janadhvani

Kannada Online News Paper

ಕಿನ್ಯಾ ‘ಗೋಲ್ಡನ್ ಹೆಲ್ತ್’ ಶಿಲಾನ್ಯಾಸ: ರೋಗ ಬರದಂತೆ ತಡೆಯುವ ಜನಜಾಗೃತಿ ಇಂದಿನ ಅಗತ್ಯ- ಸ್ಪೀಕರ್ ಯು.ಟಿ. ಖಾದರ್

ಇದೇ ಸಂದರ್ಭದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಡಾ. ಇಕ್ಬಾಲ್ ಕಿನ್ಯ ಮತ್ತು ಡಾ. ಅಫ್ರಾ ಇಸ್ಮಾಯೀಲ್‌ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಉಳ್ಳಾಲ: “ರೋಗ ಬಂದ ಮೇಲೆ ಚಿಕಿತ್ಸೆ ನೀಡುವುದಕ್ಕಿಂತ, ರೋಗವೇ ಬರದಂತೆ ಮುನ್ನೆಚ್ಚರಿಕೆ ವಹಿಸುವ ಜನಜಾಗೃತಿ ಕಾರ್ಯಕ್ರಮಗಳು ಸಮಾಜದಲ್ಲಿ ಹೆಚ್ಚು ನಡೆಯಬೇಕು,” ಎಂದು ವಿಧಾನಸಭಾ ಸಭಾಪತಿ ಯು.ಟಿ. ಖಾದರ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಕಿನ್ಯದ ಗೋಲ್ಡನ್ ಹೆಲ್ತ್ ಫೌಂಡೇಶನ್ ಆರೋಗ್ಯ ಮತ್ತು ವೈದ್ಯಕೀಯ ಸೇವಾ ಸಂಸ್ಥೆಯ ವತಿಯಿಂದ ಕಿನ್ಯದಲ್ಲಿ ಆಯೋಜಿಸಲಾಗಿದ್ದ ಗ್ರಾಮೀಣ ದತ್ತಿ ಆರೋಗ್ಯ ಕೇಂದ್ರದ ನೂತನ ಕಟ್ಟಡದ ಶಿಲಾನ್ಯಾಸ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸಂಸ್ಥೆಯ ಜವಾಬ್ದಾರಿ ಮತ್ತು ಸಹಕಾರ
ಕಾರ್ಯಕ್ರಮವನ್ನು ಉದ್ಘಾಟಿಸಿದ ಕಣಚೂರು ಮೆಡಿಕಲ್ ಕಾಲೇಜಿನ ಚೇರ್ಮನ್ ಕಣಚೂರು ಮೋನು ಮಾತನಾಡಿ, “ಆರೋಗ್ಯ ಸಂಸ್ಥೆಯನ್ನು ಕಟ್ಟುವುದು ಸುಲಭ, ಆದರೆ ಅದನ್ನು ವ್ಯವಸ್ಥಿತವಾಗಿ ನಿರ್ವಹಿಸುವುದು ದೊಡ್ಡ ಜವಾಬ್ದಾರಿ. ಆಸ್ಪತ್ರೆಯಲ್ಲಿ ಅತ್ಯುತ್ತಮ ವೈದ್ಯರು, ಸುಸಜ್ಜಿತ ಬೆಡ್‌ಗಳು ಮತ್ತು ತಪಾಸಣಾ ವ್ಯವಸ್ಥೆ ಇರುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ಕಿನ್ಯದ ಆರೋಗ್ಯ ಕೇಂದ್ರಕ್ಕೆ ಕಣಚೂರು ಸಂಸ್ಥೆಯು ಪೂರ್ಣ ಸಹಕಾರ ನೀಡಲಿದೆ,” ಎಂದು ಭರವಸೆ ನೀಡಿದರು.

ಸಯ್ಯಿದ್ ಅಮೀ‌ರ್ ತಂಙಳ್ ಅವರು ನೂತನ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿದರು. ಕಿನ್ಯ ಕೇಂದ್ರ ಜುಮಾ ಮಸೀದಿಯ ಮುದರ್ರಿಸ್ ಮುಸ್ತಫ ಅನ್ಸಾರಿ ಅವರು ದುಆ ನೆರವೇರಿಸಿ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಡಾ. ಇಕ್ಬಾಲ್ ಕಿನ್ಯ ಮತ್ತು ಡಾ. ಅಫ್ರಾ ಇಸ್ಮಾಯೀಲ್‌ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಅಶ್ರಫ್‌ ಕರ್ನಿರೆ ಮತ್ತು ಯಕ್ಷಗಾನ ಅಕಾಡೆಮಿ ಸದಸ್ಯ ಕೃಷ್ಣಪ್ಪ ಪೂಜಾರಿ ಮಾತನಾಡಿದರು. ಗೋಲ್ಡನ್ ಹೆಲ್ತ್ ಫೌಂಡೇಶನ್ ಅಧ್ಯಕ್ಷ ಹಾಜಿ ಮೂಸ ಅಬ್ಬಾಸ್ ಕುರಿಯಕಾರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಸಯ್ಯಿದ್ ಶಿಹಾಬ್ ತಂಙಳ್ ಅಲ್ ಬುಖಾರಿ, ಆಲಿಕುಞ್ಞಿ ಪಾರೆ, ಅಬ್ದುಲ್ ಹಮೀದ್ (ಎಚ್.ಎನ್. ಗ್ರೂಪ್), ಅಬ್ದುಲ್ ರಝಾಕ್ (ಯೆನೆಪೊಯ), ಯು.ಬಿ. ಮುಹಮ್ಮದ್ ಉಳ್ಳಾಲ, ಹಾಜಿ ಕೆ.ಸಿ. ಇಸ್ಮಾಯೀಲ್ ಕಿನ್ಯ, ಎನ್.ಎಸ್. ಕರೀಂ, ಸಿರಾಜ್‌ ಕಿನ್ಯ, ರವಿ ಪೂಜಾರಿ, ಝಾಹಿದ್ ಮಲಾರ್, ಜಯಂತ್ ಪೂಜಾರಿ ಸೇರಿದಂತೆ ಹಲವು ಸಾಮಾಜಿಕ ಹಾಗೂ ಧಾರ್ಮಿಕ ಮುಖಂಡರು ಉಪಸ್ಥಿತರಿದ್ದರು.

ಅಬ್ದುಲ್ ಸಮದ್‌ (ಕಾರ್ಯದರ್ಶಿ, ಗೋಲ್ಡನ್ ಹೆಲ್ತ್ ಫೌಂಡೇಶನ್)ಸ್ವಾಗತಿಸಿದರು. ಹಮೀದ್ ಕಿನ್ಯ (ಸಂಚಾಲಕರು) ಕಾರ್ಯಕ್ರಮವನ್ನು ನಿರೂಪಿಸಿದರು ಮತ್ತು ಅಬ್ದುಲ್ ಖಾದರ್ (ಜೊತೆ ಕಾರ್ಯದರ್ಶಿ) ಕೃತಜ್ಞತೆ ಸಲ್ಲಿಸಿದರು.

ಹಿನ್ನೆಲೆ ಮತ್ತು ಉದ್ದೇಶ:
ಗೋಲ್ಡನ್ ಹೆಲ್ತ್ ಫೌಂಡೇಶನ್ ಕಳೆದ ಐದು ವರ್ಷಗಳಿಂದ ನಿರಂತರವಾಗಿ ಜನಸಾಮಾನ್ಯರಿಗೆ ವೈದ್ಯಕೀಯ ನೆರವು ನೀಡುತ್ತಾ ಬಂದಿದೆ. ಸ್ಥಳೀಯ ಜನರಿಗೆ ಆರೋಗ್ಯ ಸೇವೆಗಳು ಒಂದೇ ಸೂರಿನಡಿ ಲಭ್ಯವಾಗುವಂತೆ ಮಾಡುವ ದೃಷ್ಟಿಯಿಂದ ಈ ನೂತನ ಕಟ್ಟಡ ನಿರ್ಮಾಣ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.

ಇದನ್ನೂ ಓದಿರಿ...