janadhvani

Kannada Online News Paper

ಕಾಟಿಪಳ್ಳ: 𝗞𝗠𝗬𝗔 ಯ ಕ್ರಾಂತಿಕಾರಿ ಹೆಜ್ಜೆಗಳು

✍️ಎಂ ಹೆಚ್ ಹಸನ್ ಝುಹ್‌ರಿ, ಮಂಗಳಪೇಟೆ

ಕಾಟಿಪಳ್ಳದಿಂದ ವಿದೇಶಕ್ಕೆ ದುಡಿಯಲು ಹೋದ ಯುವಕರು ಕಟ್ಟಿಕೊಂಡ ಸಂಘಟನೆಯಾಗಿದೆ 𝗞𝗠𝗬𝗔. ಹೊಟ್ಟೆ ಪಾಡಿಗಾಗಿ, ಕುಟುಂಬ ನಿರ್ವಹಣೆ ಗಾಗಿ ವಿಮಾನ ಏರಿದಾಗ ಅವರ ಕಣ್ಣುಗಳಲ್ಲಿ ಕಣ್ಣೀರ ಹನಿಗಳಿದ್ದವು. ನೋವು ಗಳಿದ್ದವು. ಹೆತ್ತು ಹೊತ್ತವರನ್ನು, ಒಡಹುಟ್ಟಿದವರನ್ನು, ಪತ್ನಿ ಮಕ್ಕಳನ್ನು ತೊರೆದು ಹೋಗುವ ಸಂಕಟವಿದ್ದವು. ಕುಟುಂಬದವರ ಮುಖದಲ್ಲಿ ನಗುವನ್ನು ಕಾಣಲು, ಅವರ ಜೀವನ ಸುಖಮಯ ವಾಗಿರಲು ಭಾರವಾದ ಮನಸ್ಸಿನೊಂದಿಗೆ ವಿದೇಶದತ್ತ ಹೆಜ್ಜೆ ಹಾಕಿದವರು, ಕಷ್ಟ ಪಟ್ಟು ದುಡಿದು ಕೈ ತುಂಬಾ ವೇತನ ಸಿಕ್ಕಾಗ ಅವರ ಮನದಾಳದಲ್ಲಿ ಕಾಟಿಪಳ್ಳದ ನೊಂದು,ಬೆಂದವರ ನೋವುಗಳ ಚಿತ್ರಣ ಮೂಡಿ ಬಂದವು. ನಾವು ಮಾತ್ರ ಸುಖಿಗಳಾಗಿರಬಾರದು ನಮ್ಮೂರ ಅಸಹಾಯಕರು, ರೋಗಿಗಳು, ಬಡವರು, ಕಷ್ಟ ನಷ್ಟದಲ್ಲಿರುವವರು ವೇದನೆ ಉಣ್ಣಬಾರದೆಂದು ಬಯಸಿ ಅಂದಿನ ಪ್ರವಾಸಿಗಳು ಬಿತ್ತಿ ಬೆಳೆಸಿದ ಸಂಘಟನೆಯಾಗಿದೆ ಕಾಟಿಪಳ್ಳ ಮುಸ್ಲಿಂ ಯೂತ್ ಅಸೋಸಿಯೇಷನ್. ಇಂದು ಬೃಹತ್ ಹೆಮ್ಮರವಾಗಿ ಬೆಳೆದು ನಿಂತಿದೆ. ಅದರ ನೆರಳು ಕಾಟಿಪಳ್ಳದ ನೂರಾರು ಮಂದಿ ಅನುಭವಿಸಿದ್ದಾರೆ. 1989 ರ ಬಕ್ರೀದ್ ದಿನದಂದು ಕೋಬರ್ ನಲ್ಲಿ ಜನ್ಮ ತಾಳಿದ 𝗞𝗠𝗬𝗔 ಯ ಎರಡು ಕೊಂಬೆಗಳು ರಿಯಾದ್, ದಮಾಮ್ ಘಟಕಗಳಾಗಿ ಕಾಟಿಪಳ್ಳದ ಜನತೆಗೆ ಸಿಹಿಯಾದ ಹಣ್ಣುಗಳನ್ನು ನೀಡುತ್ತಿವೆ. ಕುಟುಂಬದವರನ್ನು ತೊರೆದು ಬಂದ ನೋವುಗಳನ್ನು ನುಂಗಿ, ವಿದೇಶದ ಬಿಸಿಲಿನ ತಾಪದೊಂದಿಗೆ ತ್ಯಾಗಮಯ ವಾದ ಜೀವನದಲ್ಲಿ ಸಂಪಾದಿಸಿದ ಬೆವರಿನ ಹನಿಗಳು ಕಾಟಿಪಳ್ಳದ ವ್ಯಥೆ ಪಡುವವರ ಬದುಕಿನಲ್ಲಿ ತೃಪ್ತಿಕರವಾದ ಬೆಳಕನ್ನು ಹೊತ್ತಿಸಿದೆ.

