ಮಾಣಿ : ದ್ವೇಷವನ್ನು ಬಿಟ್ಟು, ಎಲ್ಲರನ್ನೂ ಪ್ರೀತಿಸಿ ಸೌಹಾರ್ದತೆಯ ದೇಶವನ್ನು ಕಟ್ಟೋಣ ಎಂದು ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುದೀಪ್ ಕುಮಾರ್ ಶೆಟ್ಟಿ ಮಾಣಿರವರು ಹೇಳಿದರು.ಅವರು ಕರ್ನಾಟಕ ಮುಸ್ಲಿಂ ಜಮಾಅತ್, ಎಸ್‌ವೈಎಸ್ ಹಾಗೂ ಎಸ್ಸೆಸ್ಸೆಫ್ ಮಾಣಿ ಸರ್ಕಲ್ ವತಿಯಿಂದ ಆಯೋಜಿಸಿದ ದೇಶದ 79ನೇ ಸ್ವಾತಂತ್ರ್ಯದ ಪ್ರಯುಕ್ತ 2025 ಆಗಸ್ಟ್ 24 ರಂದು ಸಂಜೆ ಸೂರಿಕುಮೇರು ಸಂಜರಿ ಕಾಂಪ್ಲೆಕ್ಸ್ ನಲ್ಲಿ ನಡೆದ “ಸೌಹಾರ್ದ ಸಂಗಮ”ವಿಶಿಷ್ಟ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಬಾಲ್ಯದಲ್ಲಿ ರೂಡಿಮಾಡಿಕೊಂಡ ಸೌಹಾರ್ದತೆಯನ್ನು ಅಳಿಸಿಹಾಕಲು ಯಾವ ಕೋಮು ಶಕ್ತಿಗಳಿಗೂ ಸಾಧ್ಯವಿಲ್ಲ,ಸಾಮಾಜಿಕ ತಾಣಗಳ ಮೂಲಕ ಮತ್ತು ತರಗತಿಗಳ ಮೂಲಕ ಜನರಲ್ಲಿ ಧ್ವೇಷ ತುಂಬಿಸಿ ಅಧಿಕಾರ ಪಡೆಯಲು ಕೋಮುವಾದಿ ರಾಜಕಾರಣಿಗಳು ನಡೆಸುವ ಕುತಂತ್ರಗಳಿಗೆ ಯಾರೂ ಬಲಿಯಾಗಬಾರದು, ನಮ್ಮ ಮರಣವು ಎಲ್ಲಿ ಯಾವ ಸಮಯದಲ್ಲಿ ನಡೆಯುತ್ತದೋ ನಮಗೆ ಅರಿವಿಲ್ಲ, ನಮ್ಮ ದೇಹಕ್ಕೆ ರಕ್ತದ ಅನಿವಾರ್ಯತೆಯ ಸಂದರ್ಭದಲ್ಲಿ ನಾವು ನಮ್ಮ ಧರ್ಮ, ಜಾತಿಯ ರಕ್ತವನ್ನೇ ನೀಡಿ ಎಂದು ಬ್ಲಡ್ ಬ್ಯಾಂಕಲ್ಲಿ ಹೋಗಿ ಕೇಳಿದರೆ ಅದು ಸಿಗಲಾರದು, ಅಲ್ಲಿ ಸಿಗುವುದು ಮಾನವ ಧರ್ಮದ ರಕ್ತವಾಗಿದೆ ಎಂದು ಅವರು ಹೇಳಿದರು.
ಸೌಹಾರ್ದತೆ ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ: ಮೆಲ್ವಿನ್ ಕಿಶೋರ್ ಮಾರ್ಟಿಸ್ ನಮ್ಮ ಮಾಣಿ ಗ್ರಾಮ ಪರಿಸರದಲ್ಲಿ ಯಾರ ಮರಣನಡೆದರೂ ಏನಾದರೂ ತೊಂದರೆ ಆದರೂ ಕೂಡಲೇ ಅಲ್ಲಿಗೆ ತೆರಳಿ ನನ್ನಿಂದಾಗುವ ಸಹಾಯ ಸಲಹೆ ಸೂಚನೆ ನೀಡಿ ಬರುವ ಮೂಲಕ ಸೌಹಾರ್ದತೆ ಬೆಳೆಸುತ್ತಾ ಇರುತ್ತೇನೆ,ದೇವರು ಅದು ನನಗೆ ನೀಡಿದ ವರದಾನವಾಗಿರುತ್ತದೆ,ಎಂದು ಮಾಣಿ ಗ್ರಾಮ ಪಂಚಾಯತ್ ಸದಸ್ಯರಾದ ಮೆಲ್ವಿನ್ ಕಿಶೋರ್ ಮಾರ್ಟಿಸ್ ಹೇಳಿದರು.
