✍️ ಎಂ ಹೆಚ್ ಹಸನ್ ಝುಹ್‌ರಿ, ಮಂಗಳಪೇಟೆ
ಅದೊಂದು ಕಾಲವಿತ್ತು. ಮುಸ್ಲಿಂ ಸಮುದಾಯದಲ್ಲಿ ಶಾಂತವಾದ ವಾತಾವರಣ. ಒಂದೇ ತಾಯಿಯ ಮಕ್ಕಳಂತೆ ಜೀವಿಸುತ್ತಿದ್ದ ಸುಂದರವಾದ ದಿನಗಳು. ಉಲಮಾಗಳ ಹೆಜ್ಜೆ ಗಳೊಂದಿಗೆ ಹೆಜ್ಜೆ ಹಾಕುತ್ತಿದ್ದ ಜನಸಮೂಹ.1923 ರ ತನಕ ಮುಸ್ಲಿಂ ಸಮಾಜ ಒಗ್ಗಟ್ಟಿನಿಂದಲೇ ಜೀವಿಸುತ್ತಿತ್ತು. ಆದರೆ, 1923ರ ಬಳಿಕ ಮುಸ್ಲಿಂ ಐಕ್ಯ ಸಂಘ ಎಂಬ ಹೆಸರಿನಲ್ಲಿ ಹೊಸ ಸಿದ್ಧಾಂತ ತಂದು ಸಲಪೀ ತತ್ವಶಾಸ್ತ್ರ ಗಳನ್ನು ಸಮುದಾಯದ ನಡುವೆ ಬಿತ್ತಿ ಮುಸ್ಲಿಮರ ನಡುವೆ ವಿಭಜನೆ ಸೃಷ್ಟಿಸಲಾಯಿತು. ಮುಸ್ಲಿಂ ಸಮುದಾಯದ ಒಳಗೆ ಆಂತರಿಕ ಕಲಹ ಮೂಡಿಸಲಾಯಿತು.
ಜೂದರ ಅನೈತಿಕ ಕೂಸಾದ ವಹ್ಹಾಬಿ ಎಂಬ ಬಿದ್‌ಅತ್ ಗೋಪುರದ ತತ್ವಗಳನ್ನು ಕೇರಳದ ಮಣ್ಣಿನಲ್ಲಿ ನೆಟ್ಟಾಗ ಉಲಮಾಗಳು ಎಚ್ಚರವಾದರು. ವಹ್ಹಾಬಿಯ ಗಿಡಗಳು ಮೊಳಕೆಯೊಡೆದು ಮರವಾಗಿ ಸಮುದಾಯದ ಈಮಾನ್ ನಷ್ಟ ಹೊಂದಿ ಮುಸ್ಲಿಮರು ದಾರಿತಪ್ಪಬಾರದೆಂದು ಸಮಸ್ತ ಎಂಬ ಮಹತ್ತರವಾದ ಸಂಘಟನೆಗೆ ಜನ್ಮ ನೀಡಿದರು ಸಯ್ಯಿದ್ ವರಕ್ಕಲ್ ಮುಲ್ಲಕೋಯ ತಂಙಳ್ ರವರು ಮತ್ತು ಪಾಂಙಳ ಅಹ್ಮದ್ ಕುಟ್ಟಿ ಮುಸ್ಲಿಯಾರ್ ರವರು ಸಮಸ್ತದ ಸಾರಥ್ಯ ವಹಿಸಿ ಕೊಂಡರು. ಸಮಸ್ತ ಮುನ್ನಡೆಯುತ್ತಿರುವಾಗ ಶೈಖುನಾ ಎಪಿ ಉಸ್ತಾದರು ಸಮಸ್ತದೊಳಗೆ ಕಾಲಿಟ್ಟರು. ಅದರೊಂದಿಗೆ ಸಮಸ್ತದ ಚಿತ್ರಣವೇ ಬದಲಾಯಿತು.ಶೈಖುನಾ ತಾಜುಶ್ಶರಿಯ್ಯ ಅಲೀ ಕುಂಞಿ ಉಸ್ತಾದರು ಹೇಳುತ್ತಾರೆ: “ಶೈಖುನಾ ಎಪಿ ಉಸ್ತಾದರು ಸಮಸ್ತಕ್ಕೆ ಬಂದ ಬಳಿಕ ಸಮಸ್ತ ಮತ್ತಷ್ಟು ಬಲಿಷ್ಠ ವಾಯಿತು. ಕಾರ್ಯಾಚರಣೆ ವ್ಯಾಪಕವಾಯಿತು. ಆವೇಶ ಉಂಟಾಯಿತು.” ಅಂದಿನ ಕಾಲದಲ್ಲಿ ಎಪಿ ಉಸ್ತಾದರು ಭಾಷಣಾ ರಂಗದಲ್ಲಿ ತುಂಬಿ ನಿಂತಿದ್ದರು. ಅವರ ಆಕರ್ಷಣೀಯ ಮಾತುಗಳಿಗೆ ಜನರು ಮನಸೋತುಬಿಟ್ಟಿದ್ದರು. ಹಾಗಾಗಿ ಅಂದಿನ ಕಾಲದಲ್ಲಿಯೇ ಅವರ ಹೆಸರು ಕೇಳುವಾಗಲೇ ತಕ್ಬೀರ್ ಗಳು ಮೊಳಗುತ್ತಿದ್ದವು.
