janadhvani

Kannada Online News Paper

ಜಾತಿ ವರ್ಗೀಕರಣ ಸಲ್ಲದು :ವಿದ್ಯಾರ್ಥಿನಿಲಯಗಳಿಗೆ ಒಂದೇ ಹೆಸರಿಡಿ- ಸಿಎಂ

ಬೆಂಗಳೂರು, ಜು. 31- ಸಮಾಜ ಕಲ್ಯಾಣ ಇಲಾಖೆಯ ಪರಿಶಿಷ್ಟ ಜಾತಿ, ವರ್ಗ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಲಯಗಳಿಗೆ ಇನ್ನು ಮುಂದೆ ಸರ್ಕಾರಿ ಸಾರ್ವಜನಿಕ ವಿದ್ಯಾರ್ಥಿನಿಲಯ ಎಂಬ ಹೆಸರನ್ನು ಬಳಸುವಂತೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸೂಚಿಸಿದ್ದಾರೆ.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದಿರುವ ಎಲ್ಲ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳ ಎರಡನೇ ದಿನದ ಸಭೆಯಲ್ಲಿಂದು ಸಮಾಜ ಕಲ್ಯಾಣ ಇಲಾಖೆ ಪ್ರಗತಿಗೆ ಸಂಬಂಧಿಸಿದಂತೆ ಚರ್ಚೆ ನಡೆದ ಸಂದರ್ಭದಲ್ಲಿ ಯಾವುದೇ ವಿದ್ಯಾರ್ಥಿನಿಲಯಗಳನ್ನು ಜಾತಿ ಹೆಸರಿನಲ್ಲಿ ಗುರುತಿಸುವುದನ್ನು ಕೈಬಿಟ್ಟು ಸರ್ಕಾರದ ಎಲ್ಲಾ ವಿದ್ಯಾರ್ಥಿನಿಲಯಗಳಿಗೆ ಸಾರ್ವಜನಿಕ ವಿದ್ಯಾರ್ಥಿನಿಲಯ ಎಂದಷ್ಟೆ ಹೆಸರಿಡಿ ಎಂದು ಅವರು ಹೇಳಿದರು.
ಈ ಹಿಂದೆಯೆಲ್ಲಾ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯಗಳಿಗೆ ಪರಿಶಿಷ್ಟ ಜಾತಿಯ ವಿದ್ಯಾರ್ಥಿನಿಲಯಗಳು, ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಲಯಗಳು ಎಂದೆಲ್ಲಾ ವರ್ಗೀಕರಣ ಮಾಡಲಾಗಿದೆ. ಈ ವರ್ಗೀಕರಣ ಬೇಡ, ಸರ್ಕಾರಿ ಸಾರ್ವಜನಿಕ ವಿದ್ಯಾರ್ಥಿನಿಲಯ ಎಂಬ ಹೆಸರನ್ನು ಬಳಸಿದರೆ ಸಾಕು ಎಂದು ಮುಖ್ಯಮಂತ್ರಿಗಳು ಹೇಳಿದರು.
ಸರ್ಕಾರ ಈ ಬಜೆಟ್‌ನಲ್ಲಿ ಪರಿಶಿಷ್ಟ ಜಾತಿ, ವರ್ಗದವರ ಅಭಿವೃದ್ಧಿಗಾಗೆ ಹೆಚ್ಚಿನ ಹಣ ಒದಗಿಸಿದೆ. ಜಿಲ್ಲಾಧಿಕಾರಿಗಳು ಪ್ರಥಮ ಆದ್ಯತೆ ಎಂಬಂತೆ ಕ್ರಿಯಾ ಯೋಜನೆಯನ್ನು ರೂಪಿಸಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಂತೆಯೂ ಅವರು ಸೂಚಿಸಿದರು.

ಪರಿಶಿಷ್ಟ ಜಾತಿ, ವರ್ಗದ ಎಸ್‌ಟಿಪಿ ಮತ್ತು ಟಿಎಸ್‌ಪಿ ಯೋಜನೆಯಡಿ ಒಂದು ಬಾರಿ ಲಾಭ ಪಡೆದ ಫಲಾನಭವಿಗಳಿಗೆ ಮತ್ತೆ ಮತ್ತೆ ನೆರವು ನೀಡುವ ಬದಲು ಹೊಸ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಯೋಜನೆಯ ಲಾಭ ಸಿಗುವಂತೆ ನೋಡಿಕೊಳ್ಳಿ ಎಂದು ಮುಖ್ಯಮಂತ್ರಿಗಳು ಸಭೆಯಲ್ಲಿ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಪರಿಶಿಷ್ಟ ಜಾತಿ ವರ್ಗದ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಗಂಗಾ ಕಲ್ಯಾಣ ಯೋಜನೆ ಸೇರಿದಂತೆ ವಿವಿಧ ನೀರಾವರಿ ಯೋಜನೆಗಳು ಸಕಾಲಕ್ಕೆ ಅನುಷ್ಠಾನವಾಗುತ್ತಿಲ್ಲ. ಈ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಆದಷ್ಟು ತ್ವರಿತವಾಗಿ ಪರಿಶಿಷ್ಟ ಜಾತಿ ವರ್ಗದವರ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ಅಲ್ಪಸಂಖ್ಯಾತರ ಅಭಿವೃದ್ಧಿಗೆ ಸಂಬಂಧಿಸಿದಂತೆ ಎಲ್ಲ ಜಿಲ್ಲೆಗಳಿಗೆ ಹಣ ಬಿಡುಗಡೆ ಮಾಡಲಾಗಿದೆ. ಕ್ರಿಯಾ ಯೋಜನೆ ರೂಪಿಸಿ ಕಾರ್ಯಕ್ರಮ ಅನುಷ್ಠಾನಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

error: Content is protected !! Not allowed copy content from janadhvani.com