janadhvani

Kannada Online News Paper

ಮಂಗಳೂರು ವಿಮಾನ ನಿಲ್ದಾಣ: ಪ್ರಯಾಣಿಕರ ಲಗೇಜ್ ಲೂಟಿ- ಐವರು ಆರೋಪಿಗಳ ಬಂಧನ

ಅಕ್ರಮವಾಗಿ ಲಗೇಜುಗಳನ್ನು ತೆರೆದು ಚಿನ್ನಾಭರಣಗಳು ಮತ್ತು ಮೊಬೈಲ್ ಫೋನ್‌ಗಳಂತಹ ಬೆಲೆಬಾಳುವ ವಸ್ತುಗಳನ್ನು ಕದ್ದ ಬಗ್ಗೆ ಹಿಂದೆ ಹಲವಾರು ದೂರುಗಳು ಬಂದಿವೆ.

ಮಂಗಳೂರು: ಇಲ್ಲಿನ ಬಜ್ಪೆ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರ ಟ್ರೋಲಿ ಬ್ಯಾಗ್ ತೆರೆದು 4.5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವುಗೈದಿರುವ ಪ್ರಕರಣದಲ್ಲಿ 4 ಮಂದಿ ಸಿಬ್ಬಂದಿ ಸೇರಿ ಐವರನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಏ‌ರ್ ಇಂಡಿಯಾ ಎಕ್ಸ್ ಪ್ರೆಸ್ ನ ಲೋಡಿಂಗ್ – ಅನ್ ಲೋಡಿಂಗ್ ಮಾಡುವ ಸಾಟ್ಸ್ ನೌಕರರಾದ ನಿತಿನ್, ಮೂಡುಪೆರಾರದ ನಿವಾಸಿಗಳಾದ ಸದಾನಂದ, ರಾಜೇಶ್, ಬಜ್ಪೆ ನಿವಾಸಿ ಪ್ರವೀಣ್‌ ಫೆರ್ನಾಂಡಿಸ್‌ ಮತ್ತು ಇವರಿಂದ ಚಿನ್ನಾಭರಣ ಪಡೆದುಕೊಂಡು ಚಿನ್ನದ ಗಟ್ಟಿಯಾಗಿಸಿದ್ದ ಬಜ್ಜೆ ಮೂಡುಪೆರಾರ ನಿವಾಸಿ ರವಿರಾಜ್ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸಿಆರ್‌ಪಿಎಫ್ ಜವಾನ ಹರಿಕೇಶ್ ಎಂಬವರ ಪತ್ನಿ ರಾಜೇಶ್ವರಿ ಪದ್ಮಶಾಲಿ ಅವರು ಆ.30ರಂದು ಬೆಂಗಳೂರಿನಿಂದ ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಈ ವೇಳೆ ಅವರ ಲಗೇಜ್‌ ಟ್ರೋಲಿ ಬ್ಯಾಗನ್ನು ತೆರದು 4.5 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಕಳವು ಮಾಡಲಾಗಿತ್ತು. ಈ ಸಂಬಂಧ ಅವರು ಬಜ್ಪೆ ಪೊಲೀಸರಿಗೆ ದೂರು ನೀಡಿದ್ದರು.

ದೂರು ದಾಖಲಿಸಿಕೊಂಡ ಬಜ್ಪೆ ಪೊಲೀಸ್ ನಿರೀಕ್ಷಕ ಸಂದೀಪ್‌ ಅವರು ತನಿಖೆ ಆರಂಭಿಸಿ ವಿಮಾನ ನಿಲ್ದಾಣದ ಲೋಡ್ ಮತ್ತು ಅನ್ ಲೋಡ್ ಮಾಡುತ್ತಿದ್ದ ನಾಲ್ಕು ಮಂದಿ ಸಿಬ್ಬಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಈ ವೇಳೆ ಚಿನ್ನಾಭರಣ ಕದ್ದು ಬಜ್ಪೆ ಮೂಡುಪೆರಾರ ನಿವಾಸಿ ರವಿರಾಜ್ ಎಂಬಾತನಿಗೆ ಮಾರಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ.