ಮುಸ್ಲಿಂ ಸಮುದಾಯಕ್ಕೆ ಬಾಹ್ಯ ಮತ್ತು ಆಂತರಿಕವಾಗಿ ಯಾವ ಸಮಸ್ಯೆ ಬಂದರೂ ಅದಕ್ಕೆ ಪರಿಹಾರ ಕಾಣುವ ಜವಾಬ್ದಾರಿಯನ್ನು ಸಮಸ್ತವು ಶೈಖುನಾ ಎಪಿ ಉಸ್ತಾದರಿಗೆ ನೀಡುತ್ತಿತ್ತು.ಅವರು ಯೌವ್ವನದಲ್ಲೇ ಜನ ಸ್ವಾಧೀನತೆ ಗಳಿಸಿದ ವಿದ್ವಾಂಸರಾಗಿದ್ದರು. ಸಮಸ್ತ ಉಲಮಾಗಳ ನಡುವೆ ಪ್ರಭಾವಿ ವಿದ್ವಾಂಸರಾಗಿಯೂ ಬೆಳೆದು ನಿಂತರು. ಉಲಮಾಗಳನ್ನು ಕೀಳಾಗಿ ಕಾಣುತ್ತಿದ್ದ ರಾಜಕೀಯ ನಾಯಕರ ಮುಂದೆ ಉಲಮಾಗಳಿಗೆ ಅಭಿಮಾನದ ಬದುಕು ಕಟ್ಟಿ ಕೊಡಲು ಮತ್ತು ಉಲಮಾಗಳನ್ನು ರಾಜಕೀಯ ನಾಯಕರು ನಿಯಂತ್ರಣ ಮಾಡುವ ಕಾಲವನ್ನು ಬದಲಿಸಿ, ಉಲಮಾಗಳ ಕಾಲ ಬುಡಕ್ಕೆ ರಾಜಕಾರಣಿಗಳು ಬರುವಂತೆ ಶೈಖುನಾ ಎಪಿ ಉಸ್ತಾದರು ಸಬೂಬಾದರು. ಎಪಿ ಉಸ್ತಾದರ ಆಗಮನ ಸಮಸ್ತಕ್ಕೆ ಹೊಸ ದೆಸೆಯನ್ನು ನೀಡಿತ್ತು. ಉಲಮಾಗಳಲ್ಲಿ, ಮಧ್ಯ ವಯಸ್ಕರಲ್ಲಿ, ಯುವಕರಲ್ಲಿ ಎಪಿ ಉಸ್ತಾದ್ ಸುನ್ನತ್ ಜಮಾಅತ್‌ನ ಆವೇಶ ತುಂಬಿದರು. ಬಲಿಷ್ಠವಾದ ಸುನ್ನತ್ ಜಮಾಅತ್ ಕಟ್ಟಿ ಬೆಳೆಸಲು ಅವರು ಕಾರಣರಾದರು. ಪೂರ್ವ ಕಾಲ ಸಮಸ್ತದ ಉಲಮಾಗಳ ಪೈಕಿ ಇಂದು ಬದುಕಿರುವ ಏಕೈಕ ವಿದ್ವಾಂಸ ಎಪಿ ಉಸ್ತಾದರಾಗಿದ್ದಾರೆ.
