ಪುಣೆ: ನವದೆಹಲಿಯಲ್ಲಿ ನಡೆಸಲಾದ ಪ್ರತಿಭಟನೆ ವೇಳೆ ಭಾರತ ಸಂವಿಧಾನದ ಪ್ರತಿಯನ್ನು ಸುಟ್ಟು ಹಾಕಿರುವುದಕ್ಕೆ ಸಂಬಂಧಿಸಿದಂತೆ ಪುಣೆ ಪೊಲೀಸರು ಶನಿವಾರ ಅನಾಮಿಕ ವ್ಯಕ್ತಿಗಳ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಮುಖಂಡ ಸತೀಶ್ ಗಾಯಕ್ವಾಡ್ ನೀಡಿರುವ ದೂರಿನ ಅನ್ವಯ ಡೆಕ್ಕರ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 124 ಎ(ದೇಶದ್ರೋಹ), 153 ಎ(ಎರಡು ಗುಂಪುಗಳ ನಡುವೆ ವೈಷಮ್ಯಕ್ಕೆ ಪ್ರಚೋದನೆ), 295, 298(ಯಾವುದೇ ವ್ಯಕ್ತಿಯ ಧಾರ್ಮಿಕ ಭಾವನೆಗೆ ಧಕ್ಕೆ ತರುವುದು, ನಿಂದನೆ) ಹಾಗೂ ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಾಗಿರುವುದಾಗಿ ’ದಿ ಹಿಂದು’ ವರದಿ ಮಾಡಿದೆ.
ದೆಹಲಿಯ ಜಂತರ್‌ಮಂತರ್‌ನಲ್ಲಿ ಮೀಸಲಾತಿ, ಪರಿಶಿಷ್ಟ ಜಾತಿ ಮತ್ತು ಪಂಗಡದ ಕಾಯ್ದೆ ವಿರೋಧಿ ಗುಂಪಿನ ಸದಸ್ಯರು ನಡೆಸುತ್ತಿದ್ದ ಪ್ರತಿಭಟನೆ ಸಂದರ್ಭದಲ್ಲಿ ಸಂವಿಧಾನದ ಪ್ರತಿ ಸುಟ್ಟು ಅಂಬೇಡ್ಕರ್ ವಿರುದ್ಧ ಹಾಗೂ ಎಸ್‌ಸಿ, ಎಸ್‌ಟಿ ಸಮುದಾಯದ ವಿರುದ್ಧ ಘೋಷಣೆ ಕೂಗಿರುವುದನ್ನು ಚಿತ್ರೀಕರಿಸಲಾಗಿರುವ ವಿಡಿಯೊ ತುಣುಕು ಒಳಗೊಂಡಿರುವ ಸಿಡಿ ಪ್ರತಿಯನ್ನು ಸತೀಶ್ ಗಾಯಕ್ವಾಡ್ ಪೊಲೀಸರಿಗೆ ನೀಡಿದ್ದಾರೆ.
ಸಂವಿಧಾನ ಪ್ರತಿ ಸುಟ್ಟಿರುವ ಪ್ರಕರಣದ ಸಂಬಂಧ ದೆಹಲಿ ಪೊಲೀಸರು ಶುಕ್ರವಾರ ’ಯೂಥ್ ಫಾರ್ ಇಕ್ವಲಿಟಿ(ವೈಎಫ್‌ಇ)’ ಗುಂಪಿನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ವೈಎಫ್‌ಇ ನಡೆಸಿದ ಪ್ರತಿಭಟನೆಗೆ ದೇಶದಾದ್ಯಂತ ದಲಿತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದರು.