ಟೆಹ್ರಾನ್: ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ ಇರಾನ್ನ ಸುಪ್ರೀಂ ನ್ಯಾಷನಲ್ ಸೆಕ್ಯೂರಿಟಿ ಕೌನ್ಸಿಲ್ ಮುಖ್ಯಸ್ಥ ಅಲಿ ಲಾರಿಜಾನಿ ಅವರು ಮೃತಪಟ್ಟಿರುವುದನ್ನು ಇರಾನ್ ಸರ್ಕಾರ ಮಂಗಳವಾರ ಅಧಿಕೃತವಾಗಿ ದೃಢಪಡಿಸಿದೆ.
ಸುಪ್ರೀಂ ನ್ಯಾಷನಲ್ ಸೆಕ್ಯೂರಿಟಿ ಕೌನ್ಸಿಲ್ ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿದ್ದು, ದಾಳಿಯಲ್ಲಿ ಲಾರಿಜಾನಿ ಅವರೊಂದಿಗೆ ಅವರ ಪುತ್ರ ಮತ್ತು ಅಂಗರಕ್ಷಕರು ಕೂಡ ಹತರಾಗಿದ್ದಾರೆ ಎಂದು ತಿಳಿಸಿದೆ.
“ದೇವರ ನಿಷ್ಠಾವಂತ ಸೇವಕ, ಶಹೀದ್ ಡಾ. ಅಲಿ ಲಾರಿಜಾನಿ ಅವರ ಪವಿತ್ರ ಆತ್ಮವು ಹುತಾತ್ಮರೊಂದಿಗೆ ಸೇರಿಕೊಂಡಿದೆ” ಎಂದು ಕೌನ್ಸಿಲ್ ಕಂಬನಿ ಮಿಡಿದಿದೆ. ಇರಾನ್ ದೇಶ ಮತ್ತು ಇಸ್ಲಾಮಿಕ್ ಕ್ರಾಂತಿಯ ಪ್ರಗತಿಗಾಗಿ ಲಾರಿಜಾನಿ ಅವರು ತಮ್ಮ ಜೀವನದುದ್ದಕ್ಕೂ ಹೋರಾಡಿದ ಮಹಾನ್ ವ್ಯಕ್ತಿಯಾಗಿದ್ದರು ಎಂದು ಕೌನ್ಸಿಲ್ ಸ್ಮರಿಸಿದೆ. ದೇಶದ ಸೇವೆಯ ಹಾದಿಯಲ್ಲಿ ಅವರು ತಮ್ಮ ದೀರ್ಘಕಾಲದ ಕನಸಾಗಿದ್ದ ‘ಹುತಾತ್ಮ’ (Martyrdom) ಪಟ್ಟವನ್ನು ಅಲಂಕರಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ದಾಳಿಯು ಇರಾನ್ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆಯಿದೆ ಎಂದು ರಾಜತಾಂತ್ರಿಕ ವಲಯಗಳಲ್ಲಿ ವಿಶ್ಲೇಷಿಸಲಾಗುತ್ತಿದೆ.