ಸೌಹಾರ್ದತೆಯಿಂದ ಉತ್ತಮ ಸಮಾಜ ನಿರ್ಮಿಸೋಣ – ಬಾಲಕೃಷ್ಣ ಆಳ್ವ ಕೊಡಾಜೆ
ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿಶಿಷ್ಟ ಅತಿಥಿಗಳಲ್ಲಿ ಒರ್ವರಾದ ಮಾಣಿ ಗ್ರಾಮ ಪಂಚಾಯತ್ ಸದಸ್ಯರಾದ ಬಾಲಕೃಷ್ಣ ಆಳ್ವ ಕೊಡಾಜೆರವರು ಮಾತನಾಡಿ ಬಾಲ್ಯದ ನೆನಪುಗಳನ್ನು ಮರುಕಳಿಸುವ ಅರ್ಥಪೂರ್ಣ ಕಾರ್ಯಕ್ರಮವಾಗಿದೆ, ಹತ್ತು ತಾಯಿಯ ಮಕ್ಕಳು ಒಂದೇ ತಾಯಿಯ ಮಕ್ಕಳಂತೆ ಹಿಂದಿನಿಂದಲೂ ಬಾಳು ಬದುಕಿದ ನಾವು ಮುಂದೆಯೇ ಸೌಹಾರ್ದತೆಯಿಂದ ಬಾಳಿ ಉತ್ತಮ ಸಮಾಜವನ್ನು ನಿರ್ಮಿಸೋಣ,ಸೌಹಾರ್ದತೆ ಇಲ್ಲದಂತೆ ಮಾಡುವವರ ಕುತಂತ್ರವನ್ನು ವಿಫಲಗೊಳಿಸೋಣ ಎಂದು ಹೇಳಿದರು.
ಸೌಹಾರ್ದತೆ ಬಿಟ್ಟು ಹೋಗಲಾರದು – ಇಸ್ಮಾಯಿಲ್ ಮಾಸ್ಟರ್ ಮಂಗಳಪದವು
ಭಾರತವು ವಿವಿಧ ಸಂಸ್ಕೃತಿ, ಭಾಷೆ, ಧರ್ಮ, ಮತ, ಪಂಥಗಳನ್ನೊಳಗೊಂಡ ದೇಶವಾಗಿದೆ. ನಮ್ಮ ಹಿರಿಯರ ಸೌಹಾರ್ದಯುತ ಹಾಗೂ ಒಗ್ಗಟ್ಟಿನ ಹೋರಾಟದ ಫಲದಿಂದ ಈ ದೇಶಕ ಸ್ವಾತಂತ್ರ್ಯ ಲಭಿಸಿತು. ಹಿರಿಯರು ಕಲಿಸಿಕೊಟ್ಟ ಸೌಹಾರ್ದತೆ ಎಂದೂ ಬಿಟ್ಟು ಹೋಗಲಾರದು ಯುವಜನತೆಯಲ್ಲಿ ಬಿತ್ತಲಾಗುವ ಕೋಮು ವಿಷಬೀಜವು ದೇಶವನ್ನು ದುರ್ಬಲಗೊಳಿಸುತ್ತದೆ ಎಂದು ಕರ್ನಾಟಕ ಮುಸ್ಲಿಂ ಜಮಾಅತ್ ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ಸಂಘಟನಾ ಕಾರ್ಯದರ್ಶಿಯೂ, ಅಳಕೆಮಜಲು ಸರಕಾರಿ ಶಾಲಾ ಮುಖ್ಯೋಪಾಧ್ಯಾಯರಾದ ಇಸ್ಮಾಯಿಲ್ ಮಾಸ್ಟರ್ ಮಂಗಿಲಪದವುರವರು ಹೇಳಿದರು.
