janadhvani

Kannada Online News Paper

ಕರ್ನಾಟಕದಲ್ಲಿಯೂ ಇಂತಹ ಟ್ರೈನರ್ ಗಳಿದ್ದಾರೆ

ಎಲ್ಲಾ ಅಡೆತಡೆಗಳನ್ನು ದಾಟಿ ನಿರಂತರವಾಗಿ ಕೇರಳಕ್ಕೆ ಹೋಗಿ ಟ್ರೈನಿಂಗ್ ಪಡೆದು ಸಾಹಸ ಮೆರೆದವರು ಹಾಫಿಳ್ ‌GM ಹನೀಫಿ ಉಸ್ತಾದರು. ಅವರ ಪರಿಶ್ರಮ ನಿಜಕ್ಕೂ ಅದ್ಭುತ. ಕರ್ನಾಟಕದ ಏಕೈಕ ಹಿಝ್‌ಬ್ ಟ್ರೈನರ್ ಎಂಬ ಹೆಗ್ಗಳಿಕೆಯೂ ಇವರಿಗಿದೆ.

✍️ ಎಂ ಹೆಚ್ ಹಸನ್ ಝುಹ್‌ರಿ, ಮಂಗಳಪೇಟೆ

ಕಾಟಿಪಳ್ಳ ರೇಂಜ್‌ನಲ್ಲಿ ಹಿ‌ಝ್‌ಬ್ ಟ್ರೈನರ್ ಬಗ್ಗೆ ಚರ್ಚೆಯಾದಾಗ ಕೇರಳದ ಹಲವು ಉನ್ನತ ವ್ಯಕ್ತಿ ಗಳ ಹೆಸರುಗಳು ಮುಂಚೂಣಿಗೆ ಬಂದಿದ್ದವು.‌ ಆದರೆ, ಬ್ಯಾರಿ ಭಾಷೆ ಅರಿತವರು ಬಂದರೆ ನಮ್ಮ ಸಂಶಯ ನಿವಾರಣೆಯಾಗಬಹುದೆಂಬ ಅಭಿಪ್ರಾಯ ವ್ಯಕ್ತವಾಯಿತು. ಮದ್ರಸ ಶಿಕ್ಷಣ ಮಂಡಳಿ ಕರ್ನಾಟಕದಿಂದ ಹಿ‌ಝ್‌ಬ್ ಟ್ರೈನರ್ ಆಗಿ ನೇಮಕ ಮಾಡಿರುವ ಹಾಫಿಳ್ GM ಸುಲೈಮಾನ್ ಹನೀಫಿ ಉಸ್ತಾದರನ್ನು ಆಯ್ಕೆ ಮಾಡಲು ತೀರ್ಮಾನಿಸಿದೆವು‌. ಹೊಸ ಅನುಭವ ಇರುವ ಕಾರಣ ಇವರು ಸಾಕಾಗಬಹುದೇ ? ಎಂಬ ಆತಂಕವೂ ಕೆಲವರಿಗಿತ್ತು. ಮಾಶಾ ಅಲ್ಲಾಹ್! ಪ್ರಥಮ ಹಂತದ ಮೂವತ್ತು ಗಂಟೆಗಳ ತರಗತಿ ಪೂರ್ಣ ಗೊಂಡಾಗ ಇವರನ್ನು ಆಯ್ಕೆ ಮಾಡದೇ ಹೋಗಿದ್ದರೆ ಅದು ಪರಿಹರಿಸಲಾಗದ ನಷ್ಟವಾಗುತ್ತಿತ್ತು. ತುಂಬಲಾರದ ನುಕ್ಸಾನು ಆಗಿ ಹೋಗುತ್ತಿದ್ದವು. ರೇಂಜ್ ನಾಯಕರ ಆಯ್ಕೆ ಅತ್ಯುತ್ತಮ ವಾಗಿತ್ತೆಂದು ಮೊದಲ ಹಂತದ ತರಗತಿ ಮುಗಿದಾಗಲೇ ಅರಿವಾಗಿತ್ತು. ಅದ್ಭುತ ವಿವರಣೆ. ಮನಮೋಹಕ ತರಗತಿ,ಆಕರ್ಷಣೀಯ ವಿಷಯ ಮಂಡನೆ. ಮನ ಸೆಳೆಯುವ ರೀತಿಯ ಮಾತುಗಾರಿಕೆ. ಹಿಝ್‌ಬ್ ತರಬೇತಿಗೊಂದು ಮೆರುಗನ್ನು ನೀಡಿತ್ತು.

