janadhvani

Kannada Online News Paper

ಸೌದಿ: ರಂಜಾನ್ ಪ್ರಯುಕ್ತ ಮಸೀದಿಗಳಿಗೆ ಹೊಸ ಮಾರ್ಗಸೂಚಿಗಳು

ಮಸೀದಿಗಳಲ್ಲಿ ಇಅ್ತಿಕಾಫ್‌ನಲ್ಲಿ ಕುಳಿತುಕೊಳ್ಳುವವರು ಸರಿಯಾಗಿ ನೋಂದಾಯಿಸಿಕೊಳ್ಳಬೇಕು ಮತ್ತು ಅವರು ವಿದೇಶಿಯರಾಗಿದ್ದರೆ, ಪ್ರಾಯೋಜಕರ ಅನುಮತಿ ಪತ್ರವನ್ನು ಹೊಂದಿರಬೇಕು ಎಂದು ಸಚಿವಾಲಯ ತಿಳಿಸಿದೆ.

ರಿಯಾದ್: ಸೌದಿ ಅರೇಬಿಯಾದಲ್ಲಿ ಪವಿತ್ರ ರಂಜಾನ್ ತಿಂಗಳ ಆಗಮನದ ಮುಂಚಿತವಾಗಿ ಮಸೀದಿಗಳಿಗೆ ಇಸ್ಲಾಮಿಕ್ ವ್ಯವಹಾರಗಳ ಸಚಿವಾಲಯ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ರಂಜಾನ್ ಸಮಯದಲ್ಲಿ ವಿಶ್ವಾಸಿಗಳಿಗೆ ಸುರಕ್ಷಿತ ಮತ್ತು ಆಧ್ಯಾತ್ಮಿಕ ವಾತಾವರಣವನ್ನು ಒದಗಿಸುವ ಪ್ರಯತ್ನಗಳ ಭಾಗವಾಗಿ ಈ ಸುತ್ತೋಲೆಯನ್ನು ಹೊರಡಿಸಲಾಗಿದೆ.

ಉಮ್ ಅಲ್-ಖುರಾ ಕ್ಯಾಲೆಂಡರ್ ಪ್ರಕಾರ ಪ್ರಾರ್ಥನೆ ಸಮಯವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಮತ್ತು ಇಶಾ-ಫಜ್ರ್ ಅಝಾನ್ ನಂತರ ಕೇವಲ 15 ನಿಮಿಷಗಳ ಬಳಿಕವೇ ನಮಾಜ್ ಪ್ರಾರಂಭಿಸಬೇಕು ಎಂದು ಶಿಫಾರಸು ಮಾಡಲಾಗಿದೆ. ಮಸೀದಿ ನೌಕರರ ಹಾಜರಾತಿಯನ್ನು ಕಡ್ಡಾಯಗೊಳಿಸಿರುವ ಸಚಿವಾಲಯ, ರಜೆ ಅಗತ್ಯವಿರುವವರು ಮುಂಚಿತವಾಗಿ ಬದಲಿಗಳನ್ನು ನೇಮಿಸಿಕೊಳ್ಳಬೇಕು ಎಂದು ಸ್ಪಷ್ಟಪಡಿಸಿದೆ. ರಂಜಾನ್‌ನ ಕೊನೆಯ ಹತ್ತು ದಿನಗಳ ಖಿಯಾಮುಲ್ಲೈಲಿ (ರಾತ್ರಿ ನಮಾಜ್)ಯನ್ನು ಬೆಳಗಿನ ಜಾವದ ಮುಂಚಿತವಾಗಿ ವಿಶ್ವಾಸಿಗಳಿಗೆ ತೊಂದರೆಯಾಗದ ರೀತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಮಾರ್ಗಸೂಚಿಗಳಲ್ಲಿ ತಿಳಿಸಲಾಗಿದೆ.

ಮಸೀದಿಗಳಲ್ಲಿ ಇಅ್ತಿಕಾಫ್‌ನಲ್ಲಿ ಕುಳಿತುಕೊಳ್ಳುವವರು ಸರಿಯಾಗಿ ನೋಂದಾಯಿಸಿಕೊಳ್ಳಬೇಕು ಮತ್ತು ಅವರು ವಿದೇಶಿಯರಾಗಿದ್ದರೆ, ಪ್ರಾಯೋಜಕರ ಅನುಮತಿ ಪತ್ರವನ್ನು ಹೊಂದಿರಬೇಕು ಎಂದು ಸಚಿವಾಲಯ ತಿಳಿಸಿದೆ. ಮಸೀದಿ ಆವರಣದಲ್ಲಿ ಭಿಕ್ಷಾಟನೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಯಾವುದೇ ಉಲ್ಲಂಘನೆಗಳು ಕಂಡುಬಂದರೆ ನೌಕರರು ತಕ್ಷಣ ಭದ್ರತಾ ಅಧಿಕಾರಿಗಳಿಗೆ ತಿಳಿಸಬೇಕು. ಸಚಿವಾಲಯವು ಮಸೀದಿಗಳ ದೈನಂದಿನ ತಪಾಸಣೆ ನಡೆಸುತ್ತದೆ ಮತ್ತು ಸೂಚನೆಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.