ಹಾಂಕಾಂಗ್:ಪ್ರವಾಸಿಗರ ನೆಚ್ಚಿನ ತಾಣ ಹಾಂಗ್ ಕಾಂಗ್ ನಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, 32 ಅಂತಸ್ತಿನ ಅಪಾರ್ಟ್ ಮೆಂಟ್ ನಲ್ಲಿ ಬೆಂಕಿ ಕಾಣಿಸಿಕೊಂಡು ಕನಿಷ್ಠ 44 ಮಂದಿ ಸಜೀವ ದಹನವಾಗಿದ್ದು, 300 ಕ್ಕೂ ಹೆಚ್ಚು ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ. ಈ ಬೆಂಕಿ ಆಕಸ್ಮಿಕಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ದುರಂತದ ಬಗ್ಗೆ ತೀವ್ರ ಶೋಕ ವ್ಯಕ್ತಪಡಿಸಿದ್ದು, ವಿಕೋಪವನ್ನು ತ್ವರಿತವಾಗಿ ನಿಯಂತ್ರಿಸುವಂತೆ ಆಗ್ರಹಿಸಿದ್ದಾರೆ. ಬೆಂಕಿಯನ್ನು ನಂದಿಸಲು ಮತ್ತು ಮತ್ತಷ್ಟು ಜೀವಹಾನಿಯನ್ನು ಕನಿಷ್ಠಗೊಳಿಸಲು ಎಲ್ಲ ಪ್ರಯತ್ನಗಳನ್ನು ಕೈಗೊಳ್ಳುವಂತೆ ಅಧ್ಯಕ್ಷರು ಸೂಚಿಸಿದ್ದಾಗಿ ಅಧಿಕೃತ ಮಾಧ್ಯಮ ಕ್ಸಿ ವಿವರಿಸಿದೆ.
ದುರಂತದಲ್ಲಿ 36 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಮೊದಲು ವರದಿಯಾಗಿತ್ತು. ಇದೀಗ ಸಾವಿನ ಸಂಖ್ಯೆಯನ್ನು ಪರಿಷ್ಕರಿಸಿ 44 ಎಂದು ಪ್ರಕಟಿಸಲಾಗಿದೆ.
ಈ ಬೆಂಕಿ ದುರಂತಕ್ಕೆ ಸಂಬಂಧಿಸಿದಂತೆ ಮೂವರನ್ನು ನರಹತ್ಯೆ ಸಂಶಯದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ಸೌತ್ ಚೈನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ. ಪೊಲೀಸರು ಒಂದು ಸಾಲಿನ ಹೇಳಿಕೆಯಲ್ಲಿ ಈ ಬಂಧನವನ್ನು ದೃಢಪಡಿಸಿದ್ದು, ಶಂಕಿತರ ಕ್ರಮದ ಬಗ್ಗೆ ಯಾವುದೇ ವಿವರಗಳನ್ನು ನೀಡಿಲ್ಲ. ಬಳಿಕ ಪತ್ರಿಕಾಗೋಷ್ಠಿಯಲ್ಲಿ ವಿವರಗಳನ್ನು ನೀಡುವುದಾಗಿ ಪೊಲೀಸ್ ಇಲಾಖೆ ಹೇಳಿದೆ.