ಆರೋಪಿಗಳ ಹೇಳಿಕೆಯನ್ನು ಅವಲಂಬಿಸಿ ರವಿರಾಜ್ ನನ್ನು ಬಂಧಿಸಿದ ಬಜ್ಪೆ ಪೊಲೀಸರು ಆತನ ಬಳಿಯಿಂದ ಮಹಿಳೆಯ ಚಿನ್ನಾಭರಣವನ್ನು ಕರಗಿಸಿ ಮಾಡಿದ್ದ ಸುಮಾರು 5 ಲಕ್ಷ ರೂ. ಮೌಲ್ಯದ ಚಿನ್ನದ ಗಟ್ಟಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

9 ವರ್ಷಗಳಿಂದ ಏ‌ರ್ ಇಂಡಿಯಾ ಸಂಸ್ಥೆಯ ಲೋಡ್ ಅನ್ ಲೋಡ್ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿರುವ ಆರೋಪಿಗಳು 2025ರ ಜನವರಿಯಲ್ಲಿ ಪ್ರಯಾಣಿಕರೊಬ್ಬರ ಟ್ರೋಲಿ ಬ್ಯಾಗ್‌ ನಿಂದ ಕಳವುಗೈದಿದ್ದ 2 ಲಕ್ಷ ರೂ. ಪೊಲೀಸರು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಐವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ತನಿಖೆಗಾಗಿ ಪೊಲೀಸ್‌ ವಶಕ್ಕೆ ಪಡೆಯಲಾಗುವುದು. ಪ್ರಾಥಮಿಕ ತನಿಖೆಯಲ್ಲಿ ವಿಚಾರಣೆ ನಡೆಸಿದಾಗ ಆರೋಪಿಗಳು ಲಾಕ್ ಹಾಕದ, ತೆರೆದಿದ್ದ ಬ್ಯಾಗ್‌ಗಳನ್ನು ಹುಡುಕಾಟ ಮಾಡಿ ಸೊತ್ತುಗಳನ್ನು ಕಳವು ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಬ್ಯಾಗ್ ಲಾಕ್‌ನ ಸುಲಭ ಪಾಸ್‌ವಾರ್ಡ್ ಸಂಖ್ಯೆಗಳಿದ್ದಲ್ಲಿ ಪ್ರಯತ್ನಿಸಿ ಕಳವು ಮಾಡುತ್ತಿರುವುದು ವಿಚಾರಣೆ ವೇಳೆ ತಿಳಿದು ಬಂದಿದೆ. ಪ್ರಯಾಣಿಕರು ಕೂಡ ಈ ಬಗ್ಗೆ ನಿರ್ಲಕ್ಷ್ಯ ತಾಳದೆ ಎಚ್ಚರಿಕೆ ವಹಿಸುವಂತೆ ಪೊಲೀಸ್‌ ಆಯುಕ್ತರು ಸೂಚಿಸಿದ್ದಾರೆ.

ಅಕ್ರಮವಾಗಿ ಲಗೇಜುಗಳನ್ನು ತೆರೆದು ಚಿನ್ನಾಭರಣಗಳು ಮತ್ತು ಮೊಬೈಲ್ ಫೋನ್‌ಗಳಂತಹ ಬೆಲೆಬಾಳುವ ವಸ್ತುಗಳನ್ನು ಕದ್ದ ಬಗ್ಗೆ ಹಿಂದೆ ಹಲವಾರು ದೂರುಗಳು ಬಂದಿವೆ. ವಿಮಾನ ನಿಲ್ದಾಣ ಅಧಿಕಾರಿಗಳ ಮುಂದೆ ಪ್ರಯಾಣಿಕರು ಪದೇ ಪದೇ ಆಕ್ರೋಶ ವ್ಯಕ್ತಪಡಿಸಿದ್ದಾರೆ, ಆದರೆ ಕೆಲವರು ಔಪಚಾರಿಕ ಪೊಲೀಸ್ ದೂರುಗಳನ್ನು ದಾಖಲಿಸಿದ್ದಾರೆ.