janadhvani

Kannada Online News Paper

ಆಗಸ್ಟ್ 29 ರಿಂದ 31: ಅಲ್ ಮದೀನದಲ್ಲಿ ವಿಜೃಂಭಣೆಯ ವಿದ್ಯಾರ್ಥಿ ಕಲೋತ್ಸವ “ಗುಲ್ಶನ್

ಉಳ್ಳಾಲ: ಮೂರು ದಶಕಗಳ ಹಿಂದೆ, ಖ್ಯಾತ ವಿದ್ವಾಂಸ ಶರಪುಲ್ ಉಲಾಮಾ ಅಬ್ಬಾಸ್ ಮುಸ್ಲಿಯಾರ್ ರಿಂದ ಸ್ಥಾಪನೆಗೊಂಡ ಅಲ್ ಮದೀನ ಇಸ್ಲಾಮಿಕ್ ಕಾಂಪ್ಲೆಕ್ಸ್ ಮಂಜನಾಡಿ -ನರಿಂಗಾನ ಇದರ ಅಧೀನದಲ್ಲಿರುವ ವಿದ್ಯಾ ಸಂಸ್ಥೆಗಳಲ್ಲಿ ಒಂದಾಗಿದೆ ಅಲ್ ಮದೀನ ಹಿಬ್ರ್ ಹಾಲ್ ಆಫ್ ಎಕ್ಸೆಲೆನ್ಸ್. ಅರ್ಹ ವಿದ್ಯಾರ್ಥಿಗಳಿಗೆ ಉಚಿತ ಆಹಾರ -ವಸತಿಯೊಂದಿಗೆ ಧಾರ್ಮಿಕ ಶಿಕ್ಷಣದ ಜೊತೆಗೆ ಪದವಿ ಪೂರ್ವ ವಿದ್ಯಾಭ್ಯಾಸದಿಂದ ಸ್ನಾತಕೋತ್ತರ ಪದವಿ ತನಕ ಶಿಕ್ಷಣ ನೀಡುವ ಸಂಸ್ಥೆಯಿದು. ಕೇವಲ ಅಕಾಡೆಮಿಕ್ ಶಿಕ್ಷಣ ಮಾತ್ರವಲ್ಲದೆ, ಸಮಾಜದಲ್ಲಿ ಜವಾಬ್ದಾರಿಯುತ ಪ್ರಜೆಗಳಾಗಿ ಬಾಳುವ ರೀತಿಯಲ್ಲಿ ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸುವ ಹಾಗೂ ಅವರಲ್ಲಿರುವ ಕಲಾ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಕಾರ್ಯಗಳನ್ನೂ ಮಾಡುತ್ತಿದೆ.

ಈ ಮೂಲಕ ಇಲ್ಲಿ ಕಲಿತ ನೂರಾರು ವಿದ್ಯಾರ್ಥಿಗಳು ಭಾಷಣ, ಬರಹ, ಕವನ, ಗಾಯನ ಮತ್ತಿತರ ಕಲೆಗಳಲ್ಲಿ ಗುರುತಿಸುವ ಸಾಧನೆಯನ್ನು ಮಾಡಲು ಸಾಧ್ಯವಾಗಿದೆ. ವರ್ಷಂಪ್ರತಿ “ಗುಲ್ಶನ್” ಎಂಬ ಹೆಸರಲ್ಲಿ ನಡೆಯುವ ವಿದ್ಯಾರ್ಥಿಗಳ ಕಲಾ ಸಾಂಸ್ಕೃತಿಕ ಕಾರ್ಯಕ್ರಮ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ಒಂದು ಸೂಕ್ತ ವೇದಿಕೆಯಾಗಿದೆ. ಮಾತ್ರವಲ್ಲದೆ; ಇದರ ಭಾಗವಾಗಿ ಸಾಹಿತಿಗಳು, ಕವಿಗಳು ಹಾಗೂ ಕಲಾವಿದರು ಭಾಗವಹಿಸುವ ವಿವಿಧ ಕಾರ್ಯಕ್ರಮಗಳೂ ಗೋಷ್ಠಿಗಳೂ ನಡೆಯುತ್ತವೆ. ಕಲಾಪ್ರಿಯರನ್ನು ಆಕರ್ಷಿಸುವ “ಗುಲ್ಶನ್” ನ್ನು ಆಸ್ವಾದಿಸಲು ಸಾವಿರಾರು ಮಂದಿ ಅಲ್ ಮದೀನ ಕ್ಯಾಂಪಸ್ಸಿನಲ್ಲಿ ನೆರೆಯುತ್ತಾರೆ. ಈ ಬಾರಿಯ ಪ್ರಸ್ತುತ ಗುಲ್ಶನ್ ಇದೇ ಬರುವ ಆಗಸ್ಟ್ 29, 30, 31 ನೇ ದಿನಾಂಕಗಳಲ್ಲಿ ಮೂರು ದಿನಗಳ ವಿಜೃಂಭಣೆಯಿಂದ ನಡೆಯಲಿದೆ.