ಶೈಖುನಾ ಸುಲ್ತಾನುಲ್ ಉಲಮಾರ ಯಶಸ್ಸಿ ಹೋರಾಟದ ಹಿಂದೆ ಆಧ್ಯಾತ್ಮಿಕ ಶಕ್ತಿಯಾಗಿದ್ದವರು CM ವಲಿಯ್ಯಿ, ವಡಗರ ಮುಹಮ್ಮದ್ ಹಾಜಿ ತಂಙಳ್, ಶೈಖುನಾ ರಈಸುಲ್ ಮುಹಕ್ಕಿಕ್ಕೀನ್ ಕಣ್ಯತ್ ಉಸ್ತಾದ್, ಶೈಖುನಾ ಶಂಸುಲ್ ಉಲಮಾ, ಸಯ್ಯಿದ್ ಅವೇಳತ್ ತಂಙಳ್, ಭಾರತದ ಮುಸ್ಲಿಮರ ಧಾರ್ಮಿಕ ಹೆಬ್ಬಾಗಿಲಾಗಿದ್ದ ತಾಜುಲ್ ಉಲಮಾ, ಶೈಖುನಾ ನೂರುಲ್ ಉಲಮಾ ಎಂ ಎ ಉಸ್ತಾದ್. ಇವರ ನೆರಳಿನಲ್ಲಿ ಎಪಿ ಉಸ್ತಾದ್ ಪಳಗಿ,ಬೆಳೆದು ನಿಂತರು.
ಸಮಸ್ತವು ಉಲಮಾಗಳಿಗೆ ಮಾತ್ರ ಸೀಮಿತವಾದ ಕಾರಣ, ಉಲಮಾಗಳ ಜೊತೆ ಉಮಾರಾಗಳು ಒಟ್ಟೊಟ್ಟಿಗೆ ಕಾರ್ಯಾಚರಣೆ ಮಾಡಲು 1950 ದಶಕದಲ್ಲಿ SჄS ಗೆ ರೂಪು ನೀಡಲಾಯಿತು. ಯುವಕರಿಗಾಗಿ 1973 ರಲ್ಲಿ SSF ರಚನೆ ಗೊಂಡಿತು. ಮದ್ರಸ ಅಧ್ಯಾಪಕರಿಗಾಗಿ SJM ರೂಪೀಕರಿಸಲಾಯಿತು. ಜಮಾಅತ್ ಆಡಳಿತ ಸಮಿತಿಗಳು ಸಂಘಟಿತವಾಗಿ ಕಾರ್ಯಾಚರಿಸಲು SMA ಗೆ ಚಾಲನೆ ನೀಡಲಾಯಿತು. ಬಳಿಕ ಮುಸ್ಲಿಂ ಜಮಾಅತ್ ಅನ್ನು ಜಾರಿಗೆ ತರಲಾಯಿತು. ಮಕ್ಕಳಲ್ಲಿ ಜಾಗೃತಿ ಮೂಡಿಸಲು SBS ಜನ್ಮತಾಳಿತು. ಹೀಗೆ, ವಿವಿಧ ಹಂತಗಳಲ್ಲಿ ವಿವಿಧ ಸಂಘಟನೆಗಳನ್ನು ಕಟ್ಟುವ ಮೂಲಕ ಮುಸ್ಲಿಂ ಸಮುದಾಯ ಬಿದ್‌ಅತ್‌ನ ಅಬ್ಬರಕ್ಕೆ ಛಿದ್ರವಾಗದಂತೆ ಉಲಮಾಗಳು ಬೇಲಿಯನ್ನು ನಿರ್ಮಿಸಿದರು.
