janadhvani

Kannada Online News Paper

ಮುಚ್ಚಿದ ವಾಯುಪ್ರದೇಶವನ್ನು ಮತ್ತೆ ತೆರೆದ ಇರಾನ್: ಪರಿಸ್ಥಿತಿ ಶಾಂತವಾಗಿದೆ- ವಿದೇಶಾಂಗ ಸಚಿವ

ನಾವು ಉದ್ವಿಗ್ನ ಪರಿಸ್ಥಿತಿಯತ್ತ ತಲುಪುವುದನ್ನು ಬಯಸುವುದಿಲ್ಲ ಎಂದು ಇರಾನ್ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಘ್ಚಿ ಹೇಳಿದರು.

ಟೆಹ್ರಾನ್ | ನಾಗರಿಕ ಅಶಾಂತಿ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಅಮೆರಿಕ ಮಿಲಿಟರಿ ಕ್ರಮ ಕೈಗೊಳ್ಳಬಹುದು ಎಂಬ ಆತಂಕದ ನಡುವೆ, ಇರಾನ್ ಐದು ಗಂಟೆಗಳ ನಂತರ ಮುಚ್ಚಿದ ವಾಯುಪ್ರದೇಶವನ್ನು ಮತ್ತೆ ತೆರೆದಿದೆ.

ವಾಯುಪ್ರದೇಶ ಮುಚ್ಚುವಿಕೆಯು ಅಂತರರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳ ಮೇಲೆ ತೀವ್ರ ಪರಿಣಾಮ ಬೀರಿದ್ದು, ಕೆಲವು ವಿಮಾನಗಳನ್ನು ರದ್ದುಗೊಳಿಸುವುದು, ಮಾರ್ಗ ಬದಲಿಸಲಿಸುವುದು ಅಥವಾ ವಿಳಂಬಗೊಳಿಸುವುದು ಎಂಬುವುದು ಅನಿವಾರ್ಯ ವಾಗಿತ್ತು.

ನಿನ್ನೆ ಸಂಜೆ ವಾಯುಪ್ರದೇಶವನ್ನು ತಾತ್ಕಾಲಿಕವಾಗಿ ಮುಚ್ಚಿದ ನಂತರ ಸುಮಾರು ಐದು ಗಂಟೆಗಳ ಬಳಿಕ ಮತ್ತೆ ತೆರೆಯಲಾಯಿತು. ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋ, ಇರಾನ್‌ನ ವಾಯುಪ್ರದೇಶವನ್ನು ಹಠಾತ್ತನೆ ಮುಚ್ಚುವುದರಿಂದ ಅದರ ಕೆಲವು ಅಂತರರಾಷ್ಟ್ರೀಯ ವಿಮಾನಗಳ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಿತ್ತು,

ಹೆಚ್ಚುತ್ತಿರುವ ಕಳವಳಗಳ ನಡುವೆ, ಟೆಹ್ರಾನ್‌ನಲ್ಲಿರುವ ಬ್ರಿಟಿಷ್ ರಾಯಭಾರ ಕಚೇರಿಯನ್ನು ಸಹ ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಕತಾರ್‌ನಲ್ಲಿರುವ ವಾಯುನೆಲೆಯಿಂದ ಅಮೆರಿಕ ಕೆಲವು ಸಿಬ್ಬಂದಿಯನ್ನು ಹಿಂತೆಗೆದುಕೊಳ್ಳಲು ಪ್ರಾರಂಭಿಸಿದೆ ಎಂದು ಅಲ್ ಜಝೀರಾ ವರದಿ ಮಾಡಿದೆ. ಸ್ಪೇನ್, ಇಟಲಿ ಮತ್ತು ಪೋಲೆಂಡ್ ತಮ್ಮ ನಾಗರಿಕರನ್ನು ಇರಾನ್ ತೊರೆಯುವಂತೆ ಕೇಳಿಕೊಂಡಿವೆ.

ಈಗ ಪರಿಸ್ಥಿತಿ ಶಾಂತವಾಗಿದೆ. ಎಲ್ಲವೂ ನಿಯಂತ್ರಣದಲ್ಲಿದೆ ಮತ್ತು ನಾವು ಉದ್ವಿಗ್ನ ಪರಿಸ್ಥಿತಿಯತ್ತ ತಲುಪುವುದನ್ನು ಬಯಸುವುದಿಲ್ಲ ಎಂದು ಇರಾನ್ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಾಘ್ಚಿ ಹೇಳಿದರು.

ಏತನ್ಮಧ್ಯೆ, ಇರಾನ್ ವಿರುದ್ಧ ಮಿಲಿಟರಿ ದಾಳಿ ನಡೆಸುವುದಾಗಿ ಅಮೆರಿಕ ಬೆದರಿಕೆ ಹಾಕಿದ ನಂತರ, ಸೌದಿ ಅರೇಬಿಯಾ ತನ್ನ ವಾಯುಪ್ರದೇಶ ಅಥವಾ ದೇಶವನ್ನು ಇರಾನ್ ಮೇಲೆ ದಾಳಿ ಮಾಡಲು ಅನುಮತಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.