𝗞𝗠𝗬𝗔 ಯು ಮೂವತ್ತೇಳು ವರ್ಷಗಳ ಸಾರ್ಥಕ ಸೇವೆಯ ದಿನಗಳು ಕಳೆದು ಹೋದಾಗ ಅದರ ಹೆಜ್ಜೆಗಳು ಕಾಟಿಪಳ್ಳ ಜಮಾಅತ್ ನಲ್ಲಿ ಸೃಷ್ಟಿಸಿದ ಕ್ರಾಂತಿ ಅಭೂತಪೂರ್ವ ವಾಗಿದೆ. ಪಣಂಬೂರ್ ಮುಸ್ಲಿಂ ಜಮಾಅತ್ ನವರ ಪ್ರತಿಯೊಂದು ಆಗು ಹೋಗುಗಳಲ್ಲಿ 𝗞𝗠𝗬𝗔 ಪಾತ್ರ ಅವರ್ಣನೀಯ. ಮೂವತ್ತೇಳು ವರ್ಷಗಳ ಅವದಿಯಲ್ಲಿ 𝗞𝗠𝗬𝗔 ಖರ್ಚು ಮಾಡಿದ್ದು ಸರಿಸುಮಾರು ಐದು ಕೋಟಿ ಗಿಂತಲೂ ಅಧಿಕ.ಮಸೀದಿ,ಮದ್ರಸಗಳ ಏಳಿಗೆಗಾಗಿ, ಶಿಕ್ಷಣಕ್ಕಾಗಿ, ನೂರುಲ್ ಹುದಾ ಶಾಲೆಯ ಅಭಿವೃದ್ಧಿ ಗಾಗಿ,‌ಮಹಿಳಾ ಕಾಲೇಜಿಗಾಗಿ,ಬಡ ಕುಟುಂಬದ ಹೆಣ್ಣು ಮಕ್ಕಳ ಸಹಾಯಕ್ಕಾಗಿ,ಬಡವರಿಗೆ ಮಾಸಿಕ ರೇಷನ್, ನಿರ್ಗತಿಕರಿಗೆ ರಮಳಾನ್ ಕಿಟ್, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ, ಸ್ಕಾಲರ್ಶಿಫ್, ಅಸಹಾಯಕರಿಗೆ ಸಹಾಯಧನ, ಅದರ ಜೊತೆಗೆ ಹನ್ನೆರಡು ಬಡ ಯತೀಮ್ ಹೆಣ್ಣು ಮಕ್ಕಳ ವಿವಾಹವನ್ನೂ ನಡೆಸಿ ಕೊಟ್ಟಿದೆ.ಹೀಗೆ ಹಲವು ಮಜಲುಗಳಿಗೆ 𝗞𝗠𝗬𝗔 ಯ ಸಹಾಯ ವಿಸ್ತಾರಗೊಂಡಿದೆ. ನಿಸ್ವಾರ್ಥ ಮನಸ್ಸಿನ ಸೇವಕರ ಸೇವೆಯ ಕಾರಣ ಇವೆಲ್ಲವೂ ಸಾಧಿಸಲು ಸಾಧ್ಯವಾಗಿದೆ. 𝗞𝗠𝗬𝗔 ಕಟ್ಟಲು ಬೇಕಾಗಿ ಮೂವತ್ತೇಳು ವರ್ಷಗಳ ಹಿಂದೆ ಶ್ರಮ ಪಟ್ಟವರು, ಓಡಾಡಿದವರು, ದುಡಿದವರು