ಆಗಸ್ಟ್ 29 ರಂದು ಶುಕ್ರವಾರ ಸಾಯಂಕಾಲ; 3 ಗಂಟೆಗೆ ಉದ್ಘಾಟನಾ ಸಮಾರಂಭದೊಂದಿದೆ ಪ್ರಸ್ತುತ ಕಲೋತ್ಸವಕ್ಕೆ ಚಾಲನೆ ದೊರೆಯಲಿದೆ. ಅಲ್ ಮದೀನ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದಿರ್ ಸಖಾಫಿಯ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಮಾರಂಭದಲ್ಲಿ ಅಲ್ ಮದೀನಾ ಹಿಬ್ರ್ ಹಾಲ್ ಆಫ್ ಎಕ್ಸಲೆನ್ಸ್ ನ ಪ್ರಾಂಶುಪಾಲರಾದ ಸಯ್ಯದ್ ಉವೈಸ್ ಅಸ್ಸಖಾಫ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಪ್ರಾಧ್ಯಾಪಕ ಅಬ್ದುಸಲಾಂ ಅಹ್ಸನಿ ಉದ್ಘಾಟಿಸಲಿದ್ದಾರೆ.

ತದ ನಂತರ ನಡೆಯುವ ವಿಚಾರಗೋಷ್ಠಿಯಲ್ಲಿ ಖ್ಯಾತ ಚಿಂತಕ, ಸಾಹಿತಿ ಹಾಗೂ ಅಂಕಣಕಾರ ಯೋಗೇಶ್ ಮಾಸ್ಟರ್ ವಿಷಯ ಮಂಡನೆ ಮಾಡಲಿದ್ದಾರೆ. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ; ಜನಾಬ್ ಅಬ್ದುಲ್ ಲತೀಫ್ ಗುರುಪುರ, ಅಮೀನ್ ಹಾಜಿ ಎಚ್ ಎಚ್ ಕೋ, ಅಬ್ದುನ್ನಾಸಿರ್ ಗೋಲ್ಡ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ರಾತ್ರಿ 7:00 ಕ್ಕೆ ಫವಾಝ್ ಪಾಲಕ್ಕಾಡ್ ಕಲಾವಿದ ತಂಡದವರಿಂದ ಆಕರ್ಷಕ “ಇಶಲ್ ನೈಟ್” ಪ್ರಕೀರ್ತನಾ ಗಾಯನ ಕಾರ್ಯಕ್ರಮ ನಡೆಯಲಿದೆ. ಆಗಸ್ಟ್ 30 ಮತ್ತು 31 ರಂದು ‘ಇಸ್ರಾ’, ‘ಹಿಜ್ರಾ’ ಮತ್ತು ‘ಫತ್ಹ್ ‘ ಎಂಬ ಮೂರು ಪ್ರತಿಭಾ ತಂಡಗಳ ಪ್ರತಿಭಾ ಪ್ರದರ್ಶನ ನಡೆಯಲಿದೆ. ಆಗಸ್ಟ್ 31 ಸಾಯಂಕಾಲ 9:00 ಕ್ಕೆ ಸಮಾರೋಪ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.