ಬಲಿಷ್ಠ ವಾದ ಸಮಸ್ತದ ನಾಯಕತ್ವ, ಸದೃಢವಾದ ಕಾರ್ಯಕರ್ತರ ಪಡೆ ಸಲಪಿ ಎಂಬ ಬಿದ್‌ಅತ್ ಹುಳಗಳು ಸುನ್ನೀ ಕೋಟೆಗೆ ನುಗ್ಗದಂತೆ ಕಾವಲಾಳುಗಳಾದರು. ಎಪಿ ಉಸ್ತಾದರ ಮುನ್ನಡೆ, ಸಮಸ್ತದ ಬಲಿಷ್ಠತನ, ಸುನ್ನೀ ಸಂಘಟನೆಗಳ ಅಬ್ಬರ ಸಲಪಿಗಳಲ್ಲಿ ಮಾತ್ರವಲ್ಲ; ಮುಸ್ಲಿಂ ಮುಖವಾಡದ ರಾಜಕಾರಣಿ ಗಳಲ್ಲಿಯೂ ಆತಂಕ ಸೃಷ್ಟಿಸಿತ್ತು. ಈ ಅಲೆಗಳನ್ನು ತಡೆಯಲು ಅವರು ತಂತ್ರಕುತಂತ್ರಗಳನ್ನು ಹೆಣೆದರು. ಅದರಲ್ಲಿ ಯಶಸ್ಸಿಯೂ ಕಂಡರು. ಆದರೆ, ಬಿದ್‌ಅತ್ ಗಳನ್ನು ಹೆಚ್ಚು ಪ್ರಚಾರ ಪಡಿಸಲು ಸಾಧ್ಯವಾಗಲಿಲ್ಲ. ಸಲಪಿಗಳು ಛಿದ್ರ ವಿಛಿದ್ರವಾಗಿ ಹತ್ತಾರು ಗುಂಪುಗಳಾಗಿ ಭಿನ್ನತೆ ಹೊಂದಿ ನಾವು ಸಲಪಿಗಳು ಎಂದು ಹೇಳಲು ಅಸಹ್ಯ ಪಡುವಷ್ಟರ ಮಟ್ಟಕ್ಕೆ ಚದುರಿ ಹೋದರು. ಇಂದು ಅವರೇ ಪರಸ್ಪರ ಕಚ್ಚಾಟ ಮಾಡುತ್ತಿದ್ದಾರೆ. ಶಿರ್ಕ್ ಕುಫ್ರ್ ಗಳ ಆರೋಪ, ಪ್ರತ್ಯಾರೋಪಗಳ ಸುಳಿಗೆ ಸಿಲುಕಿ ನಲುಗಿ ಹೋಗಿದ್ದಾರೆ.
ಭಾರತ ಸ್ವಾತಂತ್ರ್ಯ ಗೊಂಡಾಗ ಮದ್ರಸಗಳು ಶಾಲೆಗಳಿಂದ ಪ್ರತ್ಯೇಕ ವಾಯಿತು.ಶೈಖುನಾ ನೂರುಲ್ ಉಲಮಾರ ಬುದ್ಧಿವಂತಿಕೆಯ ಫಲವಾಗಿ ನೂತನ ರೂಪದಲ್ಲಿ ಮದ್ರಸ ಆವಿಷ್ಕಾರಗೊಂಡಿತು. ಹೊಸತನ ದೊಂದಿಗೆ ಮದ್ರಸ ಶಿಕ್ಷಣಕ್ಕೆ ಅಡಿಪಾಯ ಹಾಕಲಾಯಿತು. ಆ ಮೂಲಕ ಮುಸ್ಲಿಂ ಸಮುದಾಯದ ನಡುವೆ ಧಾರ್ಮಿಕ ಸಸ್ಯಗಳನ್ನು ನೆಡಲಾಯಿತು. ಸಮಸ್ತ ಮತ್ತು ಸಮಸ್ತ ಅಧೀನ ಸಂಘಟನೆ ಗಳ ಪ್ರವರ್ತನೆಯ ಫಲವಾಗಿ ಸಮಸ್ತದ ಹೆಜ್ಜೆ ಗಳು ಸ್ಪರ್ಶಗೊಂಡ ಕೇರಳ, ದಕ್ಷಿಣ ಕನ್ನಡ ಜಿಲ್ಲೆ ಸಹಿತ ಇತರ ಊರುಗಳಲ್ಲಿ ಶಿಕ್ಷಣದ ಹೊಂಬೆಳಕು ಹೊತ್ತಿ ಉರಿಯತೊಡಗಿತು. ಸಮಸ್ತದ ಕ್ರಾಂತಿ ಅರಿಯಬೇಕಾದರೆ ಸಮಸ್ತದ ಬೆಳಕು ಹರಿಯದ ಉತ್ತರ ಕರ್ನಾಟಕ, ಉತ್ತರ ಭಾರತದ ಮುಸ್ಲಿಮರ ಸ್ಥಿತಿಗತಿಗಳನ್ನು ಕಂಡರೆ ಸಾಕು. ಧಾರ್ಮಿಕ ಜ್ಞಾನ ವಿಲ್ಲದೆ ಶಿಕ್ಷಣ ವಂಚಿತರಾಗಿರುವ ಮುಸ್ಲಿಮರು. ಹೆಸರಿಗೆ ಮಸೀದಿ,ದರ್ಗಾಗಳಿವೆ.ಆದರೆ ಇಸ್ಲಾಮಿನ ಜ್ಞಾನ ಅವರಲ್ಲಿಲ್ಲ. ಇತ್ತೀಚೆಗಿನ ವರ್ಷಗಳಲ್ಲಿ ಉತ್ತರ ದತ್ತ ಉಲಮಾಗಳ ಸ್ಪರ್ಶ ಉಂಟಾಯಿತು. ಉಲಮಾಗಳ ಬೆವರಿನ ಹನಿಗಳು ಉದುರಿದ ಕಡೆಗಳಲ್ಲಿ ಜ್ಞಾನದ ಬೆಳಕುಗಳು ಉರಿಯುತ್ತಿದೆ. ಶೈಕ್ಷಣಿಕವಾಗಿ ಸಮಸ್ತ ನಡೆಸಿದ ಶಿಕ್ಷಣ ಕ್ರಾಂತಿ ಸಾಟಿಯಿಲ್ಲದ್ದು.
ಸಮಸ್ತ ನೂರನೇ ವರ್ಷಾಚರಣೆಯ ಸಂಭ್ರಮದಲ್ಲಿದೆ. ಸಮಸ್ತ ನೂರು ವರ್ಷಗಳ ಹಾದಿಯಲ್ಲಿ ಮುಸ್ಲಿಂ ಸಮುದಾಯದಲ್ಲಿ ಪ್ರಗತಿಯ ಶಿಖರಗಳನ್ನೇ ಕಾಣಬಹುದು. ಸಮಸ್ತದ ಸಾಧನೆಗಳನ್ನು ನೋಡಿ!
▪️ಸಾವಿರಾರು ಮಸೀದಿ ಮದ್ರಸಗಳು,
▪ಬಿರುದು ಪಡೆದ ಸಾವಿರಾರು ವಿದ್ವಾಂಸರು
▪️ನೂರಾರು ಸಮನ್ವಯ ಶಿಕ್ಷಣ ಕೇಂದ್ರಗಳು.
▪️ ದಅ್‌ವಾ ಕಾಲೇಜುಗಳು.
▪️ ನೂರಾರು ಶಾಲಾ ಕಾಲೇಜುಗಳು
▪️ಮಹಿಳಾ ಕಾಲೇಜುಗಳು
▪️ಮೆಡಿಕಲ್ ಕಾಲೇಜು
▪️ ಲಾ ಕಾಲೇಜು
▪️ ಡಾಕ್ಟರ್ ಇಂಜಿನಿಯರ್, ಪದವಿ ಪಡೆದವರು
▪️ಸಾವಿರಾರು ಮಂದಿಗೆ ಉದ್ಯೋಗ ಗಳು
▪️ ಬಡ ಹೆಣ್ಣು ಮಕ್ಕಳಿಗೆ ವಿವಾಹ ಭಾಗ್ಯಗಳು
▪️ ವಸತಿ ರಹಿತರಿಗೆ ಮನೆ ನಿರ್ಮಾಣ ಗಳು
▪️ನೀರಿನ ವ್ಯವಸ್ಥೆ ಗಳು
▪️ಸಾಂತ್ವಾನ ಕಾರ್ಯಗಳು