ಸೌಹಾರ್ದ ಸಂಗಮ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಮುಸ್ಲಿಂ ಜಮಾಅತ್ ಮಾಣಿ ಸರ್ಕಲ್ ಅಧ್ಯಕ್ಷರಾದ ಮೌಲಾನಾ ಇಬ್ರಾಹಿಂ ಸಅದಿ ಮಾಣಿರವರು ವಹಿಸಿ, ದುಆಃ ನೆರವೇರಿಸಿದರು. ಎಸ್‌ವೈಎಸ್ ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ಸದಸ್ಯರಾದ ಹೈದರ್ ಸಖಾಫಿ ಬುಡೋಳಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ವಿದ್ವಾಂಸರೂ, ಅಲ್ ಮುರ್ಶಿದ್ ಎಜುಕೇಶನ್ ಅಕಾಡೆಮಿಯ ಸ್ಥಾಪಕರಾದ ಅಬ್ದುಲ್ ರಝಾಕ್ ಮದನಿ ಕಾಮಿಲ್ ಸಖಾಫಿ ಸೂರಿಕುಮೇರು,ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಅಧ್ಯಕ್ಷರಾದ ಯೂಸುಫ್ ಮುಬಶ್ಶಿರ್ ಹಿಕಮಿ ಸಅದಿ ಸೂರಿಕುಮೇರು ಶುಭ ಹಾರೈಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ಇಸಾಬಾ ಕಾರ್ಯದರ್ಶಿ ಇಕ್ಬಾಲ್ ಬಪ್ಪಳಿಗೆ,ಪುತ್ತೂರು,ಬದ್ರಿಯಾ ಜುಮಾ ಮಸೀದಿ ಕೊಡಾಜೆ ಇದರ ಆಡಳಿತ ಸಮಿತಿಯ ಅಧ್ಯಕ್ಷರಾದ ಅಬ್ಬಾಸ್ ಮೆಸ್ಕಾಂ ಕೆಪಿಟಿಸಿಯಲ್,ಕಾರ್ಯದರ್ಶಿ ಶಾಹುಲ್ ಹಮೀದ್ ಪರ್ಲೋಟ್ಟು,ನಾಯಕರಾದಯೂಸುಫ್ ಹಾಜಿ ಸೂರಿಕುಮೇರು,ಹನೀಫ್ ಸಂಕ,ಅಶ್ರಫ್ ಸಖಾಫಿ ಸೂರಿಕುಮೇರು,ಸಾಜಿದ್ ಪಾಟ್ರಕೋಡಿ,ಕಾಸಿಂ ಮುಸ್ಲಿಯಾರ್ ಸೂರ್ಯ, ಅಬ್ದುಲ್ ಹಮೀದ್ ಸೂರ್ಯ, ಇಬ್ರಾಹಿಂ ನೇರ್ಲಾಜೆ, ಫಾರೂಕ್ ಶೂ ಪ್ಯಾಲೇಸ್ ಮೆಲ್ಕಾರ್,ನಿಝಾಂ ಸಅದಿ ಸೂರಿಕುಮೇರು, ಹಮೀದ್ ಮಾಣಿ,ಮೊದಲಾದವರು ಉಪಸ್ಥಿತರಿದ್ದರು. ವಿಶಿಷ್ಟ ಅತಿಥಿಗಳಿಗೆ ಸಂಘಟನೆಯ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಕರ್ನಾಟಕ ಮುಸ್ಲಿಂ ಜಮಾಅತ್ ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯೂಸುಫ್ ಸಯೀದ್ ಪುತ್ತೂರು ಸ್ವಾಗತಿಸಿದರು. ಕರ್ನಾಟಕ ಮುಸ್ಲಿಂ ಜಮಾಅತ್ ಮಾಣಿ ಸರ್ಕಲ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಕರೀಂ ನೆಲ್ಲಿ ಕಾರ್ಯಕ್ರಮ ನಿರೂಪಿಸಿದರು. ಎಸ್‌ವೈಎಸ್ ಮಾಣಿ ಸರ್ಕಲ್ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಹವ್ಯಾಸಿ ಪತ್ರಕರ್ತ ಸಲೀಂ ಮಾಣಿ ರವರು ಧನ್ಯವಾದಗೈದರು.








