✍️ ಎಂ ಹೆಚ್ ಹಸನ್ ಝುಹ್‌ರಿ, ಮಂಗಳಪೇಟೆ
ಮುಈನುಸುನ್ನ: ಇದರ ಸನದುದಾನ ಸಮ್ಮೇಳನ ಕಾರ್ಯಕ್ರಮಕ್ಕೆ ಭಾಗವಹಿಸಲು ತೋಕೆ ಉಸ್ತಾದರ ಜೊತೆ ಹಾವೇರಿಯ ಸವಣೂರನತ್ತ ಹೊರಟಿದ್ದೆ. ದೀರ್ಘವಾದ ಎಂಟು ಗಂಟೆಗಳ ಯಾತ್ರೆ.ಸುಬ್‌ಹಿ ನಮಾಝ್ ಮಾಡಿ ಹೊರಟ ನಾವು ಸರಿಸುಮಾರು ಎರಡು ಗಂಟೆಗೆ ಸವಣೂರು ತಲುಪಿದೆವು. ಶರೀರವು ದಣಿದಿತ್ತು. ವಿಶ್ರಾಂತಿ ಬಯಸುತ್ತಿತ್ತು. ಮೂರು ವರೆ ಗಂಟೆಗೆ ಫಿಕ್ಹ್ ತರಗತಿ ಇದೆ ಎಂದು ಉಸ್ತಾದ್ ಬರುವಾಗಲೇ ಹೇಳಿದ್ದರು. ನಮಾಝ್, ಊಟ ಮುಗಿದಾಗ ತರಗತಿಯ ಸಮಯ ವಾಗಿತ್ತು. ನನ್ನಂತೆ ಉಸ್ತಾದರಿಗೂ ಸುಸ್ತು ಆಯಾಸ ಇರಬಹುದು. ಅದರ ಜೊತೆಗೆ ತಲೆನೋವು ಕೂಡ ಉಸ್ತಾದರಿಗಿತ್ತು. ಯಾತ್ರೆಯುದ್ದಕ್ಕೂ ಉಸ್ತಾದ್ ತಲೆನೋವಿನ ಬಗ್ಗೆ ಹೇಳುತ್ತಿದ್ದರು. ತರಗತಿಯಲ್ಲಿ ಪಾಲ್ಗೊಂಡರೆ ಆಯಾಸದಿಂದ ನಿದ್ದೆ ಬರಬಹುದೇ ಎಂಬ ಆತಂಕವಿತ್ತು. ಉಸ್ತಾದರ ಕ್ಲಾಸ್ ಮಿಸ್ ಮಾಡಲು ಮನಸ್ಸಿರಲಿಲ್ಲ. ಉಸ್ತಾದರ ತರಗತಿಯಲ್ಲಿ ಭಾಗವಹಿಸಿದರೆ ಧಾರಾಳ ಇಲ್ಮ್ ಕಲಿಯಬಹುದು.ಹಾಗಾಗಿ ತರಗತಿ ಆರಂಭ ಗೊಂಡಾಗ ಹೋಗಿ ಕುಳಿತು ಕೊಂಡೆನು.ಉಸ್ತಾದರು ಯಾವುದೇ ದಣಿವು ಇಲ್ಲದೆ ಅತ್ಯಂತ ಉತ್ಸಾಹ ಮತ್ತು ಲವಲವಿಕೆಯಿಂದ ತರಗತಿ ಆರಂಭಿಸಿದರು. ಎರಡು ಗಂಟೆ ಹೇಗೆ ಮುಗಿದು ಹೋಗಿದೆ ಎಂದು ಗಮನಕ್ಕೆ ಬರಲೇ ಇಲ್ಲ. ಎಲ್ಲರ ಚಿತ್ತ ಉಸ್ತಾದರ ತರಗತಿ ಮೇಲೆಯೇ ಇತ್ತು. ಉಸ್ತಾದರ ಅರಿವು ಹರಿಯುವುದನ್ನು ಕೇಳಲು ಅದೊಂದು ಸೊಬಗು.ಉಸ್ತಾದರು ತರಗತಿ ನಿಲ್ಲಿಸಿದಾಗ ಇನ್ನೂ ಬೇಕಿತ್ತು ಎಂದು ಮನವು ಬಯಸಿತ್ತು. ಆ ರೀತಿಯಲ್ಲಿ ಉಸ್ತಾದರ ತರಗತಿ ಆವೇಶ ತುಂಬಿಸಿತ್ತು. ಕಲಿಯಲೇ ಬೇಕಾದ ಅಪಾರ ವಿಷಯಗಳು ಅವರ ತರಗತಿಯಲ್ಲಿದ್ದವು. ಸಣ್ಣ ಪುಟ್ಟ ವಿಷಯಗಳಲ್ಲಿ ಉಂಟಾಗುವ ಎಡವಟ್ಟುಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಿದ್ದರು. ಮರುದಿನ ನಡೆದ ತಖ್ಲೀದ್ ತರಗತಿಯಲ್ಲಿಯೂ ಅಧ್ಯಯನಾತ್ಮಕ ವಿಷಯಗಳನ್ನು ಮಂಡಿಸಿದ್ದರು.
