ದುಬೈ: ಸಂಯುಕ್ತ ಅರಬ್ ಎಮಿರೇಟ್ಸ್ನ (UAE) ಪ್ರಮುಖ ನಗರಗಳಾದ ದುಬೈ ಮತ್ತು ಅಬುಧಾಬಿ ವಿಮಾನ ನಿಲ್ದಾಣಗಳ ಮೇಲೆ ನಡೆದ ಭೀಕರ ಡ್ರೋನ್ ದಾಳಿಯಲ್ಲಿ ಒಬ್ಬರು ಮೃತಪಟ್ಟಿದ್ದು, ಕನಿಷ್ಠ 11 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಅಬುಧಾಬಿ ಮತ್ತು ದುಬೈ ಮೇಲೆ ದಾಳಿ:
ಅಬುಧಾಬಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಗುರಿಯಾಗಿಸಿ ನಡೆದ ಡ್ರೋನ್ ದಾಳಿಯಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದು, ಏಳು ಜನರು ಗಾಯಗೊಂಡಿದ್ದಾರೆ. ಇತ್ತ ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪ್ಯಾಸೆಂಜರ್ ಟರ್ಮಿನಲ್ ಸಮೀಪ ನಡೆದ ದಾಳಿಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.
ಬುರ್ಜ್ ಅಲ್ ಅರಬ್ ಮತ್ತು ಜೆಬೆಲ್ ಅಲಿ ಮೇಲೆ ಅಟ್ಯಾಕ್:
ದುಬೈನ ಸುಪ್ರಸಿದ್ಧ ಐಷಾರಾಮಿ ಹೋಟೆಲ್ ಆದ ಬುರ್ಜ್ ಅಲ್ ಅರಬ್ ಮೇಲೂ ಡ್ರೋನ್ ದಾಳಿಗೆ ಯತ್ನಿಸಲಾಗಿದೆ. ಭದ್ರತಾ ಪಡೆಗಳು ಡ್ರೋನ್ ಅನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾದರಾದರೂ, ಅದರ ಅವಶೇಷಗಳು ಹೋಟೆಲ್ ಮೇಲೆ ಬಿದ್ದ ಪರಿಣಾಮ ಅಲ್ಪಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ. ಇದಲ್ಲದೆ, ದುಬೈನ ಪ್ರಮುಖ ಬಂದರಾದ ಜೆಬೆಲ್ ಅಲಿ (Jebel Ali) ಮೇಲೂ ದಾಳಿ ನಡೆದಿದೆ ಎಂದು ತಿಳಿದುಬಂದಿದೆ.
ಬಹ್ರೇನ್ ಮೇಲೂ ದಾಳಿ:
ಇದೇ ವೇಳೆ ನೆರೆಯ ರಾಷ್ಟ್ರವಾದ ಬಹ್ರೇನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಗುರಿಯಾಗಿಸಿಕೊಂಡೂ ಡ್ರೋನ್ ದಾಳಿ ನಡೆಸಲಾಗಿದೆ. ದಾಳಿಯಿಂದಾಗಿ ಸಣ್ಣಪುಟ್ಟ ಹಾನಿಗಳು ಸಂಭವಿಸಿದ್ದು, ವಿಮಾನ ನಿಲ್ದಾಣದ ಸುರಕ್ಷತೆಗಾಗಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಬಹ್ರೇನ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ಸರಣಿ ದಾಳಿಗಳು ಗಲ್ಫ್ ವಲಯದಲ್ಲಿ ಆತಂಕದ ವಾತಾವರಣವನ್ನು ಸೃಷ್ಟಿಸಿದ್ದು, ಹೆಚ್ಚಿನ ಭದ್ರತೆಯನ್ನು ನಿಯೋಜಿಸಲಾಗಿದೆ.






