ತೆಕ್ಕಲಕೋಟೆ: ಪಟ್ಟಣದ ಆದೋನಿ ದರ್ಗಾದ ಆವರಣದಲ್ಲಿ ಝೀಲ್ ಫೌಂಡೇಶನ್ ಹಮ್ಮಿಕೊಂಡಿದ್ದ ‘ಎಲೆಗನ್ಸ್’ ಕಲಾ ಕಾರ್ಯಕ್ರಮವು ವಿದ್ಯಾರ್ಥಿಗಳ ಪ್ರತಿಭೆ ಹಾಗೂ ಸಮಾಜಮುಖಿ ಚಿಂತನೆಗಳಿಗೆ ವೇದಿಕೆಯಾಯಿತು. ಭಾನುವಾರ ನಡೆದ ಸಮಾರೋಪ ಸಮಾರಂಭದಲ್ಲಿ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡು ಶಿಸ್ತು ಮತ್ತು ಸಂಭ್ರಮದ ಪ್ರದರ್ಶನ ನೀಡಿದರು.
ಜಾಗೃತಿ ಮೂಡಿಸಿದ ವಿದ್ಯಾರ್ಥಿ ರ‍್ಯಾಲಿ: ಕೇವಲ ಕಲಾ ಪ್ರದರ್ಶನಕ್ಕೆ ಸೀಮಿತವಾಗದ ಈ ಕಾರ್ಯಕ್ರಮದಲ್ಲಿ ‘ಮಾದಕ ವ್ಯಸನ ಮುಕ್ತ ಸಮಾಜ’ ನಿರ್ಮಾಣದ ಕುರಿತು ಬೃಹತ್ ವಿದ್ಯಾರ್ಥಿ ರ‍್ಯಾಲಿ ನಡೆಸಲಾಯಿತು. ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಫಲಕಗಳನ್ನು ಹಿಡಿದು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ವಿದ್ಯಾರ್ಥಿಗಳ ನಡೆ ಸಾರ್ವಜನಿಕರ ಗಮನ ಸೆಳೆಯಿತು.
ಮಂಗಳೂರಿನ ಖ್ಯಾತ ವಿದ್ವಾಂಸ ತ್ವಯ್ಯಿಬ್ ಸಖಾಫಿ ಅವರು ಮಾತನಾಡಿ, ಆಧ್ಯಾತ್ಮಿಕತೆಯೊಂದಿಗೆ ಸಾಮಾಜಿಕ ಸ್ವಾಸ್ಥ್ಯ ಕಾಪಾಡಿಕೊಳ್ಳುವ ಅಗತ್ಯವನ್ನು ಮನವರಿಕೆ ಮಾಡಿಕೊಟ್ಟರು. ಝೀಲ್ ಫೌಂಡೇಶನ್‌ನ ಈ ಪ್ರಯತ್ನವು ಯುವ ಸಮೂಹವನ್ನು ಸನ್ಮಾರ್ಗದತ್ತ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಆಶಿಸಿದರು.
ಧಾರ್ಮಿಕ ಚಟುವಟಿಕೆಗಳ ಭಾಗವಾಗಿ ‘ಖತಮೇ ಕುರಾನ್’ ಪಾರಾಯಣ ಕಾರ್ಯಕ್ರಮವು ಅರ್ಥಪೂರ್ಣವಾಗಿ ಜರುಗಿತು.
ಈ ಸಂದರ್ಭದಲ್ಲಿ ಸೈಯದ್ ಚಾಂದ್ ಪೀರ್ ಶಾ ಖಾದ್ರಿ, ಸೈಯದ್ ಅನ್ಸಾರ್ ಖಾದ್ರಿ , ಸೈಯದ್ ರಹಮತ್ ಶಾ ಖಾದ್ರಿ, ಅತಿಥಿಗಳಾಗಿ ಬಳ್ಳಾರಿಯ ನವಾಝ್ ಹಾಜಿಸಾಬ್, ಜಮಾಲ್ ಮದನಿ, ನವಾಝ್ ಸಖಾಫಿ, ಸಿದ್ದೀಕ್ ಸಖಾಫಿ , ಆಸಿಫ್ ರಿಫಾಯಿ ಸಿರಿಗೇರಿ ,ಮೌಲ ಹುಸೇನ್ ಹಝ್ರತ್ ಉಪಸ್ಥಿತರಿದ್ದರು.