ಗ್ರಂಥಗಳ ಅಧ್ಯಯನ ಮತ್ತು ಕರ್ಮಶಾಸ್ರ್ರ ವಿಧಿಗಳನ್ನು ಹೇಗೆ ಕಂಡು ಹಿಡಿಯುವುದು ಹಾಗೂ ಮದ್ಸ್‌ಹಬ್ ಮತ್ತು ತಖ್ಲೀದ್ , ಹೀಗೆ ಎರಡು ವಿಷಯಗಳ ಕುರಿತು ಬೇರೆ ಬೇರೆ ದಿನ ಗಳಲ್ಲಿ ಅಧ್ಯಯನ ತರಗತಿ ನಡೆಸಿಕೊಡಲು ಉಸ್ತಾದರಿಗೆ ತಿಳಿಸಲಾಗಿತ್ತು. ಈ ಎರಡು ತರಗತಿಗಳು ಅತ್ಯಂತ ಜಟಿಲ ವಿಷಯವಾದ ಕಾರಣ ಅದನ್ನು ಸಮಗ್ರವಾಗಿ ಮಂಡನೆ ಮಾಡಲು ಮತ್ತು ಅದರ ಬಗ್ಗೆ ಇರುವ ಸಂಶಯಗಳಿಗೆ ನಿಖರವಾದ ಉತ್ತರ ನೀಡಲು ತೋಕೆ ಉಸ್ತಾದರೇ ಸಮರ್ಥರು ಎಂದು ಉತ್ತರ ಕರ್ನಾಟಕ ಪ್ರಾಂತ್ಯದ ಜಂಇಯತುಲ್ ಉಲಮಾ ತೀರ್ಮಾನಿಸಿ ಉಸ್ತಾದರಿಗೆ ಆಹ್ವಾನ ನೀಡಲಾಗಿತ್ತು. ಉಸ್ತಾದರು ನಡೆಸಿಕೊಟ್ಟ ಎರಡೂ ತರಗತಿಗಳು ಉಸ್ತಾದರ ಅರಿವಿನ ಹರಿವು ಎಷ್ಟೊಂದು ಆಳ ವಿದೆ ಎಂಬುದಕ್ಕೆ ಸಾಕ್ಷಿಯಾಗಿತ್ತು. ಪ್ರತಿಯೊಂದು ಕರ್ಮ ಶಾಸ್ತ್ರ ಗ್ರಂಥಗಳ ಬಗ್ಗೆ ವಿವರಣೆ ನೀಡಿ ಅದರ ರಚನೆಗಾರರ ಬಗ್ಗೆ ಅವರ ಫಿಕ್ಹ್ ಪಾಂಡಿತ್ಯಗಳ, ಬುದ್ಧಿವಂತಿಕೆ ಕುರಿತು ಉಸ್ತಾದರು ವಿವರಿಸುವಾಗ ಇವುಗಳನ್ನೆಲ್ಲ ಅಧ್ಯಯನ ಮಾಡಿದ ತೋಕೆ ಉಸ್ತಾದರ ಬುದ್ಧಿ ಮತ್ತು ಅರಿವು ಎಷ್ಟಿರಬಹುದೆಂದು ಮನದಟ್ಟು ಮಾಡಬಹುದು. ಫಿಕ್ಹ್ ವಿಧಿಗಳನ್ನು ಹೇಳುವಾಗ ಸೂಕ್ಷತೆ ಪಾಲಿಸಬೇಕು ಕಂಡದ್ದೆಲ್ಲವನ್ನೂ ಇಸ್ಲಾಮಿನ ವಿಧಿ ಎಂದು ಹೇಳಬಾರದು. ಅದರ ಪೂರ್ವಪರ ಗಳನ್ನು ಅಧ್ಯಯನ ನಡೆಸಬೇಕು ಎಂದು ಚರಿತ್ರೆಗಳನ್ನು ಉಲ್ಲೇಖಿಸಿ ಅತ್ಯಂತ ಸುಂದರವಾದ ರೀತಿಯಲ್ಲಿ ವಿವರಣೆ ನೀಡಿದ ಉಸ್ತಾದರು ಫಿಕ್ಹ್‌ನ ವಿಧಿ ಹೇಳಲು ಆಳವಾದ ಸಂಶೋಧನೆ ಅಗತ್ಯವಿದೆ ಎಂದು ಪುರಾವೆಗಳ ಸಹಿತ ವಿಷಯ ಮಂಡಿಸಿದರು.
