janadhvani

Kannada Online News Paper

ಭಾರತೀಯ ರೂಪಾಯಿ ಮೌಲ್ಯ ದಾಖಲೆಯ ಕುಸಿತ- ಬಿಜೆಪಿ ಸರ್ಕಾರ ವಿರುದ್ಧ ಪ್ರಿಯಾಂಕಾ ಗಾಂಧಿ ವಾಗ್ದಾಳಿ

ಗುರುವಾರದ ವಹಿವಾಟಿನಲ್ಲಿ ರೂಪಾಯಿ 28 ಪೈಸೆ ಕುಸಿದು, ಅಮೆರಿಕನ್ ಡಾಲರ್ ಎದುರು 90.43ರ ಸಾರ್ವಕಾಲಿಕ ಕನಿಷ್ಠ ಮಟ್ಟವನ್ನು ತಲುಪಿದೆ.

ನವದೆಹಲಿ: ದೇಶ ಆರ್ಥಿಕ ವ್ಯವಸ್ಥೆ ಅಭಿವೃದ್ಧಿಯ ಹಾದಿಯಲ್ಲಿದೆ ಎಂದು ಹೇಳುತ್ತಿರುವಾಗಲೇ ಇಡೀ ಏಷ್ಯಾದಲ್ಲೇ ರೂಪಾಯಿ ಮೌಲ್ಯ ಕುಸಿತ ಕಂಡಿದೆ. ಈ ರೀತಿ ರೂಪಾಯಿ ಮೌಲ್ಯವು ಸರ್ವಕಾಲಿಕ ಕುಸಿತ ಕಂಡಿರುವುದು ಇದೇ ಮೊದಲು. ದೇಶದ ರೂಪಾಯಿ ಮೌಲ್ಯವು ಇಡೀ ಏಷ್ಯಾದಲ್ಲಿ ಈ ಪರಿ ಕುಸಿತ ಕಂಡಿರುವುದರಿಂದ ಮುಂದಿನ ದಿನಗಳಲ್ಲಿ ಹಣದುಬ್ಬರ ಹೆಚ್ಚಳವಾಗುವ ಸಾಧ್ಯತೆ ಇದೆ.

ಅಮೆರಿಕನ್ ಡಾಲರ್ ಎದುರು ಭಾರತೀಯ ರೂಪಾಯಿ 90 ರ ಗಡಿ ದಾಟಿದ ಬೆನ್ನಲ್ಲೇ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹಿಂದೊಮ್ಮೆ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದಾಗ ಬಿಜೆಪಿ ನಾಯಕರು ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರ ಸರ್ಕಾರದ ವಿರುದ್ಧ ಟೀಕಿಸಿದ್ದರು. ಈಗ ರೂಪಾಯಿ 90 ರ ಗಡಿ ದಾಟಿದಾಗ ಬಿಜೆಪಿ ಏನು ಹೇಳುತ್ತದೆ ಎಂದು ಅವರು ಪ್ರಶ್ನಿಸಿದ್ದಾರೆ.

ಗುರುವಾರದ ವಹಿವಾಟಿನಲ್ಲಿ ರೂಪಾಯಿ 28 ಪೈಸೆ ಕುಸಿದು, ಅಮೆರಿಕನ್ ಡಾಲರ್ ಎದುರು 90.43ರ ಸಾರ್ವಕಾಲಿಕ ಕನಿಷ್ಠ ಮಟ್ಟವನ್ನು ತಲುಪಿದೆ. ಈ ಬಗ್ಗೆ ಸಂಸತ್ ಭವನ ಸಂಕೀರ್ಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕಾ ಗಾಂಧಿ, “ಕೆಲ ವರ್ಷಗಳ ಹಿಂದೆ ಮನಮೋಹನ್ ಸಿಂಗ್ ಅವರ ಸರ್ಕಾರವಿದ್ದಾಗ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದಾಗ ಬಿಜೆಪಿಯವರು ಏನು ಹೇಳಿದ್ದರು? ಈಗ ಅವರ ಉತ್ತರ ಏನು? ನನ್ನನ್ನು ಕೇಳಬೇಡಿ, ಅವರನ್ನು ಕೇಳಿ” ಎಂದು ಹೇಳಿದರು.

ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯವು ಅಮೇರಿಕಾದ ಡಾಲರ್ ಎದುರು ಗುರುವಾರ (ಡಿಸೆಂಬರ್ 04)ರಂದು ಸರ್ವಕಾಲಿಕ ಕುಸಿತ ಕಂಡಿದೆ. ವಿದೇಶಿ ಬಂಡವಾಳದ ಹೊರಹರಿವು ಹೆಚ್ಚಾಗುತ್ತಿರುವುದು, ಕಚ್ಚಾ ತೈಲದ ಬೆಲೆ ಹೆಚ್ಚಾಗಿರುವುದು ಸೇರಿದಂತೆ ಹಲವು ಕಾರಣಗಳಿಗೆ ರೂಪಾಯಿ ಮೌಲ್ಯವು ಭಾರೀ ಕುಸಿತ ಕಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ಅವಧಿಯಲ್ಲಿ ರೂಪಾಯಿ ಮೌಲ್ಯವು ನಿರಂತರವಾಗಿ ಕುಸಿಯುತ್ತಿದೆ.

ಆರ್ಥಿಕವಾಗಿ ವಿಶ್ವದ ನಾಲ್ಕನೇ ರಾಷ್ಟ್ರವಾಗಿ ಭಾರತ ಮುಂದುವರಿಯುತ್ತಿದೆ ಎಂದು ಕೇಂದ್ರ ಸರ್ಕಾರವು ಹೇಳುತ್ತಿದೆ. ಆದರೆ ರೂಪಾಯಿ ಮೌಲ್ಯವು ಸರ್ವಕಾಲಿಕ ಕುಸಿತವನ್ನು ಕಂಡಿದೆ. ರೂಪಾಯಿ ಮೌಲ್ಯವು ಕಳೆದ 5 ವರ್ಷಗಳ ಅವಧಿಯಲ್ಲಿ ರೂಪಾಯಿ ಮೌಲ್ಯವು ನಿರಂತರವಾಗಿ ಕುಸಿತ ಕಾಣುತ್ತಿದೆ. ಇದಕ್ಕೆ ಪರೋಕ್ಷವಾಗಿ ಅಮೇರಿಕಾವೂ ಕಾರಣವಾಗಿದೆ. ಅಮೇರಿಕಾದ ಆರ್ಥಿಕ ನೀತಿಗಳು ನಿರಂತರವಾಗಿ ಭಾರತದ ಮೇಲೆ ಪರಿಣಾಮ ಬೀರಿದೆ. ಅದರಲ್ಲೂ ಸುಂಕ ಹೆಚ್ಚಳದ ನಂತರ ವಿದೇಶಿ ಹೂಡಿಕೆಯ ಮೇಲೆ ಪರಿಣಾಮ ಬೀರಿದೆ.

ಇನ್ನು ಡಾಲರ್‌ನ ಮುಂದೆ ರೂಪಾಯಿಯ ಮೌಲ್ಯವು ಭಾರೀ ಕುಸಿತ ಕಾಣುತ್ತಿರುವುದಕ್ಕೆ ಮುಖ್ಯ ಕಾರಣಗಳಲ್ಲಿ ಅಮೇರಿಕಾ ಹಾಗೂ ಭಾರತದ ನಡುವಿನ ಬಾಂಧವ್ಯ ಕುಸಿತ ಕಂಡಿರುವುದು ಸಹ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಇತ್ತೀಚಿನ ವರ್ಷಗಳಲ್ಲಿ ಭಾರತ ಮತ್ತು ಅಮೇರಿಕಾದ ನಡುವೆ ಉತ್ತಮ ಸಂಬಂಧ ಇಲ್ಲ. ಅಮೇರಿಕಾ ಮತ್ತು ಭಾರತದ ನಡುವೆ ವ್ಯಾಪಾರ ಒಪ್ಪಂದದಲ್ಲಿ ಅನಿಶ್ಚಿತತೆ ಸೃಷ್ಟಿಯಾಗಿದೆ. ಅಲ್ಲದೇ ವಿದೇಶಿ ಹೂಡಿಕೆದಾರರು ಷೇರುಮಾರುಕಟ್ಟೆಯಲ್ಲಿ ಷೇರು ಹಿಂಪಡೆಯುತ್ತಿರುವುದು ಸಹ ಇದಕ್ಕೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ ಎಂದು ಹೇಳಲಾಗಿದೆ.

ಇನ್ನು ರೂಪಾಯಿ ಮೌಲ್ಯ ಕುಸಿತವನ್ನು ತಡೆಯಲು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಹೆಚ್ಚಿನ ಯತ್ನ ನಡೆಸುತ್ತಿಲ್ಲ ಎನ್ನುವ ವಾದವೂ ಕೇಳಿ ಬಂದಿದೆ.