗೆ ಸಂಬಂಧಪಟ್ಟಂತೆ ವಿವಾದ ಏರ್ಪಟ್ಟು ಉಳ್ಳಾಲ ದರ್ಗಾ ಪರಿಸರದಲ್ಲಿ ಅಶಾಂತಿ ಮತ್ತು ಭಯದ ವಾತಾವರಣ ನಿರ್ಮಾಣಗೊಂಡಿತ್ತು. ಈ ವಿವಾದವನ್ನು ಮನಗಂಡು ದಿನಾಂಕ 17/05/2016ರಂದು ಮಾನ್ಯ ದ.ಕ. ಜಿಲ್ಲಾಧಿಕಾರಿ ಮತ್ತು ದಂಡಾಧಿಕಾರಿಯವರು ಕರ್ನಾಟಕ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಪತ್ರ ಬರೆದು ಉಳ್ಳಾಲ ದರ್ಗಾ ವಿವಾದಕ್ಕೆ ಸಂಬಂಧಪಟ್ಟಂತೆ ಸ್ಥಳದಲ್ಲಿ ಕಾನೂನು ಭಂಗ ಉಂಟಾದ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ವಕ್ಪ್ ಮಂಡಳಿಗೆ, ಉಳ್ಳಾಲ ದರ್ಗಾ ಮತ್ತು ಅಧೀನಸಂಸ್ಥೆಗಳ ಆಡಳಿತವನ್ನು ನಡೆಸಲು ಆಡಳಿತಾಧಿಕಾರಿಯನ್ನು ನೇಮಿಸುವಂತೆ ಸೂಚನೆ ನೀಡಿದ್ದರು.

ಮಾನ್ಯ ದ.ಕ. ಜಿಲ್ಲಾಧಿಕಾರಿ ಮತ್ತುದಂಡಾಧಿಕಾರಿಯವರ ಸೂಚನೆ ಪ್ರಕಾರ ದಿನಾಂಕ 18/05/2016 ರಂದು ಉಳ್ಳಾಲ ದರ್ಗಾ ಆಡಳಿತಸಮಿತಿ ವಿವಾದಕ್ಕೆ ಸಂಬಂಧಪಟ್ಟಂತೆ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯು ತನ್ನ ಮುಂದಿನ ಆದೇಶ ಮತ್ತು ನೂತನ ಚುನಾವಣೆ ನಡೆಸಿ ಹೊಸ ಆಡಳಿತಸಮಿತಿ ಅಸ್ತಿತ್ವಕ್ಕೆ ಬರುವ ತನಕ ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷರನ್ನುಆಡಳಿತಾಧಿಕಾರಿಯಾಗಿ ನೇಮಿಸಿ ಮತ್ತು ಎರಡು ಪಂಗಡದ ತಲಾ ನಾಲ್ಕು ಮಂದಿಯನ್ನು ಒಳಗೊಂಡ ಸಲಹಾ ಸಮಿತಿಯನ್ನು ರಚಿಸಿ ಉಳ್ಳಾಲ ಜುಮಾಮಸೀದಿ ಮತ್ತು ಸೆಯ್ಯಿದ್ ಮದನಿ ದರ್ಗಾ ಮತ್ತು ಅಧೀನ ಸಂಸ್ಥೆಗಳ ಆಡಳಿತವನ್ನು ತನ್ನ ನೇರ ನಿಯಂತ್ರಣಕ್ಕೆ ಒಳಪಡಿಸಿ ಆದೇಶವನ್ನು ಹೊರಡಿಸಿತ್ತು. ಸದ್ರಿ ಆದೇಶವನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಲೇರಿದ್ದರು.

ದಿನಾಂಕ 24/05/2016 ರಂದು ಪ್ರಸ್ತುತ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್ ತಡೆಯಾಜ್ಞೆಯನ್ನು ನೀಡಿ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಮತ್ತು ಇತರ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿತ್ತು.ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಮತ್ತಿತ್ತರುಅರ್ಜಿಯ ವಿರುಧ್ಧ ಆಕ್ಷೇಪವನ್ನು ಸಲ್ಲಿಸಿದ್ದರು ತದನಂತರ ದಿನಾಂಕ 09/08/2018 ರಂದು ಪ್ರಸ್ತುತ ಅರ್ಜಿಯನ್ನು ಮರುವಿಚಾರಣೆಗೆ ಕೈಗೆತ್ತಿಗೊಂಡ ಹೈಕೊರ್ಟ್, ಕರ್ನಾಟಕ ರಾಜ್ಯ ವಕ್ಫ್ ಮಂಡಳಿಗೆ ಉಳ್ಳಾಲ ಜುಮಾ ಮಸೀದಿ ಮತ್ತು ಸಯ್ಯಿದ್ ಮದನಿ ದರ್ಗಾ ಅಧೀನ ಸಂಸ್ಥೆಗಳಿಗೆ ಸಂಬಂದಪಟ್ಟಂತೆ ವಕ್ಪ್ ಕಾಯ್ದೆ ಪ್ರಕಾರ ಆಡಳಿತಾಧಿಕಾರಿಯನ್ನು ನೇಮಿಸುವಂತೆ ಹಾಗೂ ಕರ್ನಾಟಕ ರಾಜ್ಯ ವಕ್ಫ್ ನಿಯಾಮಾವಳಿ 2017ರ ಪ್ರಕಾರ ಸದರಿ ಆಡಳಿತಾತ್ಮಕ ಸಂವಿಧಾನವನ್ನು ರಚಿಸಿ ಮತ್ತು ಚುನಾವಣೆ ನಡೆಸಿ, ನೂತನ ಆಡಳಿತ ಸಮಿತಿಯನ್ನು ನೇಮಿಸಲು ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆದೇಶ ನೀಡಿದೆ.

error: Content is protected !! Not allowed copy content from janadhvani.com