ತಖ್ಲೀದ್ ವಿಷಯದಲ್ಲಿ ಸಾಧಾರಣ ಉಲಮಾಗಳಿಗೆಯೇ ಗೊಂದಲ ಸಹಜ. ಅಂತಹ ಎಲ್ಲ ಗೊಂದಲ ಗಳಿಗೂ ಗ್ರಂಥಗಳ ಉದ್ಧರಣಿ ಮೂಲಕ ಸಂಶಯ ಬಗೆ ಹರಿಸಿದ್ದರು. ಉಲಮಾಗಳ ತರಗತಿ ಎಂದರೆ ಅಲ್ಲಿ ಎಸೆಯುವ ಪ್ರಶ್ನೆಗಳು, ಸಂದೇಹಗಳು ಅಷ್ಟೇ ತೀಕ್ಷ್ಣವಾಗಿರುತ್ತದೆ. ಕೇಳಲ್ಪಟ್ಟ ಎಲ್ಲಾ ಪ್ರಶ್ನೆ ಗಳಿಗೂ ನಿಖರವಾದ ಉತ್ತರ ನೀಡಿದ್ದರು.ಪ್ರತಿಯೊಂದು ವಿಷಯದಲ್ಲಿಯೂ ಉಸ್ತಾದರ ಜ್ಞಾನದ ಸಾಮ್ರಾಜ್ಯ ನಿಜಕ್ಕೂ ಅದ್ಭುತ. ಯಾವ ವಿಷಯ ಮಂಡಿಸಿದರೂ ಅದರ ಒಳಹೊರಗಳನ್ನು ಅತ್ಯಂತ ಲಲಿತವಾಗಿ ವಿವರಿಸುವ ಉಸ್ತಾದರ ಸಾಮರ್ಥ ಮತ್ತು ಪಾಂಡಿತ್ಯ ಉಲಮಾಗಳಲ್ಲಿಯೇ ಆಶ್ಚರ್ಯ ಹುಟ್ಟಿಸಿತ್ತು. ಉಸ್ತಾದರು ಇಷ್ಟೊಂದು ಅರಿವು ಸಂಪಾದಿಸಿದ್ದು ಹೇಗೆ ಎಂಬುದನ್ನು ಅರಿಯಲು ಅವರ ಜೀವನ ದತ್ತ ಕಣ್ಣಾಯಿಸಿದರೆ ಅರ್ಥವಾಗುತ್ತದೆ. ಹಾವೇರಿಯತ್ತ ಹೊರಟ ಉಸ್ತಾದರು ದೀರ್ಘವಾದ ಎಂಟು ಗಂಟೆಗಳ ಯಾತ್ರೆಯಲ್ಲಿ ಪೂರ್ತಿ ಗ್ರಂಥಗಳ ಅಧ್ಯಯನದಲ್ಲೇ ತಲ್ಲೀನರಾಗಿದ್ದರು.ತಲೆನೋವಾಗುತ್ತಿದೆ ಎನ್ನುತ್ತಿದ್ದ ಅವರು ರಾತ್ರಿಯೂ ವಿಶ್ರಾಂತಿ ಬಯಸದೆ, ಯಾತ್ರೆಯ ಸುಸ್ತನ್ನೂ ಪರಿಗಣಿಸದೆ ಕಿತಾಬ್ ಅಧ್ಯಯನದಲ್ಲೇ ತೊಡಗಿಸಿಕೊಂಡಿದ್ದರು. ಬೆಳಿಗ್ಗೆ ನಮಾಝ್ ಮಾಡಿ ವಿಶ್ರಾಂತಿ ಪಡೆಯುವ ಬದಲು ಆಗಲೂ ಕಿತಾಬ್ ಗಳ ಅಭ್ಯಾಸವೇ ಅವರ ವಿಶ್ರಾಂತಿ ಯಾಗಿತ್ತು. ಹೀಗೆ ಸಿಕ್ಕ ಸಮಯವನ್ನು ಅನಗತ್ಯ ವಾಗಿ ಖರ್ಚು ಮಾಡದೆ ಗ್ರಂಥಗಳ ವ್ಯಾಸಂಗಕ್ಕೆ ಮೀಸಲಿಟ್ಟ ಕಾರಣ ದಿಂದಲೇ ತೋಕೆ ಉಸ್ತಾದರು ಇಲ್ಮ್‌ನ ತೂಕವಾಗಿ ಮಾರ್ಪಟಿದ್ದಾರೆ.
ಸಮ್ಮೇಳನಗಳು ಎಂದರೆ ಸಾರ್ವಜನಿಕರು ದೊಡ್ಡ ಮಟ್ಟದಲ್ಲಿ ಸಭೆ ಸೇರುವುದೆಂದು ಎಂದು ಭಾಸವಾಗಿರುವ ಈ ಕಾಲದಲ್ಲಿ ಉಲಮಾಗಳಿಗೆ ಜ್ಞಾನ ಹೀರುವ ಅವಕಾಶ ವನ್ನು ಆಯೋಜಿಸುವ ಮೂಲಕ ಅರ್ಥ ಪೂರ್ಣ ವಾದ ರೀತಿಯಲ್ಲಿ ಸಮ್ಮೇಳನ ಆಯೋಜಿಸಿದ ಮುಈನುಸುನ್ನದ ಸಾರಥಿ, ದಅ್‌ವಾ ರಂಗದ ಕ್ರಾಂತಿ ಪುರುಷ ಮುಸ್ತಫಾ ನಈಮಿಯವರ ಪ್ರಯತ್ನ ಎಲ್ಲಾ ಸಮ್ಮೇಳನ ಗಳಿಗೂ ಮಾದರಿಯಾಗಬೇಕು.ಉತ್ತರದಲ್ಲಿ ಎತ್ತರ ವಾಗಿ ಬೆಳೆದು, ಹಾವೇರಿಯ ಸವಣೂರಿನಲ್ಲಿ ತಲೆ ಎತ್ತಿ ನಿಂತ ಮುಈನುಸುನ್ನ ಶಿಕ್ಷಣ ಕೇಂದ್ರದ ಕಥೆಗಳನ್ನು ಮುಂದೆ ಬರೆಯುತ್ತೇನೆ. ನೀವು ಓದಬೇಕು ಹಾಗೂ ಹಾವೇರಿಯತ್ತ ಒಮ್ಮೆ ಹೋಗಿ ಬರಬೇಕು. ಚಿಗುರು ಮೀಸೆ ಮೊಳಕೆ ಹೊಡೆಯುವ ಸಂದರ್ಭದಲ್ಲಿಯೇ ಉತ್ತರದತ್ತ ಹೆಜ್ಜೆ ಇರಿಸಿದ ಯುವ ವಿದ್ವಾಂಸ ಮುಸ್ತಫಾ ನಈಮಿಯವರ ಸಾಹಸದ ಹೆಜ್ಜೆ ಗಳನ್ನು, ಕೇವಲ ಹತ್ತು ವರ್ಷಗಳಲ್ಲಿ ಅವರು ಸೃಷ್ಟಿಸಿದ ಸಾಧನೆಗಳ ಶಿಖರವನ್ನು ನಾವು ತಿಳಿಯಬೇಕು.