ಹೀಗೆ… ಒಂದಲ್ಲ…ಎರಡಲ್ಲ… ಮುಸ್ಲಿಮ್ ಸಮುದಾಯದ ಪ್ರಗತಿ ಮತ್ತು ಉನ್ನತಿ ಗಾಗಿ ಸಮಸ್ತ ಉಲಮಾಗಳ ಸೇವೆಗಳು ನೂರಾರು ಇವೆ. ಶೈಕ್ಷಣಿಕವಾಗಿ ಮುಸ್ಲಿಂ ಸಮುದಾಯ ಮುನ್ನಡೆ ಹೊಂದಲು ಸಮಸ್ತ ಉಲಮಾಗಳ ಅವಿಶ್ರಾಂತ ಪರಿಶ್ರಮ ವಿದೆ. ಸಾರ್ಥಕ ಸೇವೆಯೊಂದಿಗೆ ನೂರು ವರ್ಷ ಪೂರ್ತಿಗೊಳಿಸುವಾಗ ಮುಸ್ಲಿಂ ಸಮುದಾಯದ ಈಮಾನ್‌ನ ಭದ್ರತೆಯೊಂದಿಗೆ ಆರ್ಥಿಕ ಮತ್ತು ಸಾಮಾಜಿಕ ರಕ್ಷಣೆಯ ಬೇಲಿ ನಿರ್ಮಿಸಿದೆ ಎಂಬುದು ಸಮಸ್ತಕ್ಕಿರುವ ಹಿರಿಮೆಯಾಗಿದೆ. ಸಮಸ್ತ ಸೆಂಚುರಿಯನ್ನು ಅತ್ಯಂತ ದೊಡ್ಡ ಸಮಾವೇಶವಾಗಿ ಆಚರಿಸಲು ಸಮಸ್ತ ಉಲಮಾ ಒಕ್ಕೂಟ ತೀರ್ಮಾನಿಸಿದೆ. ಕಳೆದ ಮೂರು ವರ್ಷಗಳಿಂದ ವಿವಿಧ ಪದ್ಧತಿ ಗಳನ್ನು ಘೋಷಣೆ ಮಾಡಿ ಮಾದರಿಯೋಗ್ಯ ಆಚರಣೆಗೆ ಮುನ್ನಡಿ ಬರೆದಿತ್ತು. ಮೊದಲೆರಡು ವರ್ಷಗಳಲ್ಲಿ SSF ಮತ್ತು SჄS ವಿವಿಧ ಯೋಜನೆಗಳೊಂದಿಗೆ ಆಚರಿಸಿದ್ದರೆ, ಇದೀಗ ಮುಸ್ಲಿಂ ಜಮಾಅತ್ ಕೇರಳ ಯಾತ್ರೆಯ ಮೂಲಕ ಶತಮಾನೋತ್ಸವವನ್ನು ಆಚರಿಸಲು ಸಿದ್ಧತೆ ಆರಂಭಿಸಿದೆ. ಸಮಸ್ತ ಅಧ್ಯಕ್ಷರಾದ ಶೈಖುನಾ ರಈಸುಲ್ ಉಲಮಾ ಈ ಸುಲೈಮಾನ್ ಉಸ್ತಾದರ ಆಶಿರ್ವಾದ ದೊಂದಿಗೆ, ಸಮಸ್ತ ಒಕ್ಕೂಟದ ಮಹಾ ಕಾರ್ಯದರ್ಶಿ ಇಂಡಿಯನ್ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಶೈಖುನಾ ಎಪಿ ಉಸ್ತಾದರ ಸಾರಥ್ಯದಲ್ಲಿ ಕೇರಳ ಯಾತ್ರೆ ನಡೆಯಲಿದೆ. ಮನುಷ್ಯತ್ವ ಕಳಕೊಂಡ ವರ್ತಮಾನ ದಲ್ಲಿ ಮನುಷ್ಯರೊಂದಿಗೆ ಎಂಬ ಘೋಷಣೆ ಯೊಂದಿಗೆ ಹದಿನೇಳು ದಿನಗಳ ಯಾತ್ರೆಯು ನಡೆಯಲಿದೆ. ಮಾನವ ಮೈತ್ರಿಯನ್ನು ಸಾರುವ ಈ ಯಾತ್ರೆಯು ಕೇರಳದ ಚರಿತ್ರೆಯಲ್ಲಿ ಮರೆಯಲಾಗದ ಅವಿಸ್ಮರಣೀಯ ಘಟನೆಗಳಿಗೆ ಅಡಿಪಾಯ ಹಾಕುವುದರಲ್ಲಿ ಸಂಶಯವಿಲ್ಲ.


