ನವದೆಹಲಿ(ಆ. 14): ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿದೆ. ಇವತ್ತು ಮಂಗಳವಾರದ ವಹಿವಾಟಿನಲ್ಲಿ ಅಮೆರಿಕನ್ ಡಾಲರ್ ಎದುರು ರೂಪಾಯಿ ದರವು 70.1ಕ್ಕೆ ಕುಸಿದಿದೆ. ಇತಿಹಾಸದಲ್ಲೇ ಇದು ರೂಪಾಯಿಯ ಕನಿಷ್ಠ ಮೌಲ್ಯವಾಗಿದೆ. ಇದೇ ಮೊದಲ ಬಾರಿಗೆ ಡಾಲರ್ ಮೌಲ್ಯವು 70 ರೂಪಾಯಿ ಗಡಿ ದಾಟಿದೆ. ಭಾರತದಲ್ಲಿ ಹಣದುಬ್ಬರದ ದರವನ್ನು ತಹಬದಿಗೆ ತರಲಾಗಿದ್ದರೂ ರೂಪಾಯಿ ಕುಸಿತವನ್ನು ತಡೆಗಟ್ಟಲು ಸಾಧ್ಯವಾಗುತ್ತಿಲ್ಲ. ಈ ವರ್ಷ ಡಾಲರ್ ಎದುರು ರೂಪಾಯಿ ಮೌಲ್ಯ ಶೇ. 8ರಷ್ಟು ಕುಸಿತ ಕಂಡಿದೆ.
ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತಕ್ಕೆ ವಿವಿಧ ಕಾರಣಗಳನ್ನ ಅಂದಾಜಿಸಲಾಗಿದೆ. ಟರ್ಕಿ ದೇಶದ ಕರೆನ್ಸಿ ಬಿಕ್ಕಟ್ಟು ಪ್ರಮುಖ ಕಾರಣವೆನ್ನಲಾಗಿದೆ. ಇದರ ಜೊತೆಗೆ ವಿಶ್ವದ ಕೆಲ ದೇಶಗಳ ಕರೆನ್ಸಿ ಎದುರು ಡಾಲರ್ ಮೌಲ್ಯ ಗಣನೀಯ ಪ್ರಮಾಣದಲ್ಲಿ ವೃದ್ಧಿಸಿಕೊಂಡಿದ್ದೂ ರೂಪಾಯಿಯ ಕಳಪೆ ಪ್ರದರ್ಶನಕ್ಕೆ ಇನ್ನೊಂದು ಕಾರಣವಾಗಿದೆ.
ಟರ್ಕಿಯ ಬಿಕ್ಕಟ್ಟು ಜಾಗತಿಕ ತಲೆನೋವಾಗುವ ನಿರೀಕ್ಷೆ ಇದೆ. ಭಾರತ ಸೇರಿದಂತೆ ಹಲವು ರಾಷ್ಟ್ರಗಳ ಕರೆನ್ಸಿ ಮತ್ತು ಆರ್ಥಿಕತೆ ಮೇಲೆ ಪರಿಣಾಮ ಬೀರಲಿದೆ. ಈ ವರ್ಷ ಟರ್ಕಿ ದೇಶದ ಲೀರಾ ಕರೆನ್ಸಿಯು ಡಾಲರ್ ಎದುರು ಶೇ. 45ರಷ್ಟು ಮೌಲ್ಯಕುಸಿತ ಕಂಡಿದೆ. ಕರೆನ್ಸಿ ಮೌಲ್ಯ ಚೇತರಿಕೆಗೆ ಅಲ್ಲಿನ ಸರಕಾರ ಯಾವುದೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಸೂಚನೆ ಇಲ್ಲವಾದ್ದರಿಂದ ಲೀರಾದ ಕುಸಿತ ಇನ್ನೂ ಮುಂದುವರಿಯಬಹುದು. ಹೀಗಾದಲ್ಲಿ ಡಾಲರ್ ಮೌಲ್ಯ ಇನ್ನಷ್ಟು ಹೆಚ್ಚಳಗೊಂಡು, ವಿಶ್ವಾದ್ಯಂತ ಅದರ ಬೇಡಿಕೆ ಇನ್ನಷ್ಟು ಹೆಚ್ಚಾಗಲಿದೆ. ಇದು ಅನೇಕ ರಾಷ್ಟ್ರಗಳ ಕರೆನ್ಸಿಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಇದೇ ವೇಳೆ, ರೂಪಾಯಿ ಮೌಲ್ಯ ಕುಸಿತದಿಂದ ಲಾಭವಾಗಿದ್ದು ಭಾರತೀಯ ಐಟಿ ಸಂಸ್ಥೆಗಳಿಗೆ. ಡಾಲರ್ನಲ್ಲಿ ವ್ಯವಹಾರ ನಡೆಸುವ ಭಾರತೀಯ ಐಟಿ ಸಂಸ್ಥೆಗಳಿಗೆ ಡಾಲರ್ ಮೌಲ್ಯ ಹೆಚ್ಚಳವಾಗುವುದರಿಂದ ಹೆಚ್ಚು ಲಾಭ ಸಿಗುತ್ತದೆ. ಈ ಹಿನ್ನೆಲೆಯಲ್ಲಿ ಐಟಿ ಸಂಸ್ಥೆಗಳ ಷೇರು ಮೌಲ್ಯ ವೃದ್ಧಿಯಾಗಿದೆ.