ಸಾವಿನ ಸಂಖ್ಯೆ ಹೆಚ್ಚುತ್ತಿರುವುದನ್ನು ಹಾಂಕಾಂಗ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಾನ್ ಲೀ ದೃಢಪಡಿಸಿದ್ದು, ಶೋಧ ತಂಡಗಳು ನಾಪತ್ತೆಯಾಗಿರುವ ನಿವಾಸಿಗಳನ್ನು ಹುಡುಕುತ್ತಿದ್ದಾರೆ. ಭಸ್ಮವಾದ ಕಟ್ಟಡಗಳಿಂದ ದಟ್ಟ ಹೊಗೆ ಇನ್ನೂ ಹೊರಸೂಸುತ್ತಿದೆ ಎಂದು ಹೇಳಿದ್ದಾರೆ. ಮಧ್ಯಾಹ್ನ 2.51ಕ್ಕೆ ಬೆಂಕಿ ದುರಂತಕ್ಕೆ ಸಂಬಂಧಿಸಿದಂತೆ ಅಗ್ನಿಶಾಮಕ ವಿಭಾಗಕ್ಕೆ ಮೊದಲ ಕರೆ ಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಹತ್ತಾರು ಅಗ್ನಿಶಾಮಕ ಯಂತ್ರಗಳು, ಆ್ಯಂಬುಲೆನ್ಸ್ ಗಳು ಮತ್ತು ರಕ್ಷಣಾ ತಂಡಗಳನ್ನು ನಿಯೋಜಿಸಲಾಗಿದೆ. ಸುಮಾರು 2000 ಅಪಾರ್ಟ್ಮೆಂಟ್ಗಳ ನವೀಕರಣ ಕೆಲಸ ನಡೆಯುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ ಎನ್ನಲಾಗಿದೆ.
ಅಗ್ನಿಶಾಮಕ ಸಿಬ್ಬಂದಿಯಿಂದ ರಕ್ಷಣಾ ಕಾರ್ಯ ತೀವ್ರಗೊಂಡಿದೆ. ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಗಾಯಾಳುಗಳ ಪೈಕಿ ಹಲವರು ಸಾವನ್ನಪ್ಪಿದ್ದಾರೆ.
ಬಿದಿರಿನ ಸ್ಕ್ಯಾಫೋಲ್ಡಿಂಗ್ನಲ್ಲಿ ಹೊದಿಸಲಾದ 32 ಅಂತಸ್ತಿನ ಗೋಪುರಗಳಿಂದ ದಟ್ಟವಾದ ಕಪ್ಪು ಹೊಗೆ ಬರುತ್ತಿದ್ದಂತೆ, ಅಗ್ನಿಶಾಮಕ ದಳದವರು ರಾತ್ರಿಯವರೆಗೂ ಕಿತ್ತಳೆ ಬಣ್ಣದ ಜ್ವಾಲೆಗಳನ್ನು ನಂದಿಸುವಲ್ಲಿ ಯಶಸ್ವಿಯಾದರು. ಮಾರ್ಚ್ನಲ್ಲಿ ಸರ್ಕಾರ ಸುರಕ್ಷತಾ ಕಾರಣಗಳಿಗಾಗಿ ಮತ್ತು ಹಸಿರು ನಿರ್ಮಾಣ ಜಾಲರಿಯಿಂದ ಇವುಗಳ ಬಳಕೆಯನ್ನು ಹಂತಹಂತವಾಗಿ ತೆಗೆದುಹಾಕಲು ಪ್ರಾರಂಭಿಸಿತು. ಬೆಂಕಿಯ ಕಾರಣ ತಕ್ಷಣವೇ ತಿಳಿದುಬಂದಿಲ್ಲ.
ಬೆಂಕಿಯ ತೀವ್ರತೆ ಹೆಚ್ಚಿದ್ದರಿಂದ ಅಧಿಕಾರಿಗಳು ಇದನ್ನು ‘ಲೆವೆಲ್ 5 ಅಲರ್ಟ್’ ಘೋಷಿಸಿದ್ದರು. ರಾತ್ರಿಯಾದರೂ ಬೆಂಕಿ ಉರಿಯುತ್ತಲೇ ಇತ್ತು. ಸುಮಾರು 700 ಜನರನ್ನು ತಾತ್ಕಾಲಿಕ ಆಶ್ರಯ ತಾಣಗಳಿಗೆ ಸ್ಥಳಾಂತರಿಸಲಾಗಿದೆ. ಘಟನಾ ಸ್ಥಳಕ್ಕೆ 128 ಅಗ್ನಿಶಾಮಕ ವಾಹನಗಳು ಮತ್ತು 57 ಆಂಬ್ಯುಲೆನ್ಸ್ಗಳನ್ನು ರವಾನಿಸಲಾಗಿದೆ ಎಂದು ವಿದೇಶಿ ಮಾಧ್ಯಮಗಳು ವರದಿ ಮಾಡಿವೆ.


