ಮಕ್ಕಾ: ಅನುಮತಿ ಪತ್ರ ಇಲ್ಲದೆ ಹಜ್ ನಿರ್ವಹಿಸಲು ಶ್ರಮ ಪಡುವವರನ್ನು ತಕ್ಷಣ ಶಿಕ್ಷಿಸಲು ವಿಶೇಷ ನ್ಯಾಯಾಧಿಕಾರವಿರುವ ಸಮಿತಿಯನ್ನು ನೇಮಿಸಲಾಗಿದೆ ಎಂದು ಸೌದಿ ಪಾಸ್ಪೋರ್ಟ್ ಡೈರೆಕ್ಟರೇಟ್ ತಿಳಿಸಿದೆ.
ಮಕ್ಕಾ ಗಡಿಯ ಚೆಕ್ ಪಾಯಿಂಟ್ ನಲ್ಲಿ ಸಮಿತಿಯು 24 ಗಂಟೆಗಳ ಕಾಲ ಕಾರ್ಯ ನಿರ್ವಹಿಸುತ್ತದೆ ಎಂದು ನಿರ್ದೇಶನಾಲಯ ತಿಳಿಸಿದೆ.
ಪಾಸ್ಪೋರ್ಟ್ ಡೈರೆಕ್ಟರೇಟ್ ದೇಶದ ನಾಗರಿಕರಿಗೆ ಮತ್ತು ದೇಶದಲ್ಲಿ ನೆಲೆಸಿರುವ ವಿದೇಶಿಯರಿಗೆ ಹಜ್ ಪರವಾನಗಿ ನೀಡುತ್ತದೆ. ಅನುಮತಿಯಿಲ್ಲದೆ ಮಕ್ಕಾಗೆ ಪ್ರವೇಶಿಸಲು ಪ್ರಯತ್ನಿಸುತ್ತಿರುವವರು ಮತ್ತು ಅವರಿಗೆ ಸಹಾಯ ನೀಡಿದ ಚಾಲಕರೂ ಕಠಿಣ ಶಿಕ್ಷೆಗೆ ಗುರಿಯಾಗುತ್ತಾರೆ ಎಂದು ಡೈರೆಕ್ಟರೇಟ್ ಎಚ್ಚರಿಸಿದೆ.
ಅನುಮತಿಯಿಲ್ಲದವರಿಗೆ ವಾಹನ ಸೌಕರ್ಯ ಮಾಡಿಕೊಟ್ಟವರಿಗೆ 15 ದಿನಗಳ ಜೈಲು ಶಿಕ್ಷೆ ಲಭಿಸುತ್ತದೆ. ಯಾತ್ರಿಕರ ಸಂಖ್ಯೆಗೆ ಅನುಗುಣವಾಗಿ ಪ್ರತೀಯೊಬ್ಬ ಯಾತ್ರಿಕನ ಮೇಲೆ, ಚಾಲಕನಿಗೆ 10,000 ರಿಯಾಲ್ ದಂಡ ವಿಧಿಸಲಾಗುತ್ತದೆ. ಶಿಕ್ಷೆಗೊಳಗಾದ ನಂತರ ವಿದೇಶಿ ಚಾಲಕರನ್ನು ಗಡೀಪಾರು ಮಾಡಲಾಗುವುದು ಮತ್ತು ವಾಹನಗಳನ್ನು ಮುಟ್ಟುಗೋಲು ಮಾಡಲಾಗುತ್ತದೆ.
ಕಾನೂನು ಉಲ್ಲಂಘನೆ ಮಾಡುವವರಿಗೆ ಸಹಾಯ ಒದಗಿಸುವ ವಿದೇಶಿಯರಿಗೆ ಹೊಸ ವೀಸಾದಲ್ಲಿ ಸೌದಿ ಪ್ತವೇಶಿಸುವುದಕ್ಕೆ ಜೀವಮಾನ ನಿಷೇಧ ಹೇರಲಾಗುವುದು ಎಂದು ಪಾಸ್ಪೋರ್ಟ್ ಡೈರೆಕ್ಟರೇಟ್ ವ್ಯಕ್ತಪಡಿಸಿದೆ.
ಹೊರಗಿನ ಮತ್ತು ಒಳಗಿನ ಯಾತ್ರಾರ್ಥಿಗಳಿಗೆ ಸುಗಮವಾಗಿ ಹಜ್ ನಿರ್ವಹಿಸಲು ಒಳಗಿನ ಯಾತ್ರಿಕರಿಗರ ಅನುಮತಿ ಪತ್ರ ಮುಂತಾದ ನಿಯಂತ್ರಣ ಏರ್ಪಡಿಸಲಾಗಿದೆ. ಯುಎಇ, ಕುವೈತ್, ಬಹ್ರೈನ್ ಮತ್ತು ಒಮಾನ್ ದೇಶಗಳ ಹಜ್ ಯಾತ್ರಾರ್ಥಿಗಳು ಅಲ್ಲಿ ವಿತರಿಸಿದ ಹಜ್ ಪರವಾನಗಿಗಳನ್ನು ಹಾಜರುಪಡಿಸುವ ಅಗತ್ಯವಿದೆ.
ಈ ಮಧ್ಯೆ, ಅನುಮತಿ ಇಲ್ಲದೆ ಮಕ್ಕಾ ಪ್ರವೇಶಕ್ಕೆ ಮುಂದಾದ ಯಾತ್ರಿಗಳು ಮತ್ತು ಅವರಿಗೆ ಸಾರಿಗೆ ಒದಗಿಸಿದ ಕೆಲವು ಸ್ವದೇಶೀ ನಾಗರಿಕರನ್ನು ಬಂಧಿಸಿರುವುದಾಗಿ ಹಜ್ ಸುರಕ್ಷಾ ಖಾತೆ ತಿಳಿಸಿದೆ.