ಅನೇಕಾರು ಮಂದಿ. ಅವರ ಪೈಕಿ ಇಂದು ಹಲವರು ಕಬ್ರ್ ನಲ್ಲಿದ್ದಾರೆ. ಇನ್ನು ಕೆಲವರು ವಿದೇಶಕ್ಕೆ ಇತಿಶ್ರಿ ಹೇಳಿ ಊರಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಇವರ ಮನಸ್ಸುಗಳು 𝗞𝗠𝗬𝗔 ಯ ಬೆಳವಣಿಗೆ ನೋಡಿ ಸಂತೋಷ ಪಡುತ್ತಿವೆ.𝗞𝗠𝗬𝗔 ಯ ಸೇವೆಯ ಪುಣ್ಯ ಇವರ ಅಕೌಂಟಿಗೂ ಜಮೆಯಾಗುತ್ತಿದೆ. ಯುವಕರು, ಮಧ್ಯ ವಯಸ್ಕರು, ಹಿರಿಯರು 𝗞𝗠𝗬𝗔 ಜೊತೆ ಹೆಗಲು ಕೊಟ್ಟು ದುಡಿಯುತ್ತಿದ್ದಾರೆ. ನಮ್ಮೂರು ಕಾಟಿಪಳ್ಳ ಬೆಳಗಬೇಕು. ನಮ್ಮೂರ ಜನರ ಮುಖದಲ್ಲಿ ನೆಮ್ಮದಿಯ ನಗು ಕಾಣಬೇಕು. ಅದಕ್ಕಾಗಿ ಕಷ್ಟ ಪಟ್ಟು ಬಿಸಿಲ ಬೇಗೆಯಲ್ಲಿ ದುಡಿದ ಸಂಪತ್ತಿನ ಒಂದಂಶ 𝗞𝗠𝗬𝗔 ಗೆ ನೀಡುತ್ತಿದ್ದಾರೆ. ಇವರ ಈ ಕಾರ್ಯಾಚರಣೆಯ ಕಾರಣ ಹಲವು ಕುಟುಂಬಗಳು ಸುಖವನ್ನು ಉಂಡಿವೆ. ರೋಗಿಗಳ ಮುಖಗಳಲ್ಲಿ ನಗು ಮೂಡಿವೆ, ಹೆಣ್ಣು ಮಕ್ಕಳ ತಂದೆಯಂದಿರ ಮನಗಳಲ್ಲಿ ಆಹ್ಲಾದ ಬಂದಿವೆ. ಊರಿನ ಪ್ರತಿಭೆಗಳನ್ನು ಗುರುತಿಸುವುದು ಹಾಗೂ ಮದ್ರಸದ ಪಬ್ಲಿಕ್ ಪರೀಕ್ಷೆಯಲ್ಲಿ ರ‌್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಗಳಿಗೆ ಗೌರವ ಧನ ನೀಡುವುದು, ರಮಳಾನ್ ಮತ್ತು ಸ್ವಾತಂತ್ರ್ಯ ದಿನಗಳಲ್ಲಿ ಉಸ್ತಾದರುಗಳಿಗೆ ಹದಿಯಾ ನೀಡುವುದು ಮುಂತಾದ ಸಮಾಜ ಮುಖಿ ಕಾರ್ಯಕ್ರಮ ಗಳನ್ನು ನಿರಂತರವಾಗಿ 𝗞𝗠𝗬𝗔 ಹಮ್ಮಿಕೊಂಡು ಬಂದಿವೆ. ಮೂವತ್ತೇಳು ವರ್ಷಗಳ 𝗞𝗠𝗬𝗔 ಹಾದಿಗಳು ಅದ್ಭುತ ವಾದದ್ದು. ಅದನ್ನು ವರ್ಣಿಸಲು ಸಾಧ್ಯವೇ ಇಲ್ಲ. 𝗞𝗠𝗬𝗔 ಯ ಕೈಗಳು ಕಾಟಿಪಳ್ಳದ ಏಳಿಗೆಗಾಗಿ ಕೊಟ್ಟು ದಣಿದಿಲ್ಲ. ಇನ್ನೂ ಕೊಡಬೇಕೆಂಬ ಹಂಬಲ,ತುಡಿತ,ಆವೇಶಗಳು ಮಾತ್ರ ಅವರಲ್ಲಿ ತುಂಬಿ ನಿಂತಿವೆ. ಇದೀಗ ದಮಾಮ್ ಘಟಕವು PE ಮುಹಮ್ಮದ್ ಮುಸ್ತಫಾ ಅರಗ ಮತ್ತು ರಿಯಾದ್ ಘಟಕವು PS ಅಬ್ದುಲ್ ಅಝೀಝ್ ರವರ ಸಾರಥ್ಯದಲ್ಲಿ ಮುಂದುವರಿಯುತ್ತಿದೆ.

ಗತ ಕಾಲದಲ್ಲಿ 𝗞𝗠𝗬𝗔 ಗಾಗಿ ಸೇವೆ ಮಾಡಿ ನಮ್ಮನ್ನಗಲಿದವರಿಗೆ ಅಲ್ಲಾಹನು ಮಗ್ಪಿರತ್ ನೀಡಲಿ. ಗಲ್ಪ್ ತೊರೆದು ಊರಲ್ಲಿ ಬದುಕು ಕಟ್ಟಿಕೊಂಡವರಿಗೆ ಬರ್ಕತ್ ಕರುಣಿಸಲಿ. ವಿದೇಶದಲ್ಲಿ ದುಡಿಯುವ 𝗞𝗠𝗬𝗔 ಯ ಕೈ ಗಳನ್ನು ಸಮೃದ್ಧಿಯ ಮೂಲಕ ಬಲಪಡಿಸಲಿ. ತಮ್ಮವರಿಗಾಗಿ ದುಡಿದ ಸಂಪತ್ತನ್ನು ತಮ್ಮೂರಿನವರಿಗಾಗಿ ಖರ್ಚು ಮಾಡಿದ 𝗞𝗠𝗬𝗔 ಯ ಸೇವಕರಿಗೆ ದುಆ ಹೊರತು ಪಡಿಸಿ ಬೇರೆ ಯಾವ ಪ್ರತ್ಯುಪಕಾರ ಮಾಡಲು ನಮಗೆ ಸಾಧ್ಯವಿಲ್ಲ. ನಿಮ್ಮ ದುಆದ ಹಸ್ತಗಳು 𝗞𝗠𝗬𝗔 ಕಾರ್ಯಕರ್ತರಿಗಾಗಿ ತೆರೆದು ಕೊಳ್ಳಲಿ.