ಹಿಜಾಯಿಯ್ಯಾದ 29 ಅಕ್ಷರಗಳಿಗೆ ಹದಿನೇಳು ಮಖ್‌ರಜಗಳು ಹಾಗೂ ಹದಿನೇಳು ಸ್ವಿಫಾತುಗಳಿವೆ. ಸ್ವಿಫಾತುಗಳ ಬಗ್ಗೆ ಗೊಂದಲಗಳು ಅನೇಕರಿಗಿದೆ. ಅದು ಹೊರಡ ಬೇಕಾದ ರೀತಿ, ನೀತಿಗಳ ಬಗ್ಗೆ ಅತ್ಯಂತ ಸುಂದರವಾಗಿ ಚಿಕ್ಕು ಬಿಡಿಸುವಂತೆ ಅರ್ಥವಾಗುವ ರೂಪದಲ್ಲಿ ವಿವರಿಸಿ ಕೊಟ್ಟಿದ್ದರು. ಗಲಿಬಿಲಿ ಯಾಗುವ ಕಡೆಗಳಲ್ಲಿ ಉದಾಹರಣೆ ಸಹಿತ ವಿವರಿಸಿ ಅದು ನೆನಪಿನಲ್ಲಿ ಉಳಿಯಲು ಸುಲಭ ಮತ್ತು ಸರಳ ಮಾರ್ಗವನ್ನೂ ತಿಳಿಸಿ ಕೊಟ್ಟರು. ತರಗತಿಯು ಪ್ರತಿಯೊಬ್ಬರಿಗೂ ಉಪಕಾರ ಸಿಗಬೇಕೆಂಬ ದೃಷ್ಟಿಯಿಂದ ಅತ್ಯಂತ ಕಾಳಜಿ ವಹಿಸುತ್ತಿದ್ದರು. ಕಷ್ಟಕರವಾದ ವಿಷಯಗಳನ್ನು ಲಲಿತವಾದ ರೀತಿಯಲ್ಲಿ ಸರಳಗೊಳಿಸಿ ಕಲಿಯಲು ಸುಲಭ ವಾಗುವಂತೆ ವಿಶದಪಡಿಸಿದ್ದರು.

ಸಾಧಾರಣ ಮಲಯಾಳಂ ನಲ್ಲಿ ಮಖ್‌ರಜಗಳ ಬಗ್ಗೆ ವಿವರಿಸುವಾಗ ಮಲಯಾಳಂ ಪ್ರಯೋಗ ಅರ್ಥವಾಗಬೇಕೆಂದಿಲ್ಲ. ಅದನ್ನು ಕೇರಳದ ಟ್ರೈನರ್ ಗಳು ಬ್ಯಾರಿಗಳಿಗೆ ಅರ್ಥವಾಗುವಂತೆ ಪರಿಭಾಷೆಯಲ್ಲಿ ವಿವರಿಸಲೂ ಸಾಧ್ಯವಾಗುವುದಿಲ್ಲ. ಈ ಸಮಸ್ಯೆ ಹಲವು ಬಾರಿ ಅನುಭವಿಸಿದ್ದೂ ಇದೆ. ಈ ಕೊರತೆಯನ್ನು ನೀಗಿಸಿ ಪೂರ್ಣವಾದ ರೀತಿಯಲ್ಲಿ ವಿವರಿಸಿ ಕೊಟ್ಟವರು ಹಾಫಿಳ್ ಹನೀಫಿ ಉಸ್ತಾದರು. ಇಖ್‌ಫಾಅ್, ಇದ್‌ಗಾಮುನ್ ಬಿಗುನ್ನಾದ ವ್ಯತ್ಯಾಸ, ತಫ್‌ಖೀಮ್ ತರ್ಖೀಖುಗಳು ಒಟ್ಟೊಟ್ಟಿಗೆ ಬಂದರೆ ಓದುವ ಕ್ರ‌ಮ ಎಲ್ಲವೂ ಪ್ರತಿಯೊಬ್ಬರಿಗೂ ಮನಸ್ಸಿಗಿಳಿಯುವಂತೆ ವಿವರಿಸಿದ್ದರು. ಒಂದು ದಿನ ಪೂರ್ತಿ ಅಂದರೆ ಬೆಳಿಗ್ಗೆ ಯಿಂದ ರಾತ್ರಿ ಹತ್ತುವರೆ ತನಕ ನಡೆದ ತರಗತಿಯಲ್ಲಿ ಯಾರಿಗೂ ತೂಗಾಡಿಕೆ, ನಿರಾಸಕ್ತಿ ಉದಾಸೀನತೆ, ತರಗತಿ ಸಾಕೆಂಬ ಭಾವನೆ ಉಂಟಾಗಲಿಲ್ಲ. ಪ್ರತೀ ತರಗತಿಯೂ ಕೇಳಲು ಆವೇಶವಿತ್ತು. ಅತ್ಯಂತ ಸುಂದರವಾಗಿ ಸುಶ್ರಾವ್ಯ ಕಂಠದ ಮೂಲಕ, ಮನಸ್ಸಿಗೆ ಮುದ ನೀಡುವ ರೀತಿಯಲ್ಲಿ ಪಾರಾಯಣ ಮಾಡುವ ಅವರ ಖಿರಾಅತ್, ಸೌಮ್ಯ ಭಾಷೆಯಲ್ಲಿ ಎಚ್ಚರಿಕೆ ವಹಿಸಿ ಯಾರಿಗೂ ಮಾತಿನಲ್ಲಿ ನೋವಾಗಬಾರದೆಂದು ವಿಷಯ ಮಂಡಿಸುತ್ತಿದ್ದ ಅವರ ತರಗತಿ ಎಲ್ಲರ ಮನ ಗೆದ್ದಿತ್ತು. ಅನೇಕ ಬಾರಿ ಹಿಝ್‌ಬ್ ತರಗತಿಗೆ ಕುಳಿತವರು ಕೂಡ ಹಲವಾರು ಸಂಶಯಗಳು ಕೇಳಿದಾಗಲೂ ಅದನ್ನು ವಿವರಣಾತ್ಮಕ ರೀತಿಯಲ್ಲಿ ಬಗೆ ಹರಿಸಿ ಕೊಡುತ್ತಿದ್ದರು.ದೀರ್ಘ ಗಂಟೆಗಳ ತರಗತಿಯಾದರೂ ಕೂಡ ನಡುವೆ ಬಿಡುವು ಸಿಕ್ಕರೆ ಆ ಸಮಯದಲ್ಲಿಯೂ ಸಂಶಯ ನಿವಾರಿಸಲು ಬಂದವರಿಗಾಗಿ ಸಮಯ ನೀಡುತ್ತಿದ್ದರು. ತರಗತಿ ನಡುವೆ ಅನಗತ್ಯ ವಲ್ಲದ ಹಾಸ್ಯಮಯ ಮಾತುಗಳ ಮೂಲಕ ಆವೇಶ ತುಂಬುತ್ತಿದ್ದರು.

