ನವದೆಹಲಿ: ತಾಜ್ ಮಹಲ್ ಆವರಣದಲ್ಲಿರುವ ಮಸೀದಿಯಲ್ಲಿ ಪ್ರವಾಸಿಗರು ಶುಕ್ರವಾರದ ಪ್ರಾರ್ಥನೆ ಸಲ್ಲಿಸುವುದನ್ನು ನಿಷೇಧಿಸಿ ಆಗ್ರಾ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಹೊರಡಿಸಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ಸೋಮವಾರ ಎತ್ತಿ ಹಿಡಿದಿದೆ.
ಜಿಲ್ಲಾ ಮ್ಯಾಜಿಸ್ಟ್ರೇಟ್ ಆದೇಶ ಪ್ರಶ್ನಿಸಿ ತಾಜ್ ಮಹಲ್ ಮಸೀದಿ ಆಡಳಿತ ಮಂಡಳಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಎ.ಕೆ. ಸಿಕ್ರಿ ಮತ್ತು ಅಶೋಕ್ ಭೂಷಣ್ ಅವರ ದ್ವಿಸದಸ್ಯ ಪೀಠ ವಜಾಗೊಳಿಸಿದೆ.
ಸುರಕ್ಷತೆಯ ದೃಷ್ಟಿಯಿಂದ ತಾಜ್ ಮಹಲ್ ಮಸೀದಿಯಲ್ಲಿ ಆಗ್ರಾದ ಸ್ಥಳೀಯ ನಿವಾಸಿಗಳ ಹೊರತಾಗಿ ಪರಸ್ಥಳದವರು ಮತ್ತು ಪ್ರವಾಸಿಗರು ಪ್ರಾರ್ಥನೆ ಸಲ್ಲಿಸುವುದನ್ನು ನಿಷೇಧಿಸಿ ಆಗ್ರಾ ಹೆಚ್ಚುವರಿ ಜಿಲ್ಲಾಧಿಕಾರಿ ಇದೇ ಜನವರಿಯಲ್ಲಿ ಆದೇಶ ಹೊರಡಿಸಿದ್ದರು.
ಇದನ್ನು ಪ್ರಶ್ನಿಸಿ ಮಸೀದಿಯ ಆಡಳಿತ ಮಂಡಳಿ ಅಧ್ಯಕ್ಷ ಸೈಯದ್ ಇಬ್ರಾಹಿಂ ಹುಸೇನ್ ಜೈದಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
‘ವರ್ಷವಿಡಿ ಅನೇಕ ಪ್ರವಾಸಿಗರು ಆಗ್ರಾಕ್ಕೆ ಭೇಟಿ ನೀಡುತ್ತಿರುತ್ತಾರೆ. ಅವರನ್ನು ತಾಜ್ ಮಹಲ್ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸದಂತೆ ತಡೆಯುವ ನಿರ್ಧಾರ ಕಾನೂನುಬಾಹಿರ’ ಎಂದು ಅರ್ಜಿದಾರರು ವಾದಿಸಿದರು. ‘ತಾಜ್ ಮಹಲ್ ವಿಶ್ವದ ಏಳು ಅದ್ಭುತಗಳಲ್ಲಿ ಒಂದು. ಅದರ ಸುರಕ್ಷತೆ ಮುಖ್ಯ’ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟರು.
‘ಪ್ರವಾಸಿಗರು ತಾಜ್ ಮಹಲ್ ಮಸೀದಿಯಲ್ಲಿಯೇ ಏಕೆ ಪ್ರಾರ್ಥನೆ ಸಲ್ಲಿಸಬೇಕು. ಆಗ್ರಾದಲ್ಲಿ ಸಾಕಷ್ಟು ಮಸೀದಿಗಳಿವೆ. ಅಲ್ಲಿಯೂ ಪ್ರಾರ್ಥನೆ ಸಲ್ಲಿಸಬಹುದು’ ಎಂದು ನ್ಯಾಯಮೂರ್ತಿಗಳು ಸಲಹೆ ಮಾಡಿದ್ದಾರೆ.