✍️ ಎಂ ಹೆಚ್ ಹಸನ್ ಝುಹ್‌ರಿ, ಮಂಗಳಪೇಟೆ
ಆ ಹೆಣ್ಣು ಮಗಳು ಬಿಕ್ಕಿ ಬಿಕ್ಕಿ ಅಳುತ್ತಿದ್ದಳು.ಮುಈನುಸುನ್ನ: ಮುದರ್ರಿಸ್ ಹಂಝ ಸಅದಿ ಉಸ್ತಾದರು ಕಾರಣ ಕೇಳಿದರೂ ಅವಳು ಹೇಳುವ ಸ್ಥಿತಿಯಲ್ಲಿಲ್ಲ. ಆಕೆಗೆ ಅಳು ತಡೆಯಲಾಗುತ್ತಿಲ್ಲ. ಕೊನೆಗೆ ಆಕೆ ಹಂಝ ಸಅದಿ ಯವರಲ್ಲಿ ಕೇಳಿದಳು: “ಉಸ್ತಾದ್, ನನಗೆ ಅಲ್ಲಾಹನು ಕ್ಷಮಿಸಬಹುದೇ…?” “ಅಂತಹ ತಪ್ಪು ನೀನೇನು ಮಾಡಿದೆ ?” ಹಂಝ ಸಅದಿ ಯವರ ಪ್ರಶ್ನೆಗೆ ಆಕೆ ಉತ್ತರಿಸಿದ್ದು ಹೀಗೆ. “ಉಸ್ತಾದ್, ನನ್ನ ತಾತ ಮರಣದ ಕೊನೆಯ ಕ್ಷಣವನ್ನು ಎದುರು ನೋಡುತ್ತಿದ್ದರು. ಅವರ ಅಂತಿಮ ಅಭಿಲಾಷೆ ಯಂತೆ ಅವರ ಬಾಯಿಗೆ ನಾನು ಮದ್ಯಪಾನ ಸುರಿದು ಕೊಟ್ಟೆ. ಮದ್ಯಪಾನಿಯಾಗಿಯೇ ಅವರು ಪ್ರಾಣ ಬಿಟ್ಟರು. ಅಂದು ನಾನು ಅರಿವಿಲ್ಲದವಳು. ಮದ್ಯಪಾನ ಮಹಾ ಪಾಪವೆಂದು ನಾನು ಈಗ ಕಲಿತೆನು.ನಾನು ಮಾಡಿದ ಪಾಪ ಕೃತ್ಯ ನೆನೆದು ನನಗೆ ಅಳು ತಡೆಯಲಾಗುತ್ತಿಲ್ಲ.” ಇದು ಒಂದು ಉದಾಹರಣೆ ಅಷ್ಟೇ. ಇಂತಹ ನೂರಾರು ಮಕ್ಕಳ ಕಥೆಗಳು ಮುಈನುಸುನ್ನ:ದ ಕ್ಯಾಂಪಸ್ ನೊಳಗಿದೆ. ಇಂತಹ ಮಕ್ಕಳನ್ನು ಹೆಕ್ಕಿ ತಂದು ಅವರಿಗೆ ಸಮನ್ವಯ ಶಿಕ್ಷಣ ನೀಡುತ್ತಿರುವವರು ಮುಈನುಸುನ್ನ: ಸಾರಥಿ ಮುಸ್ತಫಾ ನಈಮಿ ಉಸ್ತಾದ್. ಗದ್ದೆಯಲ್ಲಿ, ಶರಾಬು ಅಂಗಡಿಯಲ್ಲಿ, ರಸ್ತೆ ಬದಿಯಲ್ಲಿ ,ದುಡಿಮೆಯಲ್ಲಿ ಬಾಲ್ಯ ಮುಗಿದು ಹೋಗುತ್ತಿದ್ದ ಮಕ್ಕಳಿಗೆ ಅಕ್ಷರದ ಜ್ಞಾನ ತುಂಬಿದ ಕೆ ಎಂ ಮುಸ್ತಫಾ ನಈಮಿಯವರ ದಅ್‌ವಾ ಕ್ರಾಂತಿ ಕುರಿತು ನಾವು ಅರಿಯಲೇ ಬೇಕು.