ಸಾಮಾನ್ಯವಾಗಿ, ಹಿಝ್‌ಬ್ ಕಲಿಸಲು ಕೇರಳದಿಂದ ಟ್ರೈನರ್ ಗಳು ಬರುತ್ತಾರೆ. ಟ್ರೈನರ್ ಆಗಬೇಕಾದರೆ ಕೇರಳದ ಮದ್ರಸ ಶಿಕ್ಷಣ ಮಂಡಳಿ ಅವರಿಗೆ ತರಬೇತಿ ನೀಡುತ್ತದೆ. ಕೇರಳದಲ್ಲಿ ಹೋಗಿ ಅದಕ್ಕಾಗಿ ತಿಂಗಳುಗಳ ಕಾಲ ಪರಿಶ್ರಮ ಪಡಬೇಕು ಹಾಗೂ ಅವರು ಕರೆದಾಗಲೆಲ್ಲ ಟ್ರೈನ್ ಹತ್ತಿ ಕೇರಳದತ್ತ ಮುಖಮಾಡಬೇಕು. ಮಸೀದಿ ಸೇವೆಯಲ್ಲಿ ಇರುವ ಉಸ್ತಾದರುಗಳಿಗೆ ಇದು ತ್ರಾಸದಾಯಕ ಕಾರ್ಯ. ಹಾಗಾಗಿ ಈ ಉಸಾಬರಿ ಬೇಡ ಎಂದೇ ಬಹುತೇಕ ಉಸ್ತಾದರುಗಳು ಇದರ ಬಗ್ಗೆ ಆಸಕ್ತಿ ವಹಿಸುವುದಿಲ್ಲ.

ಆದರೆ, ಈ ಎಲ್ಲಾ ಅಡೆತಡೆಗಳನ್ನು ದಾಟಿ ನಿರಂತರವಾಗಿ ಕೇರಳಕ್ಕೆ ಹೋಗಿ ಟ್ರೈನಿಂಗ್ ಪಡೆದು ಸಾಹಸ ಮೆರೆದವರು ಹಾಫಿಳ್ ‌GM ಹನೀಫಿ ಉಸ್ತಾದರು. ಅವರ ಪರಿಶ್ರಮ ನಿಜಕ್ಕೂ ಅದ್ಭುತ. ಕರ್ನಾಟಕದ ಏಕೈಕ ಹಿಝ್‌ಬ್ ಟ್ರೈನರ್ ಎಂಬ ಹೆಗ್ಗಳಿಕೆಯೂ ಇವರಿಗಿದೆ. ತರಗತಿಯನ್ನು ಕೇಳುಗರಿಗೆ ಅರ್ಥವಾಗಿಸ ಬೇಕೆಂಬ ತಂತ್ರಗಾರಿಕೆಯನ್ನು ಚೆನ್ನಾಗಿಯೇ ಕರಗತ ಮಾಡಿಕೊಂಡಿದ್ದಾರೆ ಹಾಫಿಳ್ ಉಸ್ತಾದರು. ಉತ್ತಮ ಅಧ್ಯಾಪಕನಿಗೆ ಮಾತ್ರ ಅತ್ಯುತ್ತಮ ರೀತಿಯಲ್ಲಿ ತರಗತಿ ಮಂಡಿಸಲು ಸಾಧ್ಯ ಎಂಬುದಕ್ಕೆ GM ಹಾಫಿಳ್‌ರವರು ನಿದರ್ಶನ ವಾಗಿದ್ದಾರೆ. ಅಲ್ಲಾಹನು ಇನ್ನಷ್ಟು ಎತ್ತರಕ್ಕೇರಿಸಲಿ. ಆಫಿಯತ್ ಇರುವ ದೀರ್ಘಾಯುಷ್ಯ ಕರುಣಿಸಲಿ.