ಉತ್ತರ ಕರ್ನಾಟಕ! ಬಯಲುಸೀಮೆ ಪ್ರದೇಶಗಳೇ ಅಧಿಕ. ಕೃಷಿ ಮಾಡಿ ಜೀವನ ಸಾಗಿಸುವ ಸಮೂಹ. ಶಿಕ್ಷಣ ವಂಚಿತರಾಗಿ ದುಡಿಮೆ ಮಾತ್ರ ಜೀವನ ಎಂದು ಭಾವಿಸಿದ ಜನರು. ಧಾರ್ಮಿಕ ಮತ್ತು ಲೌಕಿಕ ವಾಗಿ ತೀರಾ ಹಿಂದುಳಿದ ಪ್ರದೇಶಗಳು. ಉತ್ತರದವರ ಜೀವನ ಕಥೆಗಳನ್ನು ನೇರವಾಗಿ ಕಂಡು ಇಲ್ಲೊಂದು ಧಾರ್ಮಿಕ, ಲೌಕಿಕ ಸಮನ್ವಯ ಸಂಸ್ಥೆ ನಿರ್ಮಿಸಬೇಕೆಂದು ಹೊರಟವರು ಮುಸ್ತಫಾ ನಈಮಿಯವರು. ಅಲ್ಲಿಯ ವಾತಾವರಣ, ಆಹಾರ ಪದ್ಧತಿ, ಜೀವನ ಕ್ರಮ ಹೊಂದಾಣಿಕೆ ಯಾಗುವುದಿಲ್ಲ ಎಂದು ಅರಿವಿದ್ದರೂ ಅವರು ಉತ್ತರ ಕರ್ನಾಟಕದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಲು ಹೊರಟೇ ಬಿಟ್ಟರು. ಸುಖ ಭೋಗಗಳಿಗಿಂತ ಅವರಿಗೆ ಮುಖ್ಯವಾಗಿದ್ದು ಅಲ್ಲಿಯ ಮಕ್ಕಳ ಧಾರ್ಮಿಕ ಲೌಕಿಕ ಶಿಕ್ಷಣ ವಾಗಿತ್ತು. ಅವರು ಉತ್ತರದ ಎತ್ತರವನ್ನು ಹತ್ತಿದ್ದು ಬರಿಗೈಯಲ್ಲಿ. ಅವರ ಜೊತೆಗಿದ್ದದ್ದು ಸಯ್ಯಿದ್ ಪೊಸೋಟ್ ತಂಙಳ್ ರವರ ಆಶೀರ್ವಾದ ಮಾತ್ರವಾಗಿತ್ತು. ಅಂದವರು ಉತ್ತರದತ್ತ ಹೆಜ್ಜೆ ಇಟ್ಟಾಗ ಅವರ ಹಿಂದೆ ಜನರ ದಂಡು, ಅಭಿಮಾನಿಗಳ ಪಡೆ, ಸಂಘಟನೆಯ ಬಲ, ಅಧಿಕಾರದ ವರ್ಗದ ಬೆಂಬಲ, ಶ್ರೀಮಂತ ವಿಭಾಗದ ಆಧಾರ ಯಾವುದೂ ಇರಲಿಲ್ಲ. ಯಾರ ಆಶ್ರಯವೂ ಇಲ್ಲದೆ ಬರಿಗೈಯಲ್ಲಿ ಅವರು ಉತ್ತರದ ಬಸ್ ಹತ್ತಿದ್ದರು. ಅವರ ಗುರಿ ಒಂದೇ ಆಗಿತ್ತು.ಸಯ್ಯಿದ್ ತ್ವಾಹಿರ್ ತಂಙಳ್ ರವರಂತೆ, ಶೈಖುನಾ ಎಪಿ ಉಸ್ತಾದರಂತೆ, ನೂರುಲ್ ಉಲಮಾರಂತೆ ದೀನಿ ಸಂಸ್ಥೆ ನಿರ್ಮಿಸಬೇಕು ಆ ಮೂಲಕ ಕತ್ತಲು ತುಂಬಿದ ಉತ್ತರದ ಜನರ ಮನದಲ್ಲಿ ಸನ್ಮಾರ್ಗದ ಕಂದೀಲು ಹೊತ್ತಿಸಬೇಕು.
ಸಾವಿರ ರೂಪಾಯಿಗಳ ಬಗ್ಗೆ ಚಿಂತಿಸುವ ವಯಸ್ಸಿನಲ್ಲಿ ಕೋಟಿಗಳ ಕನಸು ಹೊತ್ತು ಸಾಗಿದ ಅವರ ಹೆಜ್ಜೆ ಗಳು ಕ್ಷೀಣಿಸಲಿಲ್ಲ. ತನ್ನ ಕನಸು ನನಸಾಗಲು ಅವರು ಉತ್ತರ ದಕ್ಷಿಣ ಎಂದು ಓಡಾಡಿದರು. ದಣಿವು,ನಿರಾಶೆ ಗಳು ಎದುರಾದರೂ ಅಲ್ಲಾಹನ ಮೇಲಿನ ಭರವಸೆಯೊಂದಿಗೆ ಅವರು ಹೆಜ್ಜೆಗಳನ್ನು ಶಕ್ತಿ ಪಡಿಸಿದರು. ಅವರ ಓಡಾಟಗಳಿಗೆ ಹತ್ತು ವರುಷಗಳು ತುಂಬಿದಾಗ ಅವರು ಹೊತ್ತಿಸಿದ ಶೈಕ್ಷಣಿಕ ಕ್ರಾಂತಿಯ ಬೆಳಕು ಉತ್ತರದವರ ಹೃದಯಗಳಲ್ಲಿ ಪ್ರಕಾಶ ಬೀರಿತ್ತು.ಮದ್ಯಪಾನವನ್ನು ಜೀವನದ ಭಾಗವಾಗಿ ಮಾಡಿ ಕೊಂಡಿದ್ದ, ಅನಾಚಾರಗಳನ್ನು ದೈನಂದಿನ ಜೀವನದಲ್ಲಿ ಅಳವಡಿಸಿದ್ದ ಸಮೂಹದ ಮಧ್ಯೆ ಜನಿಸಿದ ಮಕ್ಕಳು ಹುಸ್ನಿಗಳಾಗಿ, ಮುಈನ ಗಳಾಗಿ ಧಾರ್ಮಿಕ ಪ್ರಬೋಧನೆ ರಂಗಕ್ಕಿಳಿದಿದ್ದಾರೆ. ಇಂತಹ ಉತ್ತಮ ವಿಭಾಗವನ್ನು ಸೃಷ್ಟಿ ಮಾಡಿದ್ದರ ಹಿಂದೆ ಮುಸ್ತಫಾ ನಈಮಿ ಉಸ್ತಾದರ ಅವಿಶ್ರಾಂತ ಪರಿಶ್ರಮ ವಿದೆ.ತ್ಯಾಗಮಯವಾಗ ಜೀವನದ ಯಶೋಗಾಥೆ ಇದೆ. ವಿವರಿಸಲು ಸಾಧ್ಯವಾಗದ ನೋವುಗಳ ಕಥೆಗಳಿವೆ. ಏಕಾಂತವಾಗಿ ಹೋರಾಟಕ್ಕಿಳಿದು ಅನುಭವಿಸಿದ ಸಿಹಿ ಕಹಿಗಳ ಚರಿತ್ರೆಗಳಿವೆ.
ಯಾವ ಜಿಲ್ಲೆಯಲ್ಲಿ ದಅ್‌ವಾ ಆರಂಭಿಸಬೇಕೆಂದು ಗೊಂದಲ, ಹುಡುಕಾಟದ ನಡುವೆ ಅವರು ಆಯ್ಕೆ ಮಾಡಿಕೊಂಡದ್ದು ಸವಣೂರು ಗ್ರಾಮವನ್ನು. ನಈಮಿ ಉಸ್ತಾದರು ತನ್ನ ಕನಸಿನ ಕೂಸಿಗೆ ಹಾವೇರಿಯ ಸವಣೂನೂರಿನಲ್ಲಿಯೇ ಜನ್ಮ ಕೊಟ್ಟರು. ಸಯ್ಯಿದ್ ಪೊಸೋಟ್ ತಂಙಳ್ ರವರ ಅನುಗ್ರಹೀತ ಪಾದ ಸ್ಪರ್ಶದಿಂದ ಪುನೀತ ಗೊಂಡ ಸವಣೂರು ಗ್ರಾಮವನ್ನು ದಅ್‌ವಾದ ಕಾರ್ಯಾಚರಣೆಯ ಕೇಂದ್ರ ವಾಗಿ ಮಾಡಿಕೊಂಡರು. ಶೈಖುನಾ ಸುಲ್ತಾನುಲ್ ಉಲಮಾ, ಶೈಖುನಾ ಝೈನುಲ್ ಉಲಮಾ, ತೋಕೆ ಉಸ್ತಾದ್ ಸೇರಿದಂತೆ ಹಲವಾರು ಉಲಮಾ ನಾಯಕರುಗಳ ಆಗಮನದಿಂದ ಮುಈನುಸುನ್ನ: ಕ್ಯಾಂಪಸ್ ಧನ್ಯಗೊಂಡಿದೆ. ಹಾವೇರಿ ಜಿಲ್ಲೆಯ ಸವಣೂರುನಲ್ಲಿರುವ ಮುಈನುಸುನ್ನ: ಹತ್ತು ವರ್ಷಗಳನ್ನು ಪೂರೈಸಿ ಹನ್ನೊಂದನೇ ವರ್ಷಕ್ಕೆ ಪಾದಾರ್ಪಣೆ ಮಾಡುವಾಗ ಮೂರು ಇಂಗ್ಲಿಷ್ ಮಿಡಿಯಾ ಶಾಲೆಗಳು, ಹದಿನೈದು ಮದ್ರಸಗಳು, ಮೂರು ಮಹಿಳಾ ಕಾಲೇಜಿಗಳು, ಹುಸ್ನೀ ಶರೀಅತ್ ಕಾಲೇಜು, ನಾಲ್ಕು ನೈಸ್ ಕಿಡ್ಸ್ ತಲೆ ಎತ್ತಿ ನಿಂತಿವೆ. ಈ ಕ್ಯಾಂಪಸ್ ನೊಳಗೆ ಇಪ್ಪತ್ತಕ್ಕೂ ಮಿಕ್ಕ ಅಧ್ಯಾಪಕರು, 700 ರಷ್ಟು ವಿದ್ಯಾರ್ಥಿಗಳು, 130 ದರ್ಸ್ ಅಧ್ಯಯನ ನಡೆಸುವ ಮುತಅಲ್ಲಿಮ್ ಗಳು, 49. ವಿದ್ಯಾರ್ಥಿನಿಯರು ಇದ್ದಾರೆ. ಊಟ,ವಸತಿ ಉಚಿತವಾಗಿ ಇವರಿಗೆ ನೀಡಲಾಗುತ್ತಿದೆ. ಇದಕ್ಕಾಗಿ ತಿಂಗಳಿಗೆ ಲಕ್ಷಾಂತರ ರುಪಾಯಿ ಗಳು ಅಗತ್ಯವಿದೆ. ಎಲ್ಲವೂ ನಈಮಿ ಉಸ್ತಾದರ ಸಂಚಾರಗಳಿಂದಲೇ ಸಂಗ್ರಹಿಸಬೇಕು.
ಇದೀಗ ದೊಡ್ಡ ಯೋಜನೆಯ ಗುರಿಯೊಂದಿಗೆ ಭೂಮಿಯನ್ನು ಗೊತ್ತುಪಡಿಸಿದ್ದಾರೆ. ಭವಿಷ್ಯದ ಇನ್ನಷ್ಟು ಯೋಜನೆ ಗಳು ಅವರ ಮುಂದಿವೆ. ಅವರ ನಿರೀಕ್ಷೆ ದಾನಿಗಳು ಮಾತ್ರ. ಇಷ್ಟರ ತನಕ ಬೆನ್ನುಲುಬಾಗಿ ನಿಂತ ಸಮುದಾಯ ಎಂದೂ ಕೈ ಬಿಡಲಾರದು ಎಂಬ ಭರವಸೆ ಅವರಿಗಿದೆ. ಉತ್ತರದ ಮಕ್ಕಳ ಬಾಳಿನಲ್ಲಿ ಶಿಕ್ಷಣದ ಪ್ರಭೆ ಹೊತ್ತಿಸಬೇಕಾದದ್ದು ಅವರ ಜವಾಬ್ದಾರಿ ಮಾತ್ರವಲ್ಲ; ನಮ್ಮ ಬಾಧ್ಯತೆ ಕೂಡ. ಅವರು ಆ ದೌತ್ಯಕ್ಕೆ ಅಡಿಪಾಯ ಹಾಕಿದ್ದಾರೆ. ನಾವು ನೆರಳಾಗೋಣ,ನೆರವು ನೀಡೋಣ.







